ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Karnataka Elections | ಚಿತ್ರದುರ್ಗ: ಚುನಾವಣೆ ಹೊಸ್ತಿಲಲ್ಲಿ ಪಕ್ಷಾಂತರ ಪರ್ವ

ಮಾಜಿ ಶಾಸಕ ಬಸವರಾಜ ಮಂಡಿಮಠ ಜೆಡಿಎಸ್‌ಗೆ, ವೀರೇಂದ್ರ ಪಪ್ಪಿ ಕಾಂಗ್ರೆಸ್‌ ಸೇರ್ಪಡೆ
Last Updated 11 ಫೆಬ್ರುವರಿ 2023, 4:15 IST
ಅಕ್ಷರ ಗಾತ್ರ

ಚಿತ್ರದುರ್ಗ: ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದೆ. ಅಖಾಡಕ್ಕೆ ಇಳಿಯಲು ಸಜ್ಜಾಗಿರುವ ಹುರಿಯಾಳುಗಳು ಗೆಲುವಿನ ಕುದುರೆ ಏರಲು ಪಕ್ಷದಿಂದ ಪಕ್ಷಕ್ಕೆ ಜಿಗಿಯತೊಡಗಿದ್ದಾರೆ. ಮತದಾರರನ್ನು ಪ್ರಭಾವಿಸುವ ನಾಯಕರ ಪಕ್ಷಾಂತರ ಪರ್ವ ಜಿಲ್ಲೆಯಲ್ಲಿ ಆರಂಭವಾಗಿದೆ.

ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಬಸವರಾಜ ಮಂಡಿಮಠ ಬಿಜೆಪಿ ತೊರೆದು ಜೆಡಿಎಸ್‌ ಸೇರ್ಪಡೆ ಆಗಿದ್ದಾರೆ. ಜೆಡಿಎಸ್‌ನಲ್ಲಿದ್ದ ವೀರೇಂದ್ರ ಪಪ್ಪಿ ಕಾಂಗ್ರೆಸ್‌ ಪಾಳೆಯ ಸೇರಿದ್ದಾರೆ. ಚುನಾವಣೆ ಸಮೀಪಿಸಿದಂತೆ ಇನ್ನೂ ಅನೇಕರು ಪಕ್ಷಾಂತರಕ್ಕೆ ಸಜ್ಜಾಗಿರುವ ಮುನ್ಸೂಚನೆ ಸಿಕ್ಕಿದೆ.

ಜಿಲ್ಲೆಯಲ್ಲಿ ಹೊಸದುರ್ಗ, ಹೊಳಲ್ಕೆರೆ, ಚಿತ್ರದುರ್ಗ, ಹಿರಿಯೂರು, ಮೊಳಕಾಲ್ಮುರು ಹಾಗೂ ಚಳ್ಳಕೆರೆ ವಿಧಾನಸಭಾ ಕ್ಷೇತ್ರಗಳಿವೆ. ಚಳ್ಳಕೆರೆ ಮತ್ತು ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಇಬ್ಬರು ಪ್ರಭಾವಿಗಳು ಪಕ್ಷಾಂತರ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ. ಉಳಿದ ಕ್ಷೇತ್ರಗಳಲ್ಲಿ ಇನ್ನಷ್ಟೇ ಪಕ್ಷಾಂತರ ಪರ್ವ ಶುರುವಾಗಬೇಕಿದೆ.

ಚಳ್ಳಕೆರೆ ಹಾಗೂ ಹೊಸದುರ್ಗ ಕ್ಷೇತ್ರಗಳಲ್ಲಿ ಜೆಡಿಎಸ್‌ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ. ಈ ಇಬ್ಬರು ಅಭ್ಯರ್ಥಿಗಳು ಕ್ಷೇತ್ರ ಸುತ್ತಿ ಜೆಡಿಎಸ್‌ಗೆ ಆಹ್ವಾನ ನೀಡುತ್ತಿದ್ದಾರೆ. ಚಳ್ಳಕೆರೆ ಕ್ಷೇತ್ರದಲ್ಲಿ ಇದು ಹೆಚ್ಚಾಗಿ ನಡೆಯುತ್ತಿದೆ. ಗ್ರಾಮ ಪಂಚಾಯಿತಿ ಸದಸ್ಯರು, ಕೆಲ ಪ್ರಮುಖರು ಪಕ್ಷ ಬದಲಿಸುತ್ತಿದ್ದಾರೆ. ಮೊದಲ ಬಾರಿಗೆ ಈ ಕ್ಷೇತ್ರದಲ್ಲಿ ಕಮಲ ಅರಳಿಸಿದ್ದ ಬಸವರಾಜ ಮಂಡಿಮಠ ಬಿಜೆಪಿಯ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದರು. ಏಕಾಏಕಿ ಕಮಲ ಪಾಳಯ ತೊರೆದು ಜೆಡಿಎಸ್‌ ಅಭ್ಯರ್ಥಿ ಪರ ಪ್ರಚಾರದಲ್ಲಿ ತೊಡಗಿದ್ದಾರೆ.

2018ರಲ್ಲಿ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ವೀರೇಂದ್ರ ಪಪ್ಪಿ ಚುನಾವಣೆಯ ಬಳಿಕ ಪಕ್ಷದಿಂದ ದೂರವಾಗಿದ್ದರು. ಹಿರಿಯೂರು ಸೇರಿದಂತೆ ಇತರ ಯಾವುದಾದರೂ ಕ್ಷೇತ್ರಗಳಲ್ಲಿ ಸ್ಪರ್ಧೆಗೆ ಇಳಿಯುವ ಇಚ್ಛೆ ವ್ಯಕ್ತಪಡಿಸಿದ್ದರು. ಅಂತಿಮವಾಗಿ ಚಿತ್ರದುರ್ಗ ಕ್ಷೇತ್ರದಿಂದ ಸ್ಪರ್ಧಿಸಲು ನಿರ್ಧರಿಸಿದ ಅವರು, ಕಾಂಗ್ರೆಸ್‌ ಟಿಕೆಟ್‌ಗೆ ಅರ್ಜಿ ಸಲ್ಲಿಸಿ ಅಚ್ಚರಿ ಮೂಡಿಸಿದ್ದರು. ವಾರದ ಹಿಂದೆ ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿ ಮಾಡಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರು. ‘ಪ್ರಜಾಧ್ವನಿ’ ಯಾತ್ರೆಯ ಮೂಲಕ ಬಹಿರಂಗವಾಗಿ ಕಾಂಗ್ರೆಸ್‌ ಜೊತೆ ಗುರುತಿಸಿಕೊಂಡರು.

ಕಾಂಗ್ರೆಸ್‌, ಬಿಜೆಪಿ, ಎಎಪಿ ಪಕ್ಷಗಳು ಇನ್ನೂ ಅಭ್ಯರ್ಥಿಗಳನ್ನು ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಪಕ್ಷದ ಟಿಕೆಟ್‌ ಘೋಷಣೆ ಬಳಿಕ ಇನ್ನೊಂದು ಹಂತದ ಪಕ್ಷಾಂತರ ನಡೆಯುವ ಸಾಧ್ಯತೆ ನಿಚ್ಚಳವಾಗಿದೆ. ಕೆಲವರು ಪಕ್ಷೇತರರಾಗಿ ಚುನಾವಣೆಗೆ ಸ್ಪರ್ಧಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಕ್ಷೇತ್ರದಲ್ಲಿರುವ ಪ್ರಭಾವಿಗಳನ್ನು ಸೆಳೆಯಲು ಜೆಡಿಎಸ್‌ ಹಾಗೂ ಎಎಪಿ ಪ್ರಯತ್ನಿಸುತ್ತಿವೆ.

ಇಬ್ಬರು ನಾಯಕರು ಕಾಂಗ್ರೆಸ್‌ಗೆ: ಡಿಕೆಶಿ

ಚಿತ್ರದುರ್ಗ ಜಿಲ್ಲೆಯಲ್ಲಿನ ಬಿಜೆಪಿಯ ಇಬ್ಬರು ಪ್ರಭಾವಿ ನಾಯಕರು ಕಾಂಗ್ರೆಸ್‌ ಪಕ್ಷಕ್ಕೆ ಸೇರಲು ಉತ್ಸುಕರಾಗಿದ್ದಾರೆ. ಕಾಲ ಪಕ್ವವಾದಾಗ ಇದು ಗೊತ್ತಾಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಬಹಿರಂಗಪಡಿಸಿದರು.

ಗುರುವಾರ ನಡೆದ ‘ಪ್ರಜಾಧ್ವನಿ’ ಯಾತ್ರೆಯ ಸಭೆಯಲ್ಲಿ ಮಾತನಾಡಿದ ಅವರು, ‘ಬಿಜೆಪಿಯ ಅನೇಕರು ಸಂಪರ್ಕದಲ್ಲಿದ್ದಾರೆ. ಚಿತ್ರದುರ್ಗ ಜಿಲ್ಲೆಯಲ್ಲಿಯೇ ಇಬ್ಬರು ನಾಯಕರು ನನ್ನ ಬಳಿ ಮಾತುಕತೆ ನಡೆಸಿದ್ದಾರೆ. ಅವರ ಹೆಸರನ್ನು ಈಗ ಹೇಳುವುದಿಲ್ಲ’ ಎಂದರು. ಈ ಹೇಳಿಕೆ ಹೊಸ ಸಂಚಲನವನ್ನು ಸೃಷ್ಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT