ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ| ಮಳೆ: ಇಳುವರಿ ಕುಸಿತದಲ್ಲಿ ಬೆಳೆ

ಚಿತ್ರದುರ್ಗ, ಚಳ್ಳಕೆರೆ ತಾಲ್ಲೂಕುಗಳ 15 ಮನೆಗಳು ಭಾಗಶಃ ಕುಸಿತ
Last Updated 22 ಅಕ್ಟೋಬರ್ 2020, 2:58 IST
ಅಕ್ಷರ ಗಾತ್ರ

ಚಿತ್ರದುರ್ಗ: ಜಿಲ್ಲೆಯ ಹಲವೆಡೆ ಮಂಗಳವಾರ ರಾತ್ರಿಯಿಡೀ ಬಿರುಸಿನ ಮಳೆಯಾಗಿದೆ. ನಿರೀಕ್ಷೆಗೂ ಮೀರಿ ಉತ್ತಮ ಮಳೆಯಾಗಿದೆ. ಆಗಿಂದಾಗ್ಗೆ ಸುರಿಯುತ್ತಿರುವ ಮಳೆಗೆ ಬೆಳೆ ನಾಶ, ಇಳುವರಿ ಕುಸಿತವಾಗುವ ಆತಂಕವೂ ರೈತರನ್ನು ಕಾಡತೊಡಗಿದೆ.

ಚಿತ್ರದುರ್ಗ ತಾಲ್ಲೂಕಿನ ಭರಮಸಾಗರದಲ್ಲಿ ಹಳೆಯ ಆರು ಮನೆಗಳು ಹಾಗೂಚಳ್ಳಕೆರೆ ಭಾಗದ 10 ಮನೆಗಳೂ ಭಾಗಶಃ ಕುಸಿದಿವೆ. ತಾಲ್ಲೂಕಿನ 50 ಎಕರೆ ಪ್ರದೇಶದಲ್ಲಿ ಭಾರಿ ಪ್ರಮಾಣದ ನೀರು ನಿಂತಿದ್ದು, ಬೆಳೆ ನಷ್ಟವಾಗುವ ಸಂಭವ ಹೆಚ್ಚಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

ಜಿಲ್ಲೆಯ ಕೆರೆ–ಕಟ್ಟೆ, ಕಲ್ಯಾಣಿಗಳಿಗೆ ಜೀವಕಳೆ ಬಂದಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನೀರಿನ ಹರಿವು ಹೆಚ್ಚಳವಾಗಿದೆ. ಹೆಚ್ಚು ಮಳೆಯಾದ ಹಾಗೂ ತಗ್ಗು ಪ್ರದೇಶವಿರುವ ತೋಟ, ಹೊಲ, ಮನೆಗಳಿಗೂ ನೀರು ನುಗ್ಗಿದೆ. ಅಂತರ್ಜಲಮಟ್ಟವೂ ಹೆಚ್ಚುತ್ತಲೇ ಇದೆ. ಹೆಚ್ಚುವರಿ ಮಳೆ ಅತಿವೃಷ್ಟಿಗೆ ಕಾರಣವಾಗಲಿದೆ ಎಂದು ರೈತರು ಬೆಳೆ ರಕ್ಷಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ.

ರಾಜ್ಯ ಮತ್ತು ಜಿಲ್ಲೆಯಲ್ಲಿ ಅತ್ಯಂತ ಕಡಿಮೆ ಮಳೆ ಬೀಳುವ ಪ್ರದೇಶವಾದ ಮೊಳಕಾಲ್ಮುರು ಹಾಗೂ ಚಳ್ಳಕೆರೆ ಭಾಗದಲ್ಲೂ ಈ ಬಾರಿ ಅಧಿಕ ಮಳೆ ಸುರಿದಿದೆ. ಜಿಲ್ಲೆಯಲ್ಲಿ ಬೆಳೆಯುವ 1.5 ಲಕ್ಷ ಹೆಕ್ಟೇರ್ ಪ್ರದೇಶದ ಶೇಂಗಾ ಬೆಳೆಯಲ್ಲಿ 1.1 ಲಕ್ಷ ಹೆಕ್ಟೇರ್‌ನಷ್ಟು ಈ ಎರಡೂ ತಾಲ್ಲೂಕುಗಳಲ್ಲೇ ಬೆಳೆಯಲಾಗುತ್ತಿದೆ. ಹೆಚ್ಚುವರಿ ಮಳೆಯಿಂದಾಗಿ ಇಳುವರಿ ಕಡಿಮೆಯಾಗುವ ಸಾಧ್ಯತೆ ಹೆಚ್ಚಿದೆ.

ಈ ಮೊದಲು ಸುರಿದ ಆರಂಭದ ಮಳೆಗಳು ರೈತರಲ್ಲಿ ಸಂತಸ ಮೂಡಿಸಿದ್ದವು. ಶೇಂಗಾ ಬಿತ್ತನೆ ನಂತರ ಒಂದು ಎಕರೆಗೆ ಕನಿಷ್ಠ 6ರಿಂದ 8 ಕ್ವಿಂಟಲ್ ಬರಬಹುದು ಎಂಬ ನಿರೀಕ್ಷೆ ರೈತ ಸಮುದಾಯದಲ್ಲಿ ಇತ್ತು. ಆದರೆ, ಈಗ ಬೆಳೆ ನೋಡಲು ಚೆನ್ನಾಗಿ ಕಂಡರೂ ಇಳುವರಿಯಲ್ಲಿ ಎಕರೆಗೆ 3ರಿಂದ 4 ಕ್ವಿಂಟಲ್ ಬರಬಹುದು ಎಂದು ಕೃಷಿ ಇಲಾಖೆ ಅಂದಾಜಿಸಿದೆ.

ಹೆಚ್ಚುವರಿ ಮಳೆಯಾದರೆ, ಅರಸನ ಕೆರೆ ತುಂಬಿ ಮಠದ ಕುರುಬರಹಟ್ಟಿಯೊಳಗೆ ನೀರು ನುಗ್ಗುವ ಆತಂಕದಲ್ಲಿ ಆ ಭಾಗದ ಜನರಿದ್ದಾರೆ. ಮೀನು ಸಾಕಾಣಿಕೆ ಸಂಬಂಧ ಈಗಾಗಲೇ ಕೆರೆಯನ್ನು ಗುತ್ತಿಗೆ ಪಡೆಯದವರು ಸರಿಯಾಗಿ ನಿರ್ವಹಣೆ ಮಾಡದ ಕಾರಣ ಗುತ್ತಿಗೆ ರದ್ದುಪಡಿಸಲು ತೀರ್ಮಾನಿಸಲಾಗಿದೆ ಎಂದು ಚಿತ್ರದುರ್ಗ ತಹಶೀಲ್ದಾರ್ ವೆಂಕಟೇಶಯ್ಯ ತಿಳಿಸಿದ್ದಾರೆ.

***

ಚಿಕ್ಕಜಾಜೂರಿನಲ್ಲಿ 95 ಮಿ.ಮೀ ಮಳೆ

ಚಿತ್ರದುರ್ಗ: ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಚಿಕ್ಕಜಾಜೂರಿನಲ್ಲಿ ಅ. 20ರಂದು 95 ಮಿ.ಮೀ ಮಳೆಯಾಗಿದೆ. ಮಂಗಳವಾರ ರಾತ್ರಿ ಜಿಲ್ಲೆಯಲ್ಲಿ ದಾಖಲಾದ ಅತಿ ಹೆಚ್ಚು ಮಳೆ ಇದಾಗಿದೆ.

ಹೊಳಲ್ಕೆರೆಯಲ್ಲಿ 42 ಮಿ.ಮೀ, ರಾಮಗಿರಿ 45, ಬಿ.ದುರ್ಗ 76, ಎಚ್.ಡಿ. ಪುರ 22, ತಾಳ್ಯ 12, ಚಳ್ಳಕೆರೆ 44, ನಾಯಕನಹಟ್ಟಿ 33, ದೇವರಮರಿಕುಂಟೆ 56, ತಳಕು 12, ಚಿತ್ರದುರ್ಗ 60, ಐನಹಳ್ಳಿ 38, ಭರಮಸಾಗರ 33, ಸಿರಿಗೆರೆ 72, ತರುವನೂರು 37 ಮಿ.ಮೀ ಮಳೆಯಾಗಿದೆ.

ಹಿರಿಯೂರು ತಾಲ್ಲೂಕಿನ ಈಶ್ವರಗೆರೆ 22, ಇಕ್ಕನೂರು 10, ಸುಗೂರು 37, ಹೊಸುದುರ್ಗ ತಾಲ್ಲೂಕಿನ ಮತ್ತೋಡು 28, ಶ್ರೀರಾಂಪುರ 57, ಮಾಡದಕೆರೆ 19, ಮೊಳಕಾಲ್ಮುರು 37, ಬಿ.ಜಿ. ಕೆರೆ 21, ರಾಂಪುರ 32, ದೇವಸಮುದ್ರ 48, ರಾಯಾಪುರದಲ್ಲಿ 35 ಮಿ.ಮೀ ಮಳೆಯಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT