ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೀರ್ಪು ನಮ್ಮದು, ನ್ಯಾಯ ದೇವರದು: ನ್ಯಾಯಾಧೀಶ ಸಿ.ಎಸ್‌.ಜೀತೇಂದ್ರನಾಥ ಅಭಿಮತ

Last Updated 20 ಅಕ್ಟೋಬರ್ 2019, 12:52 IST
ಅಕ್ಷರ ಗಾತ್ರ

ಚಿತ್ರದುರ್ಗ: ನ್ಯಾಯಾಲಯದ ಮೆಟ್ಟಿಲೇರುವ ಪ್ರಕರಣಗಳ ವಿಚಾರಣೆ ನಡೆಸಿ ತೀರ್ಪು ನೀಡುವುದು ಮಾತ್ರ ನ್ಯಾಯಾಧೀಶರ ಕೆಲಸ. ನ್ಯಾಯ ನೀಡುವುದು ದೇವರು ಎಂದು ಒಂದನೇ ಹೆಚ್ಚು ಹಿರಿಯ ಸಿವಿಲ್‌ ನ್ಯಾಯಾಧೀಶ ಸಿ.ಎಸ್‌.ಜೀತೇಂದ್ರನಾಥ ಅಭಿಪ್ರಾಯಪಟ್ಟರು.

ಇಲ್ಲಿನ ಅಯ್ಯಣ್ಣಪೇಟೆಯ ವಾಸವಿ ವಿದ್ಯಾಸಂಸ್ಥೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಶಾಂತಿನಿಕೇತನ ಹಾಗೂ ರೆಡ್‌ ಬುಲ್ಸ್‌ ಸಂಸ್ಥೆ ‘ಪೋಷಕರು ಮತ್ತು ಹಿರಿಯ ನಾಯಕರಿಕರ ಕಾಯ್ದೆ’ ಬಗ್ಗೆ ಭಾನುವಾರ ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಅನಾರೋಗ್ಯದಿಂದ ಬಳಲುವ ವ್ಯಕ್ತಿಗೆ ವೈದ್ಯ ಔಷಧ ಮಾತ್ರ ನೀಡುತ್ತಾನೆ. ರೋಗವನ್ನು ಗುಣಪಡಿಸುವ ಮತ್ತು ಆರೋಗ್ಯವನ್ನು ಕರುಣಿಸುವ ಶಕ್ತಿ ಇರುವುದು ದೇವರಿಗೆ ಮಾತ್ರ’ ಎಂದು ಹೇಳಿದರು.

‘ಸಾವಿರಾರು ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಗೆ ಬರುತ್ತವೆ. ವಿಚಾರಣೆಗೂ ಮುನ್ನವೇ ಎಲ್ಲ ಕಾನೂನು ಅರಿತು ನ್ಯಾಯಪೀಠದಲ್ಲಿ ಕೂರಲು ಸಾಧ್ಯವಿಲ್ಲ. ವಕೀಲರು ಮಂಡಿಸುವ ವಾದ ಆಧಾರಿಸಿ ತೀರ್ಪು ನೀಡುತ್ತೇವೆ. ತೀರ್ಪು ಕಾನೂನು ಚೌಕಟ್ಟಿನಲ್ಲಿ ಇರುತ್ತದೆ. ಅದು ನ್ಯಾಯಸಮ್ಮತವೇ ಎಂಬ ಜಿಜ್ಞಾಸೆ ಹಾಗೆ ಉಳಿಯುತ್ತದೆ’ ಎಂದರು.

‘ಕಾನೂನು ತಿಳಿವಳಿಕೆಯ ಕೊರತೆಯಿಂದ ಸಣ್ಣ ತಪ್ಪಿಗೂ ದೊಡ್ಡ ಬೆಲೆ ತೆರೆಬೇಕಾಗುತ್ತದೆ. ಕಾನೂನು ತಿಳಿವಳಿಕೆ ಇದ್ದರೆ ಸಮಸ್ಯೆಗಳನ್ನು ಸರಿಯಾಗಿ ಎದುರಿಸಲು ಸಾಧ್ಯವಿದೆ. ಆಸ್ತಿಯನ್ನು ಕಬಳಿಸಿ ವೃದ್ಧ ಪೋಷಕರನ್ನು ತಿರಸ್ಕರಿಸುವ ಮಕ್ಕಳಿಗೆ ಕಾನೂನು ತಕ್ಕ ಶಿಕ್ಷೆ ನೀಡುತ್ತದೆ. ಮಕ್ಕಳು ಮೋಸದಿಂದ ಕಬಳಿಸಿದ ಆಸ್ತಿಯನ್ನು ಮರಳಿ ಪಡೆಯಲು ಸಾಧ್ಯವಿದೆ’ ಎಂದು ಹೇಳಿದರು.

ಸಿವಿಲ್‌ ನ್ಯಾಯಾಧೀಶ ಸಮೀರ್‌ ಪಿ.ನಂದ್ಯಾಲ್‌, ವಕೀಲರ ಸಂಘದ ಕಾರ್ಯದರ್ಶಿ ಬಿ.ಎಂ.ಅನಿಲ್‌ ಕುಮಾರ್‌, ಶಾಂತಿನಿಕೇತನದ ಅಧ್ಯಕ್ಷರಾದ ಜ್ಯೋತಿಲಕ್ಷ್ಮಿ, ಎ.ಆರ್‌.ಲಕ್ಷ್ಮಣ್‌, ಚಿತ್ರದುರ್ಗ ಫೋರ್ಟ್‌ ಸಿಟಿ ರೆಡ್‌ ಬುಲ್ಸ್‌ ಸಂಸ್ಥೆ ಅಧ್ಯಕ್ಷ ನಾಗಭೂಷಣ, ಸುರೇಶರಾಜ್‌, ಸುಜಾತಾ, ಪ್ರತಿಭಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT