ಬುಧವಾರ, ಆಗಸ್ಟ್ 17, 2022
23 °C
ಭಾಷಾ ವಿಷಯದ ಬದಲಾವಣೆಗೆ ಸಾಹಿತಿಗಳ ಆಕ್ಷೇಪ

ನಾಲ್ಕು ವರ್ಷವೂ ಕನ್ನಡ ಕಲಿಕೆ ಅಗತ್ಯ: ಭಾಷಾ ವಿಷಯದ ಬದಲಾವಣೆಗೆ ಸಾಹಿತಿಗಳ ಆಕ್ಷೇಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನ್ನಡ ಭಾಷೆ–‍ಪ್ರಾತಿನಿಧಿಕ ಚಿತ್ರ

ಚಿತ್ರದುರ್ಗ: ರಾಷ್ಟ್ರೀಯ ನೂತನ ಶಿಕ್ಷಣ ನೀತಿಯ ಭಾಗವಾಗಿ ಪದವಿ ಅವಧಿಯನ್ನು ನಾಲ್ಕು ವರ್ಷಕ್ಕೆ ವಿಸ್ತರಿಸಿ ಕನ್ನಡ ಭಾಷಾ ಕಲಿಕೆಯ ಸಮಯನ್ನು ಕಡಿತಗೊಳಿಸಿದ ಕಾರ್ಯಪಡೆಯ ಉಪಸಮಿತಿಯ ಶಿಫಾರಸಿಗೆ ಸಾಹಿತಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಾಲ್ಕು ವರ್ಷದ ಎಂಟು ಸೆಮಿಸ್ಟರ್‌ಗಳಲ್ಲಿಯೂ ಕನ್ನಡ ಭಾಷಾ ಕಲಿಕೆಗೆ ಅವಕಾಶ ಕಲ್ಪಿಸುವಂತೆ ಆಗ್ರಹಿಸಿದ್ದಾರೆ.

‘ಈಗಿನ ಸಾಮಾನ್ಯ ಪದವಿಯ ಮೊದಲ ಎರಡು ವರ್ಷದ ಭಾಷಾ ವಿಷಯಗಳ ಸಾಹಿತ್ಯ ಮತ್ತು ಕೌಶಲ್ಯ ಜ್ಞಾನ ಶಾಖೆಗಳ ಕಲಿಕೆಯಿದೆ. ಆದರೆ, ಹೊಸ ಶಿಕ್ಷಣ ನೀತಿಯ ನಾಲ್ಕು ಮತ್ತು ಐದು ವರ್ಷದ ಪದವಿ ಶಿಕ್ಷಣದಲ್ಲಿ ಕನ್ನಡ ಭಾಷಾ ವಿಷಯದ ಕಲಿಕೆಯನ್ನು ಒಂದು ವರ್ಷಕ್ಕೆ ಸೀಮಿತಗೊಳಿಸಲಾಗಿದೆ. ಈ ನಿರ್ಧಾರ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಹಿನ್ನಡೆ ಆಗಲಿದೆ’ ಎಂದು ಜಂಟಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

‘ರಾಜ್ಯ ಸರ್ಕಾರ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಲು ಮುಂದಾಗಿರುವುದು ಸ್ವಾಗತಾರ್ಹ. ಆದರೆ, ಉಪಸಮಿತಿ ಸರ್ಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆಯ ಕನ್ನಡ ಭಾಷಾ ವಿಷಯಕ್ಕೆ ಸಂಬಂಧಿಸಿದಂತೆ ಅತ್ಯವಶ್ಯವಾಗಿ ಪರಿಶೀಲಿಸಬೇಕಾಗಿದೆ. ಕಾರ್ಯಪಡೆಯ ಉಪಸಮಿತಿಯಲ್ಲಿ ಕನ್ನಡ ಭಾಷಾ ತಜ್ಞರೊಬ್ಬರನ್ನು ಸದಸ್ಯರನ್ನಾಗಿ ನೇಮಿಸಬೇಕು. ಇಲ್ಲವಾದಲ್ಲಿ ಕನ್ನಡಪರ ಸಂಘಟನೆ ಮತ್ತು ವಿದ್ಯಾರ್ಥಿಗಳ ಪ್ರತಿಭಟನೆ ಎದುರಿಸಬೇಕಾಗುತ್ತದೆ’ ಎಂಬ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

‘ಕನ್ನಡ ಭಾಷಾ ಕೌಶಲ್ಯವನ್ನು ಸಂವಹನ ಹಾಗೂ ಸಾಮರ್ಥ್ಯ ಕೌಶಲ್ಯ ಅಭಿವೃದ್ಧಿಯಲ್ಲಿ ಅಗತ್ಯವಾಗಿ ಅಳವಡಿಸಬೇಕು. ಕನ್ನಡ ನಾಡು, ನುಡಿ, ಸಾಹಿತ್ಯ, ಚರಿತ್ರೆ ಮುಂತಾದ ವಿಶಿಷ್ಟ ಮತ್ತು ವೈವಿಧ್ಯಮಯವಾದ ಕನ್ನಡ ಪ್ರಜ್ಞೆ ಉನ್ನತ ಶಿಕ್ಷಣ ಕಲಿಕೆಯ ಪಠ್ಯವಾಗಬೇಕು. ದೇಶದ ಯಾವುದೇ ಪ್ರಾದೇಶಿಕ ಭಾಷೆ ಉನ್ನತ ಶಿಕ್ಷಣದಲ್ಲಿ ಪಠ್ಯವಾಗಬೇಕು’ ಎಂದು ಒತ್ತಾಯಿಸಿದ್ದಾರೆ.

ಕಾದಂಬರಿಕಾರ ಡಾ.ಬಿ.ಎಲ್.ವೇಣು, ಸಾಹಿತಿಗಳಾದ ಚಂದ್ರಶೇಖರ್ ತಾಳ್ಯ, ಡಾ.ಸಿ.ಶಿವಲಿಂಗಪ್ಪ ಮೀರಾಸಾಬಿಹಳ್ಳಿ. ಡಾ.ಜಿ.ಎನ್. ಮಲ್ಲಿಕಾರ್ಜುನಪ್ಪ, ಎಚ್.ಲಿಂಗಪ್ಪ, ಟಿ.ಎಚ್.ಕೃಷ್ಣಮೂರ್ತಿ, ಜಿ.ಪರಮೇಶ್ವರಪ್ಪ. ಜೆ.ಮಹಂತೇಶ್, ಜಿ.ವೆಂಕಟೇಶ್ ಜಂಟಿ ಹೇಳಿಕೆ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು