ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುರುಘಾ ಶರಣರ ಬಂಧನ: ರಾತ್ರಿ ಇಡೀ ನಡೆದ ಪ್ರಕ್ರಿಯೆಯ ಸಂಪೂರ್ಣ ಮಾಹಿತಿ...

ತಡರಾತ್ರಿ ವೈದ್ಯಕೀಯ ಪರೀಕ್ಷೆ, ನಸುಕಿನಲ್ಲಿ ನ್ಯಾಯಾಧೀಶರ ಎದುರು ಹಾಜರು
Last Updated 2 ಸೆಪ್ಟೆಂಬರ್ 2022, 2:27 IST
ಅಕ್ಷರ ಗಾತ್ರ

ಚಿತ್ರದುರ್ಗ: ಪ್ರೌಢಶಾಲೆ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಬಂಧಿತರಾಗಿರುವ ಮುರುಘಾ ಮಠದ ಪೀಠಾಧಿಪತಿ ಶಿವಮೂರ್ತಿ ಮುರುಘಾ ಶರಣರು ಶುಕ್ರವಾರ ನಸುಕಿನಲ್ಲಿ ಜೈಲು ಸೇರಿದರು. ಕಾರಾಗೃಹದ ಬಾಗಿಲು ದಾಟುವುದನ್ನು ಕಂಡು ಅವರ ಅನುಯಾಯಿಗಳು ಕಣ್ಣೀರಾದರು.

ಗುರುವಾರ ರಾತ್ರಿ 10ಗಂಟೆಯಿಂದ ಆರಂಭವಾದ ಬಂಧನ ಪ್ರಹಸನ ಶುಕ್ರವಾರ ನಸುಕಿನ 3 ಗಂಟೆಗೆ ಶರಣರು ಜೈಲು ಸೇರುವ ಮೂಲಕ ಕೊನೆಗೊಂಡಿತು. ಪ್ರಾಥಮಿಕ ವಿಚಾರಣೆ, ವೈದ್ಯಕೀಯ ತಪಾಸಣೆ ಹಾಗೂ ನ್ಯಾಯಾಧೀಶರ ಎದುರು ಹಾಜರುಪಡಿಸುವ ಪ್ರಕ್ರಿಯೆ ಪೂರ್ಣಗೊಳಿಸಿದ ಪೊಲೀಸ್‌ ಅಧಿಕಾರಿಗಳು ನಗರದ ಹೊರವಲಯದ ಹಳೆ ಬೆಂಗಳೂರು ರಸ್ತೆಯಲ್ಲಿರುವ ಕಾರಾಗೃಹ ಸೇರಿಸಿದರು.

ಮುರುಘಾ ಮಠಕ್ಕೆ ತೆರಳಿ ಶರಣರನ್ನು ವಶಕ್ಕೆ ಪಡೆದ ಪೊಲೀಸರು, ವಿಚಾರಣೆಗಾಗಿ 30 ಕಿ.ಮೀ ದೂರದ ಚಳ್ಳಕೆರೆಗೆ ಕರೆದೊಯ್ದರು. ಡಿವೈಎಸ್‌ಪಿ ಕಚೇರಿಯಲ್ಲಿ ಅವರನ್ನು ಒಂದು ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆಸಿ ಅಧಿಕೃತವಾಗಿ ಬಂಧಿಸಿದರು. ವೈದ್ಯಕೀಯ ತಪಾಸಣೆಗಾಗಿ ಅಲ್ಲಿಂದ ನೇರವಾಗಿ ಜಿಲ್ಲಾ ಆಸ್ಪತ್ರೆಗೆ ಕರೆತರಲಾಯಿತು.

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಬಸವರಾಜ ನೇತೃತ್ವದ ವೈದ್ಯರ ತಂಡ ಶರಣರನ್ನು ಸುಮಾರು ಎರಡು ಗಂಟೆ ಕಾಲ ತಪಾಸಣೆ ನಡೆಸಿತು. ರಕ್ತದೊತ್ತಡ, ಮಧುಮೇಹ, ಹೃದಯ ಸಂಬಂಧಿ ಆರೋಗ್ಯ ಸೇರಿ ಎಲ್ಲ ರೀತಿಯ ಪರೀಕ್ಷೆಗಳನ್ನು ನಡೆಸಲಾಯಿತು. ಈ ಮಾಹಿತಿ ತಿಳಿದು ನೂರಾರು ಜನರು ಆಸ್ಪತ್ರೆಯ ಎದುರು ಜಮಾಯಿಸಿದರು. ಭಕ್ತರು, ಅನುಯಾಯಿಗಳಿಗೆ ಆಸ್ಪತ್ರೆ ಪ್ರವೇಶಿಸದಂತೆ ಪೊಲೀಸರು ನಿರ್ಬಂಧ ವಿಧಿಸಿದ್ದರು.

ನಸುಕಿನ 2.25ಕ್ಕೆ ಆಸ್ಪತ್ರೆಯಿಂದ ಹೊರಟ ಪೊಲೀಸರು 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶೆ ಕೋಮಲಾ ಅವರ ಎದುರು ಹಾಜರುಪಡಿಸಿದರು. ಶರಣರ ಪರ ವಕೀಲರು ಜಾಮೀನು ಕೋರಿ ಸ್ಥಳದಲ್ಲೇ ಅರ್ಜಿ ಸಲ್ಲಿಸಿದರು. ಅರ್ಜಿ ತಿರಸ್ಕರಿಸಿದ ನ್ಯಾಯಾಧೀಶರು ಶುಕ್ರವಾರ ನ್ಯಾಯಾಲಯದಲ್ಲಿ ಸಲ್ಲಿಸುವಂತೆ ಸೂಚಿಸಿ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.

ಮುರುಘಾಶ್ರೀ ಅವರನ್ನು ಪೊಲೀಸರು ಜಿಲ್ಲಾ ಕಾರಾಗೃಹಕ್ಕೆ ಒಪ್ಪಿಸಿದರು. ತಪಾಸಣೆ ನಡೆಸಿದ ಜೈಲು ಸಿಬ್ಬಂದಿ ಅವರನ್ನು ಕಾರಾಗೃಹಕ್ಕೆ ಕರೆದೊಯ್ದರು. ಸ್ಥಳದಲ್ಲಿದ್ದ ಕೆಲ ಭಕ್ತರು ಕಣ್ಣೀರಾದರು. ಇನ್ನೂ ಹಲವರು ಭಾವೋದ್ವೇಗದಿಂದ ಬಿಕ್ಕಳಿಸಿದರು.

ರಾತ್ರಿ ಏನಾಯಿತು?
* ಗುರುವಾರ ರಾತ್ರಿ 9.30ಕ್ಕೆ ಮುರುಘಾ ಮಠ ಪ್ರವೇಶಿಸಿದ ಪೊಲೀಸರು
* ರಾತ್ರಿ 10ಕ್ಕೆ ಶಿವಮೂರ್ತಿ ಮುರುಘಾ ಶರಣರನ್ನು ವಶಕ್ಕೆ ಪಡೆದ ತನಿಖಾ ತಂಡ
* ರಾತ್ರಿ 10.45ಕ್ಕೆ ಚಳ್ಳಕೆರೆಯ ಡಿವೈಎಸ್‌ಪಿ ಕಚೇರಿಗೆ ಹಾಜರು, ಪ್ರಾಥಮಿಕ ವಿಚಾರಣೆ
* ರಾತ್ರಿ 12.48ಕ್ಕೆ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ಆರಂಭ
* ನಸುಕಿನ 2.46ಕ್ಕೆ ನ್ಯಾಯಾಧೀಶರ ಎದುರು ಹಾಜರು
* ನಸಕಿನ 3 ಗಂಟೆಗೆ ಜೈಲು ಸೇರಿದ ಶರಣರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT