ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷಕ್ಕೆ ಶಕ್ತಿ ತುಂಬಿದ ಜೋಡೊ ಯಾತ್ರೆ: ಮಧು ಬಂಗಾರಪ್ಪ

ಕೆಪಿಸಿಸಿ ಒಬಿಸಿ ವಿಭಾಗದ ಅಧ್ಯಕ್ಷ ಮಧು ಬಂಗಾರಪ್ಪ ಹೇಳಿಕೆ
Last Updated 2 ನವೆಂಬರ್ 2022, 7:00 IST
ಅಕ್ಷರ ಗಾತ್ರ

ಚಿತ್ರದುರ್ಗ: ಕಾಂಗ್ರೆಸ್ ನಾಯಕ‌ ರಾಹುಲ್ ಗಾಂಧಿ ನೇತೃತ್ವದಲ್ಲಿ ರಾಜ್ಯದಲ್ಲಿ ನಡೆದ ‘ಭಾರತ್ ಜೋಡೊ’ ಯಾತ್ರೆ ಪಕ್ಷಕ್ಕೆ ಶಕ್ತಿ ತುಂಬಿದೆ. ರಾಜ್ಯ ಮತ್ತು ದೇಶಕ್ಕೆ ಕಾಂಗ್ರೆಸ್ ಅನಿವಾರ್ಯ ಎಂಬುದು ಜನರಿಗೆ ಮನವರಿಕೆ ಆಗುತ್ತಿದೆ ಎಂದು ಕೆಪಿಸಿಸಿ ಒಬಿಸಿ ವಿಭಾಗದ ಅಧ್ಯಕ್ಷ ಎಸ್. ಮಧು ಬಂಗಾರಪ್ಪ ಅಭಿಪ್ರಾಯಪಟ್ಟರು.

‘ಕೇರಳ, ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಯಾತ್ರೆಗೆ ಅದ್ಭುತ ಜನಬೆಂಬಲ ಸಿಗುತ್ತಿದೆ. ರಾಜ್ಯದಲ್ಲಿ ನಿರೀಕ್ಷೆ ಮೀರಿ ಜನರು ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ತಾರತಮ್ಯ ನಿವಾರಣೆ, ಮಾನವೀಯತೆಗೆ ನಡೆದ ಯಾತ್ರೆ ಜನರಲ್ಲಿ ಹಲವು ಭರವಸೆಗಳನ್ನು ಮೂಡಿಸಿದೆ. ಪಕ್ಷದಲ್ಲಿ ಸಂಚಲನ ಉಂಟು ಮಾಡಿದ್ದು, ಚುನಾವಣೆಯಲ್ಲಿ ಇನ್ನಷ್ಟು ಕಾಂಗ್ರೆಸ್‌ ಅಭ್ಯರ್ಥಿಗಳು ಆಯ್ಕೆಯಾಗಲು ಇದು ನೆರವಾಗಲಿದೆ’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಪ್ರತಿಪಾದಿಸಿದರು.

‘ರಾಹುಲ್‌ ಗಾಂಧಿ ಅವರ ಬಗ್ಗೆ ಅಪಪ್ರಚಾರ ಮಾಡಲು ಬಿಜೆಪಿ ರೂಪಿಸಿದ ಷಡ್ಯಂತ್ರ ಜನರಿಗೆ ಅರ್ಥವಾಗಿದೆ. ಸಾಮಾಜಿಕ ಜಾಲತಾಣವನ್ನು ಉಪಯೋಗಿಸಿಕೊಂಡು ತಪ್ಪು ಮಾಹಿತಿ ಹಂಚಲು ಸಾವಿರಾರು ಕೋಟಿ ವಿನಿಯೋಗ ಮಾಡಿದ್ದು ಗುಟ್ಟಾಗಿ ಉಳಿದಿಲ್ಲ. ರಾಜಕೀಯವನ್ನು ಅತ್ಯಂತ ಕೀಳು ಮಟ್ಟಕ್ಕೆ ಇಳಿಸಿದ ಬಿಜೆಪಿಗೆ ಪಾದಯಾತ್ರೆಯ ಮೂಲಕ ರಾಹುಲ್‌ ಗಾಂಧಿ ತಕ್ಕ ಉತ್ತರ ನೀಡಿದ್ದಾರೆ. ಯಾತ್ರೆ ಅಂತ್ಯವಾಗುವ ಹೊತ್ತಿಗೆ ರಾಹುಲ್‌ ಬಗ್ಗೆ ಇದ್ದ ತಪ್ಪು ಕಲ್ಪನೆಗಳು ಕಳಚಿ ಬೀಳಲಿವೆ’ ಎಂದು ಹೇಳಿದರು.

‘ಧರ್ಮ, ಜಾತಿ ಆಧಾರದ ಮೇರೆಗೆ ಜನರನ್ನು ವಿಭಜಿಸಿ ರಾಜಕೀಯ ಮಾಡುವುದು ಬಿಜೆಪಿ ತಂತ್ರಗಾರಿಕೆ. ಇದರಿಂದ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯನ್ನು ಗಮನಿಸಿದರೆ ಇದು ಅರ್ಥವಾಗುತ್ತದೆ. ಸಂಘಪರಿವಾರದ ಸಂಘಟನೆಗಳೇ ಬಿಜೆಪಿ ನಾಯಕರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಅವರಲ್ಲಿ ನಿಜಕ್ಕೂ ದೇಶಭಕ್ತಿ ಇದ್ದರೆ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕು’ ಎಂದರು.

‘ಬಿಜೆಪಿ ಜನಪರ ಆಡಳಿತ ನೀಡುವುದನ್ನು ಬಿಟ್ಟು ವಿವಾದಗಳನ್ನು ಸೃಷ್ಟಿಸುತ್ತಿದೆ. ತಾಕತ್ತು, ಧಮ್ಮು ಎಂಬಂತಹ ಪದಗಳನ್ನು ಮುಖ್ಯಮಂತ್ರಿ ಪದೇ ಪದೇ ಉಚ್ಚರಿಸಿ ಹುದ್ದೆಯ ಘನತೆಯನ್ನು ಹಾಳು ಮಾಡುತ್ತಿದ್ದಾರೆ. ಭ್ರಷ್ಟಾಚಾರ ಎಲ್ಲೆಡೆ ತಾಂಡವಾಡುತ್ತಿದೆ. ಅಭಿವೃದ್ಧಿ ಕಾಮಗಾರಿಗಳಿಗೆ ಬಿಡುಗಡೆಯಾಗುವ ಅನುದಾನದಲ್ಲಿ ಶೇ 40ರಷ್ಟು ಲಂಚ ಪಡೆಯುತ್ತಿರುವ ಬಿಜೆಪಿ ಶಾಸಕರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೌನ ವಹಿಸಿದ್ದಾರೆ’ ಎಂದು ಆರೋಪಿಸಿದರು.

ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ. ತಾಜ್‌ಪೀರ್‌, ಕಾರ್ಯಾಧ್ಯಕ್ಷ ಕೆ.ಎಂ. ಹಾಲಸ್ವಾಮಿ, ಶಾಸಕ ಟಿ. ರಘುಮೂರ್ತಿ, ಮಾಜಿ ಶಾಸಕ ಉಮಾಪತಿ, ವಿಧಾನ ಪರಿಷತ್‌ ಮಾಜಿ ಸದಸ್ಯೆ ಜಯಮ್ಮ ಬಾಲರಾಜ್‌, ಮುಖಂಡರಾದ ಕುಮಾರಗೌಡ, ಎನ್‌.ಡಿ.ಕುಮಾರ್‌ ಇದ್ದರು.

ಒಬಿಸಿ ವಿಭಾಗ ಪುನರ್‌ ರಚನೆ

ರಾಜ್ಯದ ಎಲ್ಲ ಜಿಲ್ಲೆಯ ಕಾಂಗ್ರೆಸ್‌ ಒಬಿಸಿ ಘಟಕಗಳನ್ನು ವಿಸರ್ಜನೆ ಮಾಡಲಾಗಿದೆ. ಅರ್ಹ ಹಾಗೂ ಸಕ್ರಿಯ ಕಾರ್ಯಕರ್ತರ ಪಡೆಯೊಂದಿಗೆ ಶೀಘ್ರದಲ್ಲೇ ಪುನರ್‌ ರಚನೆ ಮಾಡಲಾಗುವುದು ಎಂದು ಎಸ್‌. ಮಧು ಬಂಗಾರಪ್ಪ ಮಾಹಿತಿ ನೀಡಿದರು.

‘ಪಕ್ಷದ ನಾಯಕರ ಸೂಚನೆಯ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಕ್ರಿಯೆ ಕಾರ್ಯಕರ್ತರನ್ನು ವಿಭಾಗಕ್ಕೆ ನೇಮಕ ಮಾಡುವ ಹೊಣೆಯನ್ನು ಜಿಲ್ಲಾ ಮಟ್ಟದ ನಾಯಕರಿಗೆ ನೀಡಲಾಗಿದೆ. ಎರಡು ವಾರಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದ್ದು, ಸಮಾವೇಶ ಸಂಘಟನೆಗೆ ಅನುಕೂಲವಾಗಲಿದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT