ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಲೆ ಏರಿಕೆ ವಿರೋಧಿಸಿ ಪ್ರತಿಭಟನೆ

ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ ಜೆಡಿಎಸ್‌ ಮುಖಂಡರು, ಕಾರ್ಯಕರ್ತರು
Last Updated 25 ಜೂನ್ 2021, 13:47 IST
ಅಕ್ಷರ ಗಾತ್ರ

ಚಿತ್ರದುರ್ಗ: ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ಬೆಲೆ ಏರಿಕೆ ಮಾಡುವ ಮೂಲಕ ಜನಸಾಮಾನ್ಯರ ಮೇಲೆ ಸರ್ಕಾರಗಳು ಸವಾರಿ ನಡೆಸುತ್ತಿವೆ ಎಂದು ಆರೋಪಿಸಿ ಜೆಡಿಎಸ್‌ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಬೆಲೆ ಏರಿಕೆ ಖಂಡಿಸಿ ಜೆಡಿಎಸ್‌ ಕಚೇರಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಆಕ್ರೋಶ ಹೊರಹಾಕಿದರು. ನಿಜವಾಗಿಯೂ ಜನಪರ ಕಾಳಜಿ ಇದ್ದರೆ, ಏರಿಕೆಯಾದ ಬೆಲೆಗಳನ್ನು ಕೂಡಲೇ ಇಳಿಸಬೇಕು ಎಂದು ಜಿಲ್ಲಾಧಿಕಾರಿ ಮೂಲಕ ಸರ್ಕಾರಗಳಿಗೆ ಮನವಿ ರವಾನಿಸಿದರು.

ಪಕ್ಷದ ಜಿಲ್ಲಾ ಅಧ್ಯಕ್ಷ ಡಿ.ಯಶೋಧರ, ‘ಅಭಿವೃದ್ಧಿ, ಉದ್ಯೋಗ, ಯುವಸಮೂಹಕ್ಕೆ ಉಜ್ವಲ ಭವಿಷ್ಯ, ವಿದೇಶಗಳಲ್ಲಿನ ಕಪ್ಪು ಹಣ ವಾಪಾಸಾತಿ, ಬಲಿಷ್ಠ ಭಾರತ ಸೇನೆ ನಿರ್ಮಿಸುವುದು ಸೇರಿ ಭಾವನಾತ್ಮಕ ವಿಚಾರದೊಂದಿಗೆ ಅಧಿಕಾರಕ್ಕೆ ಬಂದ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಏಳು ವರ್ಷಗಳಿಂದಲೂ ಜನಪರ ಆಡಳಿತ ನೀಡಿಲ್ಲ. ಬದಲಿಗೆ ಗಾಯದ ಮೇಲೆ ಬರೆ ಎಳೆದಿದೆ’ ಎಂದು ದೂರಿದರು.

‘ಮೋದಿ ಅವರು ಭ್ರಮೆಗಳೆಂಬ ಬೀಜ ಬಿತ್ತಿ ಲೋಕಕಲ್ಯಾಣ ಮಾಡುತ್ತೇವೆ ಎನ್ನುತ್ತಿದ್ದಾರೆಯೇ ಹೊರತು ಯಾವುದು ಸಾಕಾರಗೊಂಡಿಲ್ಲ. ಇನ್ನೂ ಅನೈತಿಕವಾಗಿ ಜನ್ಮತಳೆದ ರಾಜ್ಯ ಸರ್ಕಾರದಿಂದಲೂ ಯಾವುದೇ ಅಭಿವೃದ್ಧಿ ಕಾರ್ಯ ಆಗುತ್ತಿಲ್ಲ. ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗುತ್ತಿದ್ದರು ಕಡಿವಾಣಕ್ಕೆ ಮುಂದಾಗುತ್ತಿಲ್ಲ. ಈ ಸರ್ಕಾರಗಳ ಹೊಣೆಗೇಡಿತನದಿಂದ ಕೋವಿಡ್‌ ನಿಯಂತ್ರಿಸಲು ಸಾಧ್ಯವಾಗಲಿಲ್ಲ’ ಎಂದು ಆರೋಪಿಸಿದರು.

ಗಗನಕ್ಕೆ ಏರಿರುವ ರಸಗೊಬ್ಬರ ಬೆಲೆಯನ್ನು ಶೀಘ್ರವೇ ಕಡಿಮೆ ಮಾಡಬೇಕು. ದುಬಾರಿಯಾಗಿರುವ ವಿದ್ಯುತ್ ದರವನ್ನು ಇಳಿಸಬೇಕು. ದಿನಸಿ ಸೇರಿ ನಿತ್ಯ ಉಪಯೋಗಿಸುವ ಅಗತ್ಯ ವಸ್ತುಗಳ ಬೆಲೆ ಹೆಚ್ಚುತ್ತಲೇ ಇದ್ದು, ಅದಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.

ಕೋವಿಡ್‌ನಿಂದ ಮೃತಪಟ್ಟವರ ಕುಟುಂಬಕ್ಕೆ ಕನಿಷ್ಠ ₹ 5 ಲಕ್ಷ ಪರಿಹಾರ ನೀಡಬೇಕು. ಬಯಲುಸೀಮೆಯ ಬಹುದಿನದ ಬೇಡಿಕೆಯಾದ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂಬುದಾಗಿ ಅಧಿಕೃತವಾಗಿ ಘೋಷಿಸಬೇಕು. ಅದಕ್ಕೆ ಬೇಕಾಗುವ ಅನುದಾನ ಬಿಡುಗಡೆ ಮಾಡಿ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸುವ ಮೂಲಕ ಈ ಭಾಗದ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ಸರ್ಕಾರಕ್ಕೆ ಕೋರಿದರು.

‘ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ವ್ಯವಸ್ಥೆಯ ಹೊಣೆ ಹೊತ್ತಿರುವ ಬಿಜೆಪಿ ನೇತೃತ್ವದ ಎರಡೂ ಸರ್ಕಾರಗಳು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿವೆ. ಕೋವಿಡ್‌ ನಿಯಂತ್ರಿಸಲು ಜಾರಿಗೊಳಿಸಿದ ಲಾಕ್‌ಡೌನ್‌ ಅವಧಿಯಲ್ಲೇ ಬೆಲೆ ಏರಿಕೆ ಮಾಡಿ ಜನರನ್ನು ಮತ್ತಷ್ಟು ಹೈರಾಣು ಮಾಡಿವೆ’ ಎಂದು ಯಶೋಧರ ಅಸಮಧಾನ ವ್ಯಕ್ತಪಡಿಸಿದರು.

‘ಬೆಲೆ ಏರಿಸುವ ವಿಚಾರದಲ್ಲಿ ಪೈಪೋಟಿಗೆ ಇಳಿದಿವೆ. ಜನರ ಜೇಬಿಗೆ ಕತ್ತರಿ ಹಾಕುವ ಮೂಲಕ ಜೀವನದ ಜತೆ ಚೆಲ್ಲಾಟ ಆಡುತ್ತಿರುವುದು ಖಂಡನೀಯ. ಆದ್ದರಿಂದ ದರ ಇಳಿಸುವ ಮೂಲಕ ಜನಪರ ಆಡಳಿತ ನೀಡುವ ನಿಟ್ಟಿನಲ್ಲಿ ಕೊಟ್ಟ ಮಾತು ಉಳಿಸಿಕೊಳ್ಳಬೇಕು’ ಎಂದು ಒತ್ತಾಯಿಸಿದರು.

ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜ್, ಜೆಡಿಎಸ್‌ನ ಮುಖಂಡರಾದ ಗೋಪಾಲಸ್ವಾಮಿ ನಾಯಕ, ಪ್ರತಾಪ್‌ ಜೋಗಿ, ಸಣ್ಣತಿಮ್ಮಪ್ಪ, ಎಂ.ಜಯಣ್ಣ, ಜೆ.ಬಿ.ಶೇಖರ್, ಎಚ್.ವೀರಣ್ಣ, ಪಿ.ತಿಪ್ಪೇಸ್ವಾಮಿ, ಪಟೇಲ್ ತಿಪ್ಪೇಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT