ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ | ಕೊಳಚೆ ಪ್ರದೇಶದಲ್ಲಿ ಜೆಸಿಬಿ ಸದ್ದು

13 ಅನಧಿಕೃತ ಮನೆಗಳ ತೆರವು – ಬೀದಿಗೆ ಬಿದ್ದ ಕುಟುಂಬಗಳು
Last Updated 26 ಜೂನ್ 2022, 5:21 IST
ಅಕ್ಷರ ಗಾತ್ರ

ಚಿತ್ರದುರ್ಗ: ನಗರದ ವಿಜಯ ನಗರ ಬಡಾವಣೆಯ ಘೋಷಿತ ಕೊಳಚೆ ಪ್ರದೇಶದಲ್ಲಿ ಶನಿವಾರ ಬೆಳಿಗ್ಗೆ ಜೆಸಿಬಿಗಳು ಸದ್ದು ಮಾಡಿದ್ದು, ಲೋಕಾಯುಕ್ತ ನ್ಯಾಯಾಲಯದ ಆದೇಶದಂತೆ ನಗರಸಭೆ 13 ಮನೆಗಳನ್ನು ತೆರವುಗೊಳಿಸಿತು.

ನೋಟಿಸ್‌ ನೀಡಿ ಗುರುತು ಮಾಡಿದ್ದ ಮನೆಗಳ ಮಾಲೀಕರಿಗೆ ವಾರದಿಂದ ತೆರವು ಕಾರ್ಯದ ಬಗ್ಗೆ ಅಧಿಕಾರಿಗಳು ತಿಳಿಸಿದ್ದರು. ಅದರಂತೆ ಬೆಳಿಗ್ಗೆ 7ರ ಸುಮಾರಿಗೆ ಪೊಲೀಸ್‌ ಭದ್ರತೆಯಲ್ಲಿ ಜೆಸಿಬಿಗಳೊಂದಿಗೆ ನಗರಸಭೆ ಅಧಿಕಾರಿಗಳ ತಂಡ ಸ್ಥಳಕ್ಕೆ ಬಂದರೂ ಅಲ್ಲಿದ್ದವರು ಮನೆಗಳನ್ನು ಖಾಲಿ ಮಾಡಿರಲಿಲ್ಲ. ಸ್ಥಳವನ್ನು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.

ಸ್ಥಳದಲ್ಲಿದ್ದ ಅಧಿಕಾರಗಳ ತಂಡ ಪುನಃ ಆದೇಶದ ಮನವರಿಕೆ ಮಾಡಿ ಸಾಮಗ್ರಿಗಳನ್ನು ಹೊರಗಡೆ ಸಾಗಿಸಿ ಎಂದು ಸೂಚಿಸಿದರು. ಈ ವೇಳೆ ಕೆಲವರು ‘ಮೊದಲು ನಮಗೆ ಮನೆ ನೀಡಿ, ಬಳಿಕ ಖಾಲಿ ಮಾಡುತ್ತೇವೆ’ ಎಂದು ಹಠಕ್ಕೆ ಬಿದ್ದರು. ಯಾವ ಮಾತನ್ನು ಕೇಳದ ಸಿಬ್ಬಂದಿ ಮನೆಗಳನ್ನು ಖಾಲಿ ಮಾಡಿಸಿದರು.

ಕೆಳಗೋಟೆ ಗ್ರಾಮದ ಸರ್ವೆ ನಂಬರ್‌ 31ರಲ್ಲಿರುವ ನಗರದ 19ನೇ ವಾರ್ಡ್‌ ವ್ಯಾಪ್ತಿಯಲ್ಲಿರುವ ವಿಜಯನಗರ ಬಡಾವಣೆಯ 1.02 ಎಕರೆ ಜಾಗವನ್ನು ಸರ್ಕಾರ 2012ರಲ್ಲಿ ಕೊಳಚೆ ಪ್ರದೇಶವೆಂದು ಘೋಷಣೆ ಮಾಡಿತ್ತು. ಈ ಜಾಗದಲ್ಲಿ ಏಳೆಂಟು ಅಡಿ ಎತ್ತರದ ಚಿಕ್ಕ ಚಿಕ್ಕ ಮನೆಗಳನ್ನು ನಿರ್ಮಿಸಿಕೊಂಡು 30 ವರ್ಷಗಳಿಂದ 168 ಕುಟುಂಬಗಳು ಜೀವನ ಸಾಗಿಸುತ್ತಿವೆ. ಕೊಳಚೆ ಪ್ರದೇಶಕ್ಕೆ ಹೊಂದಿಕೊಂಡಿರುವ ವಿಜಯನಗರ ಬಡಾವಣೆ ನಿವಾಸಿಗಳು ಬಡಾವಣೆಗೆ ರಸ್ತೆ ಸಂಪರ್ಕ ಕಲ್ಪಿಸಿ ಎಂದು ಲೋಕಾಯುಕ್ತ ನ್ಯಾಯಾಲಯದ ಮೊರೆ ಹೋಗಿದ್ದರು. ಕೂಲಿಯನ್ನು ನಂಬಿ ಜೀವನ ನಡೆಸುತ್ತಿರುವ ಈ ನಿವಾಸಿಗಳು ಹಕ್ಕುಪತ್ರ ಹೊರತುಪಡಿಸಿ ಪಡಿತರ ಚೀಟಿ, ಮತದಾರರ ಕಾರ್ಡ್‌ ಹೊಂದಿದ್ದಾರೆ. ಆದರೆ ಕಳೆದ ಒಂದು ವರ್ಷದಿಂದ ನೆಮ್ಮದಿ ಕಳೆದುಕೊಂಡಿದ್ದರು.

‘ನೆಲ ಕಳೆದು ಕೊಳ್ಳುವ ಭೀತಿಯಲ್ಲಿ ಸಾಕಷ್ಟು ಬಾರಿ ನಗರಸಭೆ, ಜಿಲ್ಲಾಡಳಿತಕ್ಕೆ ಇಲ್ಲಿಯ ನಿವಾಸಿಗಳು ಮನವಿ ಸಲ್ಲಿಸಿದ್ದರು. ತೆರವಿಗೂ ಮುನ್ನವೇ ವ್ಯವಸ್ಥೆ ಕಲ್ಪಿಸುತ್ತೇವೆ ಎಂದು ನಗರಸಭೆ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ ತೆರವು ಕಾರ್ಯಕ್ಕೂ ಮುನ್ನ ನಗರಸಭೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸದ ಕಾರಣ ಚಿಕ್ಕ ಸೂರನ್ನು ಕಳೆದುಕೊಂಡ 13 ಕುಟುಂಬಗಳು ಬೀದಿಗೆ ಬಿದ್ದಿವೆ’ ಎಂದು ಮಹಿಳೆಯರು ಕಣ್ಣೀರಿಟ್ಟರು.

ಮನೆಗಳ ಹೆಂಚುಗಳನ್ನು ಪೌರ ಕಾರ್ಮಿಕರು ಒಂದೆಡೆ ಅಚ್ಚುಕಟ್ಟಾಗಿ ಜೋಡಿಸಿ ಬಡವರಿಗೆ ನೆರವಾದರು. ಇತ್ತ ನಿವಾಸಿಗಳು ಮನೆಯಲ್ಲಿನ ಪಾತ್ರೆ, ಬೀರು, ಹೊದಿಕೆಗಳನ್ನು ಮನೆಗಳಿಂದ ಹೊರತಂದು ರಸ್ತೆ ಬದಿ ಜೋಡಿಸುತ್ತಿದ್ದ ದೃಶ್ಯ ಕಂಡು ಬಂದಿತು. ಮುಂದೇನು ಎಂಬ ಆತಂಕದ ಛಾಯೆ ನಿವಾಸಿಗಳ ಮನದಲ್ಲಿ ಕವಿದಿತ್ತು.

**
ದಿನದ ದುಡಿಮೆ ನಂಬಿ ಬದುಕುತ್ತಿರುವ ನಮ್ಮನ್ನು ಬೀದಿಗೆ ತಳ್ಳಿದ್ದಾರೆ. ಮನೆಗಳನ್ನು ವಿತರಿಸಿದ್ದರೆ ನಾವೇ ಖಾಲಿ ಮಾಡುತ್ತಿದ್ದೆವು. ವೃದ್ಧರು, ಮಕ್ಕಳನ್ನು ಕರೆದುಕೊಂಡು ಎಲ್ಲಿಗೆ ಹೋಗಬೇಕು.
– ಇಮಾಮ್‌ ಸಾಬ್‌, ಕೊಳೆಗೇರಿ ನಿವಾಸಿ

**

ಘೋಷಿತ ಕೊಳಚೆ ಪ್ರದೇಶದ 1.02 ಎಕರೆ ಗಡಿಯನ್ನು ಗುರುತಿಸಿ ಉಳಿದ ಭಾಗದಲ್ಲಿಯ ಅನಧಿಕೃತ ಮನೆಗಳನ್ನು ಲೋಕಾಯುಕ್ತ ನ್ಯಾಯಾಲಯದ ಆದೇಶದಂತೆ ತೆರವುಗೊಳಿಸಲಾಗಿದೆ. ನೆಲೆ ಕಳೆದುಕೊಂಡವರಿಗೆ ಮೇದೆಹಳ್ಳಿ ಬಳಿ ಮನೆಗಳನ್ನು ನಿರ್ಮಿಸಿ ಹಸ್ತಾಂತರಿಸಲಾಗುತ್ತದೆ.
- ಹನುಮಂತರಾಜು, ಆಯುಕ್ತ, ನಗರಸಭೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT