ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯೂರು ಕ್ಷೇತ್ರ ಸ್ಥಿತಿ–ಗತಿ| ಕುತೂಹಲ ಕೆರಳಿಸಿದ ‘ಜೆಡಿಎಸ್‌’ ನಡೆ

ಕರ್ನಾಟಕ ವಿಧಾನಸಭಾ ಚುನಾವಣೆ 2023
Last Updated 16 ಜನವರಿ 2023, 13:55 IST
ಅಕ್ಷರ ಗಾತ್ರ

ಚಿತ್ರದುರ್ಗ: ರಾಜ್ಯ ರಾಜಕಾರಣಕ್ಕೆ ಮುತ್ಸದ್ಧಿ ನಾಯಕರನ್ನು ನೀಡಿದ ದಕ್ಷಿಣ ಕಾಶಿ ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆ ಬಿರುಸಾಗಿವೆ. ಕ್ಷೇತ್ರದಿಂದ ಗೆದ್ದರೆ ಸಚಿವರಾಗುತ್ತಾರೆ ಎಂಬ ನಂಬಿಕೆ ಮೇಲೆ ಚುನಾವಣೆಗೆ ಸ್ಪರ್ಧಿಸಲು ಆಕಾಂಕ್ಷಿಗಳು ತುದಿಗಾಲಲ್ಲಿ ನಿಂತಿದ್ದಾರೆ.

ಹಿರಿಯೂರು ಕ್ಷೇತ್ರದಲ್ಲಿ ಮೂರು ರಾಜಕೀಯ ಪಕ್ಷಗಳಲ್ಲಿ ಟಿಕೆಟ್‌ಗೆ ಪೈಪೋಟಿ ಜೋರಾಗಿದೆ. ಕಾಂಗ್ರೆಸ್‌ನಲ್ಲಿ ಎಂಟು ಆಕಾಂಕ್ಷಿಗಳು ಅರ್ಜಿ ಸಲ್ಲಿಸಿ ಕಾಯುತ್ತಿದ್ದಾರೆ. ಕೆಲವರು ತಮಗೆ ಟಿಕೆಟ್‌ ಖಚಿತ ಎಂಬ ವಿಶ್ವಾಸದಲ್ಲಿ ಕ್ಷೇತ್ರದಲ್ಲಿ ಪ್ರಚಾರ ಪ್ರಾರಂಭಿಸಿದ್ದಾರೆ.

ವಾಣಿವಿಲಾಸ ಸಾಗರ ಜಲಾಶಯದ ಮಡಲಿನಲ್ಲಿ ವಿಸ್ತಾರಗೊಂಡಿರುವ ಕ್ಷೇತ್ರವನ್ನು ಸ್ಥಳೀಯರಿಗಿಂತಲೂ ಹೊರಗಿನವರು ಪ್ರತಿನಿಧಿಸಿದ್ದೇ ಹೆಚ್ಚು. ಪ್ರಬಲ ಜಾತಿಗಳ ಕ್ಷೇತ್ರವನ್ನು ಬಿಜೆಪಿಯ ಪೂರ್ಣಿಮಾ ಶ್ರೀನಿವಾಸ್‌ ಪ್ರತಿನಿಧಿಸುತ್ತಿದ್ದಾರೆ. ಬಿಜೆಪಿಯ ನೆಲೆಯಿಲ್ಲದ ಕ್ಷೇತ್ರದಲ್ಲಿ 2018ರಲ್ಲಿ ಮೊದಲ ಬಾರಿಗೆ ಕಮಲ ಅರಳಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.

ಕಳೆದ ತಿಂಗಳು ನಡೆದ ಜನಸಂಕಲ್ಪ ಯಾತ್ರೆಯಲ್ಲಿ ಮುಂದಿನ ಬಾರಿ 25 ಸಾವಿರ ಮತಗಳ ಅಂತರದಿಂದ ಪೂರ್ಣಿಮಾ ಅವರನ್ನು ಗೆಲ್ಲಿಸಿ ಎಂಬ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿಕೆ ಅವರ ಸ್ಪರ್ಧೆಯನ್ನು ಬಹುತೇಕ ಖಚಿತ ಪಡಿಸಿದೆ.

ಈ ಎಲ್ಲ ಬೆಳವಣಿಗೆ ನಡುವೆಯೂ ಅವರ ಪತಿ ಗೊಲ್ಲ ಸಂಘದ ರಾಜ್ಯ ಘಟಕದ ಅಧ್ಯಕ್ಷ ಡಿ.ಟಿ. ಶ್ರೀನಿವಾಸ್‌, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎ. ಮುರುಳಿ, ಹಿಂದಿನ ಚುನಾವಣೆಗಳ ಪರಾಜಿತ ಅಭ್ಯರ್ಥಿಗಳಾದ ಎನ್‌.ಆರ್‌. ಲಕ್ಷ್ಮೀಕಾಂತ್‌, ಸಿದ್ದೇಶ್‌ ಯಾದವ್‌ ಸಹ ತೆರೆಮರೆಯಲ್ಲಿ ಟಿಕೆಟ್‌ಗೆ ಪ್ರಯತ್ನಿಸುತ್ತಿದ್ದಾರೆ ಎಂಬ ಮಾತುಗಳು ಕಾರ್ಯಕರ್ತರ ವಲಯದಲ್ಲಿ ಕೇಳಿ ಬರುತ್ತಿವೆ.

ಕ್ಷೇತ್ರದಲ್ಲಿ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಪಕ್ಷಗಳಿಗೆ ಪಾರಂಪರಿಕ ಮತಗಳಿವೆ. ಈವರೆಗೂ ನಡೆದ 15 ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ 10 ಬಾರಿ ಗೆಲುವಿನ ನಗೆ ಬೀರಿದೆ. ಇದೇ ಮೊದಲ ಬಾರಿಗೆ ಆಮ್‌ ಆದ್ಮಿ ಪಾರ್ಟಿ (ಎಎಪಿ), ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (ಕೆಆರ್‌ಪಿಪಿ) ಯೂ ಅಖಾಡಕ್ಕೆ ಇಳಿಯಲಿದೆ.

ಚಳ್ಳಕೆರೆ ಎಸ್ಟಿ ಮೀಸಲು ಕ್ಷೇತ್ರವಾದ ಕಾರಣ 2008ರಲ್ಲಿ ಹಿರಿಯೂರಿಗೆ ಕಾಲಿಟ್ಟ ಮಾಜಿ ಸಚಿವ ಡಿ. ಸುಧಾಕರ್‌ ಪಕ್ಷೇತರವಾಗಿ ಸ್ಪರ್ಧಿಸಿ ಗೆಲುವು ಸಾಧಿಸಿ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದರು. 2013ರಲ್ಲಿ ಪುನಃ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಎರಡನೇ ಬಾರಿ ಗೆದ್ದರು. 2018ರಲ್ಲಿ ಹ್ಯಾಟ್ರಿಕ್ ಗೆಲುವಿನ ಉತ್ಸಾಹದಲ್ಲಿದ್ದ ಇವರಿಗೆ ಬಿಜೆಪಿಯ ಪೂರ್ಣಿಮಾ ತಡೆ ಹಾಕಿದರು.

ಮಾಡು ಇಲ್ಲವೆ ಮಡಿ ಹೋರಾಟಕ್ಕೆ ಇಳಿದಿರುವ ಡಿ. ಸುಧಾಕರ್‌ ಕ್ಷೇತ್ರದಲ್ಲಿ ನಿರಂತರವಾಗಿ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಕಾಂಗ್ರೆಸ್‌ ಸದಸ್ಯತ್ವ ಅಭಿಯಾನದಲ್ಲಿ 93 ಸಾವಿರ ಸದಸ್ಯತ್ವದ ಮೂಲಕ ರಾಜ್ಯದಲ್ಲಿ ಮೊದಲ ಸ್ಥಾನಗಳಿಸಿದ್ದಾರೆ. ಭಾರತ್‌ ಜೋಡೋ ಯಾತ್ರೆ ಬಳಿಕ ಕಾರ್ಯ ಚಟುವಟಿಕೆ ಮತ್ತಷ್ಟು ಬಿರುಸಾಗಿವೆ.

ವಿಧಾನ ಪರಿಷತ್‌ ಚುನಾವಣೆಯಲ್ಲಿ ಪರಾಜಿತಗೊಂಡ ಬಿ. ಸೋಮಶೇಖರ್‌ ಟಿಕೆಟ್‌ಗೆ ಅರ್ಜಿ ಸಲ್ಲಿಸಿ ಕ್ಷೇತ್ರದಲ್ಲಿ ಸಂಚಾರ ನಡೆಸುತ್ತಿದ್ದಾರೆ. ಪ್ರಬಲ ಆಕಾಂಕ್ಷಿಯಾಗಿ ಹೆಸರು ಹೇಳಿ ಬರುತ್ತಿದ್ದು, ಭಾರತ್‌ ಜೋಡೊ ಯಾತ್ರೆ ವೇಳೆ ಫ್ಲೆಕ್ಸ್ ವಿಚಾರದಲ್ಲಿ ಗಲಾಟೆ ನಡೆದ ಬಳಿಕ ಕಳೆದ ತಿಂಗಳು ಧರ್ಮಪುರದಲ್ಲಿ ಎಐಸಿಸಿ ವೀಕ್ಷಕ ಮಯೂರ್‌ ಜಯಕುಮಾರ್‌ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಡಿ.ಸುಧಾಕರ್‌ ಹಾಗೂ ಬಿ. ಸೋಮಶೇಖರ್‌ ಬೆಂಬಲಿಗರು ಕೈ–ಕೈ ಮಿಲಾಯಿಸುವ ಮೂಲಕ ಅಸಮಾಧಾನ ಸ್ಪೋಟವಾಗಿತ್ತು. ಸಮರ್ಥರನ್ನು ಅಖಾಡಕ್ಕೆ ಇಳಿಸುವ ಲೆಕ್ಕಾಚಾರದಲ್ಲಿ ಪಕ್ಷದ ಹೈಕಮಾಂಡ್‌ ಎಲ್ಲವನ್ನು ಗಮನಿಸುತ್ತಿದೆ.

ಪಾರಂಪರಿಕ ಮತಗಳನ್ನು ಹೊಂದಿರುವ ಜೆಡಿಎಸ್‌ನಿಂದ ಸ್ಥಳೀಯ ಒಕ್ಕಲಿಗ ಸಮುದಾಯದವರು ಅಖಾಡಕ್ಕೆ ಧುಮುಕಲಿದ್ದಾರೆ. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ. ಜಯಣ್ಣ, ತಾಲ್ಲೂಕು ಪ‍ಂಚಾಯಿತಿ ಮಾಜಿ ಸದಸ್ಯ ಜಿ.ಎಸ್‌. ಶಿವಪ್ರಸಾದ್‌ ಗೌಡ, ನಿರ್ಮಿತಿ ಕೇಂದ್ರದ ವ್ಯವಸ್ಥಾಪಕ ಕೆ.ಜಿ. ಮೂಡಲಗಿರಿಯಪ್ಪ, ಲೋಕೋಪಯೋಗಿ ಇಲಾಖೆ ನಿವೃತ್ತ ಚೀಫ್‌ ಎಂಜಿನಿಯರ್‌ ಎಂ. ರವೀಂದ್ರಪ್ಪ ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ.

ಜಾತಿ ಲೆಕ್ಕಾಚಾರ, ಪಕ್ಷದ ಸಿದ್ಧಾಂತ, ವೈಯಕ್ತಿಕ ವರ್ಚಸ್ಸು ಹೀಗೆ ಹಲವು ಅಂಶಗಳನ್ನು ಆಧರಿಸಿ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ. ಕ್ಷೇತ್ರದ ಅಭಿವೃದ್ಧಿಯನ್ನು ಮುಂದಿಟ್ಟುಕೊಂಡು ಬಿಜೆಪಿ ಮತದಾರರ ಮನೆ ಬಾಗಿಲು ತಟ್ಟಲು ಮುಂದಾಗಿದೆ.

ರೈತರ ಸಮಸ್ಯೆ, ಅಭಿವೃದ್ಧಿ ಕಾರ್ಯದ ವಿಳಂಬ, ಅಗತ್ಯ ವಸ್ತುಗಳ ಬೆಲೆ ಏರಿಕೆ, ವಿದ್ಯಾರ್ಥಿ ವೇತನ ಸ್ಥಗಿತ ಸೇರಿದಂತೆ ಹಲವು ವಿಚಾರಗಳನ್ನು ಮತದಾರರಿಗೆ ತಲುಪಿಸಿ ಬಿಜೆಪಿಯನ್ನು ಮಣಿಸಲು ಇತರ ಪಕ್ಷಗಳು ಸಿದ್ಧತೆ ನಡೆಸಿವೆ.

ಚಿತ್ರದುರ್ಗದಲ್ಲಿ ನಡೆದ ಪರಿಶಿಷ್ಟ ಜಾತಿ ಮತ್ತು ಪಂಗಡದ ಐಕ್ಯತಾ ಸಮಾವೇಶ ಹಾಗೂ ಹಿರಿಯೂರಿನ ಮೂಲಕ ಸಾಗಿದ ಭಾರತ್‌ ಜೋಡೊ ಯಾತ್ರೆ ಕಾಂಗ್ರೆಸ್‌ನ ಹುಮ್ಮಸ್ಸನ್ನು ಹೆಚ್ಚಿಸಿದೆ. ಫೆಬ್ರುವರಿ 2ರಂದು ಹಿರಿಯೂರಿಗೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದ ಪಂಚರತ್ನ ರಥಯಾತ್ರೆ ಆಗಮಿಸುತ್ತಿದ್ದು, ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದೆ. ಈವರೆಗೂ ಯಾವ ರಾಜಕೀಯ ಪಕ್ಷ ಕೂಡ ಅಭ್ಯರ್ಥಿಗಳನ್ನು ಅಂತಿಮಗೊಳಿಸಿಲ್ಲ. ಅಭ್ಯರ್ಥಿ ಘೋಷಣೆ ಬಳಿಕ ಸ್ಪಷ್ಟ ಚಿತ್ರಣ ಲಭ್ಯವಾಗಲಿದೆ.

***

ಚುನಾವಣೆ ಸಮಯದಲ್ಲಿ ಆಕಾಂಕ್ಷಿಗಳ ವಿಚಾರದಲ್ಲಿ ಗಾಳಿ ಸುದ್ದಿಗಳು ಸಾಮಾನ್ಯ. ಬಿಜೆಪಿಯಿಂದ ನನ್ನ ಸ್ಪರ್ಧೆ ಖಚಿತ. ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳೇ ಗೆಲುವಿಗೆ ಶ್ರೀರಕ್ಷೆಯಾಗಲಿವೆ. ಪಕ್ಷ ಸಂಘಟನೆ ಸಹ ನಿರಂತವಾಗಿದೆ.
- ಪೂರ್ಣಿಮಾ ಶ್ರೀನಿವಾಸ್‌, ಶಾಸಕಿ.

ಕ್ಷೇತ್ರದಲ್ಲಿ ಜೆಡಿಎಸ್‌ ಮತ ಬ್ಯಾಂಕ್‌ ಭದ್ರವಾಗಿದೆ. ನಾಲ್ಕು ಆಕಾಂಕ್ಷಿಗಳಿದ್ದಾರೆ. ಯಾರಿಗೆ ಟಿಕೆಟ್‌ ನೀಡಿದರು ಸಹ ಯಾವುದೇ ಬಂಡಾಯವಿಲ್ಲದೆ ಅಭ್ಯರ್ಥಿ ಗೆಲುವಿಗೆ ಶ್ರಮಿಸುವುದಾಗಿ ಸ್ಪಷ್ಟಪಡಿಸಿದ್ದಾರೆ. ಕ್ಷೇತ್ರದಲ್ಲಿ ಸಂಘಟನೆಗೆ ಹೆಚ್ಚು ಆದ್ಯತೆ ನೀಡಲಾಗಿದೆ.
- ಎನ್‌. ಹನುಮಂತರಾಯಪ್ಪ, ಜೆಡಿಎಸ್‌ ತಾಲ್ಲೂಕು ಘಟಕದ ಅಧ್ಯಕ್ಷ

ಕ್ಷೇತ್ರವನ್ನು ‘ಕೈ’ ವಶ ಮಾಡಿಕೊಳ್ಳಲು ಮಾಜಿ ಸಚಿವ ಡಿ.ಸುಧಾಕರ್‌ ನೇತೃತ್ವದಲ್ಲಿ ನಿರಂತರವಾಗಿ ಪಕ್ಷ ಸಂಘಟನೆ ಮಾಡಲಾಗುತ್ತಿದೆ. ಬಿಜೆಪಿ ಶಾಸಕರಿದ್ದರು ಸಹ ನಗರಸಭೆ ಅಧಿಕಾರದ ಗದ್ದುಗೆ ಏರಿದ್ದೇವೆ.
- ಖಾದಿ ಜೆ.ರಮೇಶ್‌, ಕಾಂಗ್ರೆಸ್‌ ತಾಲ್ಲೂಕು ಘಟಕದ ಅಧ್ಯಕ್ಷ

ಕ್ಷೇತ್ರದ ಮತದಾರರು ಹೊಸತನ ಬಯಸಿದ್ದಾರೆ. ವಿಧಾನ ಪರಿಷತ್‌ ಚುನಾವಣೆಯಲ್ಲಿ ಸೋತರು ಸಹ ಕ್ಷೇತ್ರವನ್ನು ಬಿಟ್ಟು ಹೋಗದೆ ಕಾರ್ಯಕರ್ತರ ಜತೆ ಇದ್ದೇನೆ. ಪ್ರಚಾರ ಬಯಸದೆ ಮಾಡುತ್ತಿರುವ ಕಾರ್ಯಗಳನ್ನು ಪಕ್ಷದ ನಾಯಕರು ಗಮನಿಸಿದ್ದಾರೆ. ಕ್ಷೇತ್ರದಿಂದ ಸ್ಪರ್ಧೆ ಮಾತ್ರ ಖಚಿತ.
-ಬಿ. ಸೋಮಶೇಖರ್‌, ಕಾಂಗ್ರೆಸ್‌ ಪ್ರಬಲ ಆಕಾಂಕ್ಷಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT