ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಜೂರು ಗ್ರಾಮ ಸಂಪೂರ್ಣ ‘ಸೀಲ್ಔಟ್’

* ಗ್ರಾಮಸ್ಥರಲ್ಲಿ ಹೆಚ್ಚಿದ ಕೊರೊನಾ ಆತಂಕ * ಚಳ್ಳಕೆರೆಯ ವಸತಿ ನಿಲಯದಲ್ಲಿ ಐವರಿಗೆ ಸಾಂಸ್ಥಿಕ ಕ್ವಾರಂಟೈನ್
Last Updated 17 ಏಪ್ರಿಲ್ 2020, 13:41 IST
ಅಕ್ಷರ ಗಾತ್ರ

ಚಿತ್ರದುರ್ಗ: ಜಿಲ್ಲೆಯ ಪರಶುರಾಂಪುರ ಹೋಬಳಿಯ ಜಾಜೂರು ಗ್ರಾಮದ ವ್ಯಕ್ತಿಯೊಬ್ಬರಿಗೆ ಕೊರೊನಾ ಸೋಂಕು ತಗುಲಿದೆ ಎಂಬುದಾಗಿ ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಗ್ರಾಮದ ಐದು ಕಿ.ಮೀ. ವ್ಯಾಪ್ತಿಯನ್ನು ಶುಕ್ರವಾರದಿಂದ ‘ಸೀಲ್ಔಟ್’‌ ಮಾಡಲಾಗಿದೆ.

ಗ್ರಾಮ ಪ್ರವೇಶಿಸುವ ಎಲ್ಲ ಮಾರ್ಗಗಳನ್ನು ಬೇಲಿ ಹಾಕಿ ಮುಚ್ಚಲಾಗಿದೆ. ಪೊಲೀಸ್ ಇಲಾಖೆ ಕೂಡ ಐದು ಕಿ.ಮೀ ವ್ಯಾಪ್ತಿಯ ಪ್ರದೇಶವನ್ನು ಬ್ಯಾರಿಕೇಡ್‌ನಿಂದ ಬಂದ್ ಮಾಡಿದೆ. ಆಂಧ್ರಪ್ರದೇಶದ ಗಡಿ ಭಾಗದಿಂದಲೂ ಯಾರೊಬ್ಬರು ಗ್ರಾಮ ಪ್ರವೇಶಿಸದಂತೆ ನಿರ್ಬಂಧಿಸಲಾಗಿದೆ. ಗಡಿ ಭಾಗದಲ್ಲಿ ಟ್ರಂಚ್ ತೆಗೆದು ಬಂದ್ ಮಾಡಲಾಗಿದೆ.

ಜಾಜೂರು ಗ್ರಾಮವು ಆಂಧ್ರಪ್ರದೇಶದ ಗಡಿಭಾಗಕ್ಕೆ ಹೊಂದಿಕೊಂಡಿದೆ. ಕಲ್ಯಾಣದುರ್ಗದ ಗೆಂಟಯ್ಯನದೊಡ್ಡಿ ಗ್ರಾಮದ ವೃದ್ಧೆಯೊಬ್ಬರಲ್ಲಿ ‘ಕೋವಿಡ್–19’ ದೃಢಪಟ್ಟಿದೆ. ರೋಗಿಯ ಮನೆ ಪಕ್ಕದ ಮಹಿಳೆಯೊಂದಿಗೆ ಜಾಜೂರು ಗ್ರಾಮದ ಶಂಕಿತನ ಮದುವೆಯಾಗಿತ್ತು. ಪತ್ನಿ ನೋಡಲು ಆಗಿಂದಾಗ್ಗೆ ಸಂಬಂಧಿಕರ ಮನೆಗೆ ಹೋಗಿ, ಬಂದಿದ್ದಾರೆ. ಇದರಿಂದಾಗಿ ಕೊರೊನಾ ಸೋಂಕು ತಗುಲಿರಬಹುದು ಎಂದು ಗ್ರಾಮಸ್ಥರು ಆತಂಕಗೊಂಡಿದ್ದಾರೆ.

ಆಂಧ್ರಪ್ರದೇಶಕ್ಕೆ ಹೋಗಿ ಗ್ರಾಮಕ್ಕೆ ಮರಳಿದ ಶಂಕಿತನನ್ನು ಕಂಡು ಜನರು ಭೀತಿಗೊಂಡಿದ್ದಾರೆ. ಪೊಲೀಸರು, ಆರೋಗ್ಯ ಇಲಾಖೆ ಹಾಗೂ ತಹಶೀಲ್ದಾರ್ ಗಮನಕ್ಕೆ ತಂದಿದ್ದಾರೆ. ಮೂರು ಸಾವಿರ ಜನಸಂಖ್ಯೆಯುಳ್ಳ ಜಾಜೂರು ಗ್ರಾಮದಲ್ಲಿ 750 ಮನೆಗಳಿವೆ. ಶಂಕಿತರ ಓಡಾಟದಿಂದ ಜನರು ಗಾಬರಿಗೆ ಒಳಗಾಗಿದ್ದಾರೆ. ಆದ್ದರಿಂದ ಶಂಕಿತ ವ್ಯಕ್ತಿಯ ಕುಟುಂಬ, ಸಂಪರ್ಕ ಹೊಂದಿದವರನ್ನು ಗ್ರಾಮದಿಂದ ದೂರವಿರಿಸಲು ಶುಕ್ರವಾರ ಬೆಳಿಗ್ಗೆ ಒತ್ತಾಯ ಕೂಡ ಮಾಡಿದ್ದರು.

‘ಗ್ರಾಮಸ್ಥರ ಒತ್ತಾಯದ ಮೇರೆಗೆ ಚಳ್ಳಕೆರೆ ತಾಲ್ಲೂಕಿನ ವಸತಿ ನಿಲಯವೊಂದರಲ್ಲಿ ಶಂಕಿತ, ಆತನ ಪತ್ನಿ, ಅಣ್ಣ, ಅತ್ತಿಗೆ, ಮಗು ಸೇರಿ ಐವರನ್ನು ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ಅವರೆಲ್ಲರ ಗಂಟಲು ದ್ರವ, ರಕ್ತದ ಮಾದರಿಯನ್ನು ಸಂಗ್ರಹಿಸಲಾಗಿದ್ದು, ಪರೀಕ್ಷೆಗೆ ಶಿವಮೊಗ್ಗಕ್ಕೆ ಕಳಿಸಲಾಗಿದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಪಾಲಾಕ್ಷ ತಿಳಿಸಿದ್ದಾರೆ.

‘ಜಿಲ್ಲೆಯಲ್ಲಿ ಕೋವಿಡ್–19 ದೃಢಪಟ್ಟ ಯಾವುದೇ ಪ್ರಕರಣಗಳಿಲ್ಲ. ಜಾಜೂರು ಗ್ರಾಮಸ್ಥರು ಹೆಚ್ಚು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಪರೀಕ್ಷೆ ನಂತರವೇ ಅವರಲ್ಲಿ ಸೋಂಕು ಇದೆಯೋ, ಇಲ್ಲವೋ ಎಂಬುದು ದೃಢಪಡಲಿದೆ. ಗ್ರಾಮಸ್ಥರು ಮನೆಯಲ್ಲಿಯೇ ಇರುವುದು ಉತ್ತಮ. ಹೊರಗೆ ಸಂಚರಿಸುವುದಾಗಲಿ ಅಥವಾ ಮತ್ತೊಬ್ಬರ ಮನೆಗೆ ಹೋಗುವುದಾಗಲಿ ಮಾಡಬಾರದು. ಗ್ರಾಮದ ಮೇಲೆ ಪೊಲೀಸರು ನಿಗಾ ಇಟ್ಟಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.

ಈ ಘಟನೆ ಬೆನ್ನಲ್ಲೇ ಜಾಜೂರಿನಲ್ಲೇ ಇರುವ ಕೊರೊನಾ ಶಂಕಿತನ ಸಂಬಂಧಿಯೊಬ್ಬ ವೈದ್ಯಕೀಯ ಪದವಿ ಪಡೆಯದೇ (ಆರ್‌ಎಂಪಿ) ವೈದ್ಯ ಚಿಕಿತ್ಸೆ ನೀಡುತ್ತಿದ್ದ ಎಂದು ತಿಳಿದು ಬಂದಿದೆ. ಈತನ ಬಳಿ ಆಂಧ್ರಪ್ರದೇಶದ ಅನೇಕ ಗ್ರಾಮಗಳ ಗ್ರಾಮಸ್ಥರು ಚಿಕಿತ್ಸೆ ಪಡೆಯಲು ಬರುತ್ತಿದ್ದರು. ‘ಕೋವಿಡ್–19’ ದೃಢಪಟ್ಟವರು ಚಿಕಿತ್ಸೆಗಾಗಿ ಒಂದು ವಾರದ ಹಿಂದೆ ಬಂದು ಹೋಗಿದ್ದಾರೆ ಎಂಬ ವದಂತಿ ಹರಿದಾಡುತ್ತಿದೆ. ಆರೋಗ್ಯ ಇಲಾಖೆ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿ ಎಚ್ಚರಿಕೆ ನೀಡಿದ್ದಾರೆ.

ತಹಶೀಲ್ದಾರ್ ಮಲ್ಲಿಕಾರ್ಜುನಯ್ಯ, ತಾಲ್ಲೂಕು ಆರೋಗ್ಯಾಧಿಕಾರಿ ಪ್ರೇಮ ಸುಧಾ, ಡಿವೈಎಸ್‌ಪಿ ರೋಷನ್ ಬೇಗ್, ಶ್ರೀಧರ್ ಬಾರಿಕೇರ್ ಸೇರಿ ಆರೋಗ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದರು.

ವದಂತಿ ಕಾರಣಕ್ಕೆ ಸೀಲ್‌ಔಟ್:‘ಚಳ್ಳಕೆರೆ ತಾಲ್ಲೂಕಿನ ಜಾಜೂರು ಗ್ರಾಮದಲ್ಲಿ ಕೊರೊನಾ ಸೋಂಕು ಹರಡಿದೆ ಎಂಬ ಸುಳ್ಳು ವದಂತಿ ಹಬ್ಬಿದೆ. ಈ ಕುರಿತು ಪರಿಶೀಲನೆ ನಡೆಸಿದ ನಂತರ ಇದೇ ಗ್ರಾಮದ ವ್ಯಕ್ತಿ ಮಾರ್ಚ್ 25ರಂದು ಆಂಧ್ರಪ್ರದೇಶದ ಕೋವಿಡ್–19 ದೃಢಪಟ್ಟ ಗ್ರಾಮವೊಂದಕ್ಕೆ ಭೇಟಿ ನೀಡಿದ್ದ ಎಂಬುದು ಪ್ರಾಥಮಿಕ ತನಿಖೆ ವೇಳೆ ತಿಳಿದು ಬಂದಿದೆ. ಗ್ರಾಮಸ್ಥರ ಆತಂಕದ ಹಿನ್ನೆಲೆಯಲ್ಲಿ ಗ್ರಾಮದ 5 ಕಿ.ಮೀ. ವ್ಯಾಪ್ತಿ ಪ್ರದೇಶವನ್ನು ಸೀಲ್ ಔಟ್ ಮಾಡಲಾಗಿದೆ’ ಎಂದು ಡಾ.ಪಾಲಾಕ್ಷ ಮಾಹಿತಿ ನೀಡಿದ್ದಾರೆ.

‘ಜಾಜೂರಿನ ಪ್ರಾಥಮಿಕ ಆರೋಗ್ಯ ಕೇಂದ್ರ ಮುಚ್ಚಿದ್ದೇವೆ. ಖಾಸಗಿ ವೈದ್ಯರಿಗೆ ಚಿಕಿತ್ಸೆ ನೀಡದಂತೆ ಸೂಚಿಸಿದ್ದೇವೆ. ವ್ಯಾಪಾರ ವಹಿವಾಟು ಸಂಪೂರ್ಣ ನಿಲ್ಲಿಸಲಾಗಿದೆ. ಗುರುವಾರ ರಾತ್ರಿ ಇಲಾಖೆ ಸಿಬ್ಬಂದಿ ಭೇಟಿ ನೀಡಿದ್ದರು. ಶಂಕಿತರಲ್ಲಿ ರೋಗ ಲಕ್ಷಣ ಕಾಣಿಸಿಕೊಂಡಿಲ್ಲ. ವರದಿ ಬರುವವರೆಗೂ ಕ್ವಾರಂಟೈನ್‌ನಲ್ಲಿ ಇರಲಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT