ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಳ್ಳಕೆರೆ| 18 ವರ್ಷಗಳ ನಂತರ ಮೈದುಂಬಿ ಹರಿಯುತ್ತಿರುವ ವೇದಾವತಿ ನದಿ

6- – 7 ಅಡಿ ಮಟ್ಟದಲ್ಲಿ ರಭಸವಾಗಿ ಹರಿಯುತ್ತಿರುವ ನದಿನೀರು ನೋಡಲು ಬರುತ್ತಿರುವ ಜನ
Last Updated 4 ಆಗಸ್ಟ್ 2022, 4:24 IST
ಅಕ್ಷರ ಗಾತ್ರ

ಚಳ್ಳಕೆರೆ: ಜಿಲ್ಲೆಯ ಹಿರಿಯೂರು ಮತ್ತು ಹೊಸದುರ್ಗ ತಾಲ್ಲೂಕಿನಲ್ಲಿ ಅತಿ ಹೆಚ್ಚು ಮಳೆ ಸುರಿದಿರುವ ಪರಿಣಾಮವಾಗಿ ತಾಲ್ಲೂಕಿನ ಚೌಳೂರು ಗ್ರಾಮದ ಬಳಿಯ ವೇದಾವತಿ ನದಿ 18 ವರ್ಷಗಳ ನಂತರ ಮೈದುಂಬಿದೆ.

6-7 ಅಡಿ ಮಟ್ಟದಲ್ಲಿ ರಭಸವಾಗಿ ಹರಿಯುತ್ತಿರುವ ನೀರನ್ನು ನೋಡಲು ನದಿಯ ದಡದ ಇಕ್ಕೆಲಗಳಲ್ಲಿ ತಾಲ್ಲೂಕಿನ ವಿವಿಧ ಗ್ರಾಮಗಳ ಜನರು ಉತ್ಸುಕರಾಗಿ ವಾಹನಗಳ ಮೂಲಕ ಬರುತ್ತಿದ್ದಾರೆ.

ಬೊಂಬೆರಹಳ್ಳಿ, ಚೌಳೂರು, ಪರಶುರಾಂಪುರ, ಹಾಲಗೊಂಡನಹಳ್ಳಿ, ಕಲಮರಹಳ್ಳಿ, ಗೊರ್ಲತ್ತು ಹಾಗೂ ಪಗಡಲಬಂಡೆ ಗ್ರಾಮ ಸೇರಿ ತಾಲ್ಲೂಕಿನ ಐದು ಕಡೆ ವೇದಾವತಿಗೆ ಅಡ್ಡಲಾಗಿ ಬ್ಯಾರೇಜ್ ನಿರ್ಮಾಣ ಮಾಡಿರುವುದರಿಂದ ಮಳೆನೀರಿನ ಜತೆಗೆ ವಿ.ವಿ ಸಾಗರದಿಂದ ಹರಿದು ಬಂದ ನೀರು ಬ್ಯಾರೇಜ್‍ನಲ್ಲಿ ಸಂಗ್ರಹವಾಗಿದ್ದರಿಂದ ನದಿ ಪ್ರದೇಶದಲ್ಲಿ ಅಂತರ್ಜಲ ಹೆಚ್ಚಳವಾಗಿದೆ. ಇದರಿಂದ ನದಿ ತೀರ ಪ್ರದೇಶದ ಕೃಷಿ ಚಟವಟಿಕೆಗೆ ಮತ್ತು ಜನ – ಜಾನುವಾರಿಗೆ ಕುಡಿಯುವ ನೀರಿಗೂ ಅನುಕೂಲವಾಗಿದೆ.

ಎಂಥಾ ಬೇಸಿಗೆ ಆದರೂ ನದಿ ಒಣಗಿರಲಿಲ್ಲ. ಎರಡು ವರ್ಷ ನದಿಯಲ್ಲಿ ಅಲ್ಪ ಸ್ವಲ್ಪ ನೀರು ಇದ್ದೇ ಇತ್ತು. ಹಾಗಾಗಿ ಕಡಿಮೆ ಪ್ರಮಾಣದಲ್ಲಿ ಮಳೆ ಬಿದ್ದರೂ ಸಹಜವಾಗಿಯೇ ನದಿ ತುಂಬಿ ಹರಿಯುತ್ತದೆ. ವರ್ಷದಲ್ಲಿ ಒಂದು ಸಲ ವೇದಾವತಿ ತುಂಬಿ ಹರಿದರೆ ಸಾಕು ಕಲಮರಹಳ್ಳಿ, ಗೊರ್ಲತ್ತು, ತೊರೆಬೀರನಹಳ್ಳಿ, ಕೊನಿಗರಹಳ್ಳಿ, ನಾರಾಯಣಪುರ, ಬೆಳಗೆರೆ, ಯಲಗಟ್ಟೆ, ಚಿಕ್ಕೆನಹಳ್ಳಿ, ಗೋಸಿಕೆರೆ, ಸೂರನಹಳ್ಳಿ, ಚೆಲ್ಲೂರು, ಬೊಂಬೆರಹಳ್ಳಿ, ವಡೇರಹಳ್ಳಿ, ಚೌಳೂರು, ಪರಶುರಾಂಪುರ, ಮತ್ಸಮುದ್ರ, ಹಾಲಗೊಂಡನಹಳ್ಳಿ, ಹರವಿಗೊಂಡನಹಳ್ಳಿ, ಜಾಜೂರು, ನಾಗಗೊಂಡನಹಳ್ಳಿ, ಕಾಮಸಮುದ್ರ, ಗುಡಿಹಳ್ಳಿ, ತಪ್ಪಗೊಂಡನಹಳ್ಳಿ, ರೇಣುಕಾಪುರ, ಮೈಲನಹಳ್ಳಿ ಸೇರಿದಂತೆ ತಾಲ್ಲೂಕಿನ ಒಟ್ಟು 80 ಗ್ರಾಮಗಳಿಗೆ ಅನುಕೂಲವಾಗುತ್ತದೆ.

ವರ್ಷದಲ್ಲಿ ಒಂದೆರಡು ಸಲ ವೇದಾವತಿ ನದಿಗೆ ವಿವಿ ಸಾಗರದ ನೀರು ಹರಿದು ಬರುವುದರಿಂದ ಬ್ಯಾರೇಜ್‍ನಲ್ಲಿ ಸದಾ ನೀರು ತುಂಬಿರುತ್ತದೆ. ಇದರಿಂದ ನದಿ ತೀರದ ಕೊಳವೆ ಬಾವಿಗಳಲ್ಲಿ ಸಮೃದ್ಧ ನೀರು ನಿಂತಿದೆ.

ಕೂಲಿ ಕಾರ್ಮಿಕರ ಹಾವಳಿ ತಪ್ಪಿಸಿಕೊಳ್ಳುವ ಸಲುವಾಗಿ ವೇದಾವತಿ ನದಿ ತೀರದ ರೈತರು, ಹನಿ ನೀರಾವರಿಯ ಮೂಲಕ ಅಡಿಕೆ ಕೃಷಿ ಕೈಗೊಂಡಿದ್ದಾರೆ. ತಾಲ್ಲೂಕಿನಲ್ಲಿ ಒಟ್ಟು 200 ಹೆಕ್ಟೇರ್‌ ಪ್ರದೇಶದಲ್ಲಿ ಅಡಿಕೆ ಬೆಳೆ
ಇದೆ.

ಹೆಚ್ಚಿನ ಪ್ರಮಾಣದಲ್ಲಿ ನೀರು ಇರುವ ಕಾರಣ ಜಾಜೂರು, ಹಾಲಗೊಂಡನಹಳ್ಳಿ, ಕಾಮಸಮುದ್ರ, ಪರಶುರಾಂಪುರ, ಹರವಿಗೊಂಡನಹಲ್ಳಿ, ನಾಗಗೊಂಡನಹಳ್ಳಿ ಗ್ರಾಮದ ರೈತರು ಭತ್ತ ಬೆಳೆಯಲು ಭೂಮಿಯನ್ನು ಸಿದ್ಧಪಡಿಸಿಕೊಂಡಿದ್ದಾರೆ ಎಂದು ರೈತ ಮುಖಂಡ ಕೆ.ಪಿ. ಭೂತಯ್ಯ ಹೇಳಿದರು.

ನದಿ ತೀರಕ್ಕೆ ಹೋಗದಂತೆ ಎಚ್ಚರಿಕೆ

ಈ ಬಾರಿ ವೇದಾವತಿ ನದಿ ಅಪಾಯಕಾರಿ ಮಟ್ಟವನ್ನು ಮೀರಿ ಉಕ್ಕಿ ಹರಿಯುತ್ತಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಜನರು ನದಿಗೆ ಇಳಿಯಬಾರದು ಎಂದು ತಹಶೀಲ್ದಾರ್ ಎನ್. ರಘುಮೂರ್ತಿ ಜನರಿಗೆ ಎಚ್ಚರಿಕೆ ನೀಡಿದ್ದಾರೆ.

ಇನ್ನೂ 3-4 ದಿನಗಳ ಕಾಲ ಮಳೆ ಬೀಳುವ ಮುನ್ಸೂಚನೆ ಇರುವ ಕಾರಣ ನದಿ ತೀರದ ಪ್ರತಿ ಗ್ರಾಮದಲ್ಲಿ ಟಾಂ ಟಾಂ ಹೊಡೆಸಲು ಕೂಡಲೇ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಪಿಡಿಒಗಳಿಗೆ ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT