ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಗಡ್’ ಲುಕ್‌ನಲ್ಲಿ ವಿನೋದ್‌

Last Updated 28 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಹಾಲಿವುಡ್‌ನಿಂದ ಹಿಡಿದು ಕಿರುತೆರೆವರೆಗೂ ಬಹುತೇಕ ನಟರಿಗೆ ಸಿಕ್ಸ್‌ ಪ್ಯಾಕ್‌ ಮಾಡುವುದು ಕ್ರೇಜ್‌ ಆಗಿದೆ. ಆದರೆ, ನಟ ವಿನೋದ್‌ ಪ್ರಭಾಕರ್ ಒಂದು ಹೆಜ್ಜೆ ಮುಂದೆ ಹೋಗಿ ಎಂಟು ಪ್ಯಾಕ್‌ ಮಾಡಿದ್ದಾರೆ. ಅವರು ಈ ಪರಿ ದೇಹ ಹುರಿಗೊಳಿಸಿಕೊಂಡಿರುವುದು ‘ರಗಡ್‌’ ಚಿತ್ರದ ನಾಯಕನ ಪಾತ್ರಕ್ಕಾಗಿ.

ತಾವು ನಡೆಸಿರುವ ಕಠಿಣ ಕಸರತ್ತುಗಳ ಬಗ್ಗೆ ವಿವಿಧ ಬಗೆಯ ಫೋಟೊ ಶೂಟ್, ಮೇಕಿಂಗ್ ವಿಡಿಯೊ ಕೂಡ ಮಾಡಿದ್ದಾರೆ. ಈ ಕುರಿತು ಮಾಹಿತಿ ಹಂಚಿಕೊಳ್ಳಲು ಅವರು ಸುದ್ದಿಗೋಷ್ಠಿ ಕರೆದಿದ್ದರು.

‘ಎಯ್ಟ್ ಪ್ಯಾಕ್‌ಗಾಗಿ ದೇಹ ದಂಡಿಸುವುದು ಸುಲಭದ ಮಾತಲ್ಲ. ಇದಕ್ಕಾಗಿ ನಿಧಾನವಾಗಿ ದೇಹದಲ್ಲಿರುವ ನೀರಿನ ಅಂಶವನ್ನು ಕಡಿಮೆ ಮಾಡುತ್ತಾ ಹೋಗಬೇಕಾಗುತ್ತದೆ. ನಾನು ಸಸ್ಯಾಹಾರಿ. ಆದರೆ, ಸದೃಢ ದೇಹ ಹೊಂದಲು ಅನಿವಾರ್ಯವಾಗಿ ಮಾಂಸಾಹಾರ ಸೇವಿಸಬೇಕಾಯಿತು. ಪ್ರತಿದಿನ ಉಪ್ಪು ಇಲ್ಲದ ಅರ್ಧ ಬೇಯಿಸಿದ ತರಕಾರಿಗಳು, ನಿಯಮಿತ ಪ್ರೊಟೀನ್, ಕಾಲು ಲೋಟ ನೀರು, ಮೊಟ್ಟೆ, ಸಣ್ಣದಾದ ಚಿಕನ್‌ ಪೀಸ್ ಮಾತ್ರ ಸೇವಿಸಿದೆ. ದೇಹದಲ್ಲಿ ನೀರಿನ ಅಂಶ ಇಲ್ಲದ್ದರಿಂದ ಜ್ವರ ಕಾಣಿಸಿಕೊಂಡು ತೊಂದರೆ ಅನುಭವಿಸಬೇಕಾಯಿತು. ಧೃತಿಗೆಡದೆ ನಿರಂತರವಾಗಿ ಕಸರತ್ತು ಮಾಡಿದ ಪರಿಣಾಮ ಎಯ್ಟ್‌ ಪ್ಯಾಕ್‌ ಸಾಧ್ಯವಾಯಿತು’ ಎಂದ ಅವರ ಮೊಗದಲ್ಲಿ ಸಾಧಿಸಿದ ಖುಷಿ ಇಣುಕಿತು.

‘ತರಬೇತುದಾರರಾದ ಪ್ರದೀಪ್, ರಿಯಾಜ್ ಮತ್ತು ಪತ್ನಿ ನಿಶಾ ಧೈರ್ಯ ತುಂಬಿದರು. ಇದು ನನ್ನ ಕಸರತ್ತಿಗೆ ಸಹಕಾರಿಯಾಯಿತು. ನನ್ನಪ್ಪ ಬಾಡಿ ಬಿಲ್ಡರ್ ಆಗಿದ್ದರೂ ಈ ತರಹದಲ್ಲಿ ಕಾಣಿಸಿಕೊಂಡಿರಲಿಲ್ಲ. ಎಲ್ಲಿಗೆ ಹೋದರೂ ಅಭಿಮಾನಿಗಳು ನನ್ನನ್ನು ತಂದೆಗೆ ಹೋಲಿಸುತ್ತಿದ್ದರು. ಅವರನ್ನು ಮೀರಿಸುವಂತೆ ಏನಾದರೂ ಸಾಧನೆ ಮಾಡಬೇಕೆಂದು ನಿರ್ಧರಿಸಿದೆ. ‘ರಗಡ್’ ಸಿನಿಮಾಕ್ಕೆ ಈ ರೀತಿ ಕಾಣಿಸಿಕೊಳ್ಳಬೇಕೆಂದು ನಿರ್ದೇಶಕರು ಸೂಚಿಸಿದ್ದರು. ಹಾಗಾಗಿ, ಎಂಟು ಪ್ಯಾಕ್ ಮಾಡಲು ನಿರ್ಧರಿಸಿದೆ’ ಎಂದು ದೈಹಿಕ ಕಸರತ್ತಿನ ಹಿನ್ನೆಲೆ ಬಿಡಿಸಿಟ್ಟರು.

‘ಬಹುಶಃ ಕನ್ನಡ ಚಿತ್ರರಂಗದಲ್ಲಿ ಆರು ಅಡಿ ಎತ್ತರದ ನಾಯಕ ನಟನೊಬ್ಬ ಈ ತರಹದ ದೇಹ ಹೊಂದಿಲ್ಲ. ಹೃತಿಕ್‌ ರೋಷನ್ ಅವರಂತೆ ಚಂದನವನದಲ್ಲೂ ಸದೃಢ ದೇಹ ಹೊಂದಿರುವ ನಟರಿದ್ದಾರೆಂದು ಅಭಿಮಾನಿಗಳು ಖುಷಿಪಡುತ್ತಾರೆ. ಇದು ಯುವಕರಿಗೆ ಸ್ಫೂರ್ತಿಯಾದರೂ ಅಚ್ಚರಿಪಡಬೇಕಿಲ್ಲ’ ಎಂದು ಹೆಮ್ಮೆಪಟ್ಟುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT