ಚಳ್ಳಕೆರೆ: ತಾಲ್ಲೂಕಿನ ಪರಶುರಾಂಪುರ, ಬೆಳಗೆರೆ, ಜಾಜೂರು, ಕ್ಯಾತಗೊಂಡನಹಳ್ಳಿ, ಮೀರಾಸಾಬಿಹಳ್ಳಿ, ದೊಡ್ಡೇರಿ, ರೆಡ್ಡಿಹಳ್ಳಿ, ದೊಡ್ಡಉಳ್ಳಾರ್ತಿ, ದುರ್ಗಾವರ, ನೇರಲಗುಂಟೆ, ರಾಮಜೋಗಿಹಳ್ಳಿ, ನನ್ನಿವಾಳ, ತಿಪ್ಪ್ಪಾರೆಡ್ಡಿಹಳ್ಳಿ, ಕ್ಯಾದಿಗುಂಟೆ, ಮಹಾದೇವಪುರ ಮುಂತಾದ ಗ್ರಾಮದಲ್ಲಿ ಶೇಂಗಾ ಬೆಳೆಯ ಮಧ್ಯೆ ಅಕ್ಕಡಿ ಬೆಳೆಯಾಗಿ ಬೆಳೆದಿದ್ದ ಅಲಸಂದೆ, ಎಸರು, ಮಡಿಕೆಸರು, ತೊಗರಿ, ಹರಳು (ಔಡಲ) ಮುಂತಾದ ಅಕ್ಕಡಿ ಬೆಳೆಗೆ ಎಲೆಕೊರಕ ಹಾಗೂ ಕರಿಜೋನಿ ಕೀಟಬಾಧೆ ಕಾಣಿಸಿಕೊಂಡಿದ್ದು, ಬೆಳೆ ವಿಫಲವಾಗುವ ಆತಂಕ ಅಕ್ಕಡಿ ಬೆಳೆಗಾರರಲ್ಲಿ ಹೆಚ್ಚಿದೆ.
ಮುಂಗಾರು ಮಳೆಯ ಕಣ್ಣಾಮುಚ್ಚಾಲೆಯ ಕಾರಣ ಪ್ರತಿ ವರ್ಷ ಒಂದಲ್ಲಾ ಒಂದು ರೀತಿಯ ಸಂಕಷ್ಟಕ್ಕೆ ಸಿಲುಕುತ್ತಲೇ ಬಂದಿದ್ದೇವೆ. ಈಗ ಕೀಟಬಾಧೆಯಿಂದ ಇಳುವರಿ ಕುಂಠಿತವಾಗುವ ಆತಂಕ ಇದ್ದು, ಸೂಕ್ತ ಪರಿಹಾರ ನೀಡಬೇಕು ಎಂದು ಉಪ್ಪಾರಹಟ್ಟಿ ಗ್ರಾಮದ ರೈತ ಚಿಕ್ಕಣ್ಣ ಮನವಿ ಮಾಡಿದ್ದಾರೆ.
ಸಜ್ಜೆ 66, ತೊಗರಿ 6,105, ಹುರುಳಿ 252, ಸಜ್ಜೆ 66, ಅಲಸಂದಿ 12, ಹರಳು (ಔಡಲ) 10, ಎಸರು 6, ಮಡಿಕೆಸರು 3 ಸೇರಿ ತಾಲ್ಲೂಕಿನಲ್ಲಿ ಒಟ್ಟು 6,454 ಹೆಕ್ಟೆರ್ ಪ್ರದೇಶದಲ್ಲಿ ಅಕ್ಕಡಿ ಬೆಳೆ ಬೆಳೆಯಲಾಗಿದೆ ಎಂದು ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ರವಿಕುಮಾರ್ ತಿಳಿಸಿದರು.
ಕರಿಜೋನಿ ಕೀಟಬಾಧೆ ಇನ್ನೂ ಪ್ರಾರಂಭಿಕ ಹಂತದಲ್ಲಿದ್ದು, 15-20 ದಿನಗಳಲ್ಲಿ ಹೆಚ್ಚು ಮಳೆ ಬಿದ್ದರೆ ಕೀಟಬಾಧೆ ನಿವಾರಣೆಯಾಗುತ್ತದೆ.
ಮಳೆ ಬೀಳದಿದ್ದಲ್ಲಿ ರೋಗ ಮತ್ತಷ್ಟು ವ್ಯಾಪಿಸಿ ಶೇಂಗಾ ಗಿಡದ ಹೂವುಗಳು ಬತ್ತಿಹೋಗಿ ಬೆಳೆಯ ಇಳುವರಿ ಕುಂಠಿತವಾಗುವ ಸಂಭವಿರುತ್ತದೆ. ಬರೀ ಅಲಸಂದೆಗೇ ಅಲ್ಲ ತೊಗರಿಗೂ ಅಲ್ಲಲ್ಲಿ ಹಳದಿ ರೋಗ ಕಾಣಿಸಿಕೊಂಡಿದೆ. ರೋಗಪೀಡಿತ ಗಿಡಗಳನ್ನು ಕಿತ್ತು ಹಾಕಬೇಕು ಎಂದು ತಿಳಿಸಿದರು.
ಅಸಿಟಾಮೀಫ್ರಿಡ್, ಫಿನಾಜಾಕ್ಸಿನ್ ಅಥವಾ ಪ್ರೊಪಾರೈಟ್ ತಲಾ ಎಂ.ಎಲ್ ಪ್ರತಿ ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ಅಕ್ಕಡಿ ಬೆಳೆಗೆ ಸಿಂಪಡಣೆ ಮಾಡುವುದರಿಂದ ಕೀಟಬಾಧೆ ಹತೋಟಿಗೆ ಬರುತ್ತದೆ ಎಂದು ಕೃಷಿ ಅಧಿಕಾರಿಗಳು ಸಲಹೆ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.