ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲಸೌಲಭ್ಯ ವಂಚಿತ ಕರ್ನಾಟಕ ಪಬ್ಲಿಕ್ ಸ್ಕೂಲ್‌

ನಿಧಾನ ಗತಿಯಲ್ಲಿ ಸಾಗುತ್ತಿರುವ ಕಟ್ಟಡ ನಿರ್ಮಾಣ ಕಾಮಗಾರಿ
Last Updated 13 ಅಕ್ಟೋಬರ್ 2021, 5:51 IST
ಅಕ್ಷರ ಗಾತ್ರ

ಪರಶುರಾಂಪುರ: ಇಲ್ಲಿ ₹ 1 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ನೂತನ ಕಟ್ಟಡದ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದ್ದು, ಪೋಷಕರ ಹಾಗೂ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

2017–18ನೇ ಸಾಲಿನಲ್ಲಿ ₹ 93 ಲಕ್ಷ ವೆಚ್ಚದಲ್ಲಿ ಕಾಲೇಜು ಕಟ್ಟಡ ಮತ್ತು ಪ್ರಯೋಗಾಲಯ ಕಟ್ಟಲು ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್‌ ಉಪವಿಭಾಗ ಚಳ್ಳಕೆರೆ ಇಲಾಖೆಯಿಂದ ಹಣ ಬಿಡುಗಡೆಯಾಗಿದ್ದು, 3 ವರ್ಷಗಳು ಕಳೆದರೂ ಕಾಮಗಾರಿ ಮುಗಿದಿಲ್ಲ. 2021ರ ಜೂನ್ ವೇಳೆಗೆ ಕಾಲೇಜಿಗೆ ಕಟ್ಟಡ ಹಸ್ತಾಂತರ ಮಾಡಬೇಕಿತ್ತು. ಆದರೆ, ಅಕ್ಟೋಬರ್‌ ಬಂದರೂ ಮುಗಿದಿಲ್ಲ ಎಂಬುದು ಇಲ್ಲಿಯ ಸಿಬ್ಬಂದಿ ಹಾಗೂ ಪೋಷಕರ ಅಳಲಾಗಿದೆ.

ಈಗಿರುವ ಕೆಲವು ಕಟ್ಟಡಗಳು ಶಿಥಿಲ ವ್ಯವಸ್ಥೆಯಲ್ಲಿದ್ದು, ಕಾಮಗಾರಿ ಬೇಗ ಮುಗಿದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಕಾಲೇಜು ವಿಭಾಗದಲ್ಲಿ 346 ವಿದ್ಯಾರ್ಥಿಗಳು, ಪ್ರೌಢಶಾಲಾ ವಿಭಾಗದಲ್ಲಿ 320 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, 666 ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಗುತ್ತಿಗೆ ದಾರರು ಶೀಘ್ರವಾಗಿ ಕಟ್ಟಡ ಕಾಮಗಾರಿ ಮುಗಿಸಬೇಕು ಎಂಬುದು ಪೋಷಕರಾದ ಶಿವಣ್ಣ, ಮಹೇಶ, ನಾಗರಾಜ ರಾಜಣ್ಣ ಮುಂತಾದವರ ಆಗ್ರಹವಾಗಿದೆ.

₹ 18 ಲಕ್ಷದ ಶೌಚಾಲಯ ಉಪಯೋಗಕ್ಕಿಲ್ಲ: ‘ಕಾಲೇಜಿನಲ್ಲಿ ಹೆಣ್ಣುಮಕ್ಕಳೇ ಹೆಚ್ಚಿದ್ದಾರೆ. ಇಲ್ಲಿ ಅವರಿಗಾಗಿ ₹ 18 ಲಕ್ಷ ವೆಚ್ಚದಲ್ಲಿ ಶೌಚಾಲಯವನ್ನು 2016–17ನೇ ಸಾಲಿನಲ್ಲಿ ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್‌ ಇಲಾಖೆಯಿಂದಲೇ ನಿರ್ಮಾಣ ಮಾಡಿದ್ದಾರೆ. ಆದರೆ ಇದುವರೆಗೂ ಅದನ್ನು ಉಪಯೋಗ ಮಾಡಿಕೊಂಡಿಲ್ಲ. ಅದು ಉಪಯೋಗಕ್ಕೂ ಬರುವ ಸ್ಥಿತಿಯಲ್ಲಿ ಇಲ್ಲ. ಅದು ಸಂಪೂರ್ಣ ಕಳೆಪೆ ಕಾಮಗಾರಿಯಾಗಿದೆ’ ಎನ್ನುತ್ತಾರೆ ಕಾಲೇಜು ಪ್ರಾಂಶುಪಾಲರಾದ ನಾಗರಾಜ.

‘ಪ್ರೌಢಶಾಲೆಯ ಹೆಣ್ಣುಮಕ್ಕಳ ಶೌಚಾಲಯವನ್ನೇ ಕಾಲೇಜಿನವರು ಬಳಸುತ್ತಿದ್ದು, ಹೊಸ ಶೌಚಾಲಯ ನಿರ್ಮಿಸಿ; ಇಲ್ಲವೇ ಅದನ್ನೇ ದುರಸ್ತಿಗೊಳಿಸಿ’ ಎಂಬುದು ವಿದ್ಯಾರ್ಥಿಗಳ ಬೇಡಿಕೆಯಾಗಿದೆ.

ಗಂಡುಮಕ್ಕಳಿಗೆ ಬಯಲು ಶೌಚಾಲಯವೇ ಗತಿ: ಹೆಣ್ಣು ಮಕ್ಕಳ ಕಥೆ ಹೀಗಾದರೆ ಗಂಡುಮಕ್ಕಳಿಗೆ ಶೌಚಾಲಯಗಳೇ ಇಲ್ಲ. ಅವರಿಗೆ ಬಯಲು ಶೌಚಾಲಯವೇ ಗತಿ. ಇಂತಹ ದುಃಸ್ಥಿತಿಯಲ್ಲಿರುವ ಕರ್ನಾಟಕ ಪಬ್ಲಿಕ್ ಸ್ಕೂಲ್‌ನತ್ತ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಗಮನಹರಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕಾಲೇಜಿಗೆ ಶೀಘ್ರವಾಗಿ ನೂತನ ಕಟ್ಟಡ ಹಸ್ತಾಂತರಿಸಲು ಈಗಾಗಲೇ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ.

- ಕಾವ್ಯಾ, ಎಇಇ, ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್‌ ಉಪವಿಭಾಗ

ಕಾಲೇಜಿಗೆ ಪ್ರಯೋಗಾಲ ಮತ್ತು ಕಟ್ಟಡದ ಅವಶ್ಯಕತೆ ಇದೆ. ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚುತ್ತಿದ್ದು, ಈಗಾಗಲೇ ಶಾಸಕರ ಗಮನಕ್ಕೂ ತರಲಾಗಿದೆ.

- ನಾಗರಾಜ, ಪ್ರಾಂಶುಪಾಲರು, ಕರ್ನಾಟಕ ಪಬ್ಲಿಕ್ ಸ್ಕೂಲ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT