ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತ್ಯ ಪ್ರೀತಿಸಿದರೆ ಬದುಕು ಸುಂದರ

ವಿಮರ್ಶಕ ಡಾ.ಎಸ್.ಮಾರುತಿ ಅಭಿಮತ
Last Updated 11 ನವೆಂಬರ್ 2019, 16:30 IST
ಅಕ್ಷರ ಗಾತ್ರ

ಚಿತ್ರದುರ್ಗ: ಬದುಕು ಕಲಿಸುವ ಸಾಹಿತ್ಯ, ಕಾವ್ಯವನ್ನು ಪ್ರೀತಿಸಬೇಕು. ಆಗ ಬದುಕು ಸುಂದರವಾಗುತ್ತದೆ ಎಂದು ವಿಮರ್ಶಕ ಡಾ.ಎಸ್.ಮಾರುತಿ ಅಭಿಪ್ರಾಯಪಟ್ಟರು.

ಇಲ್ಲಿನ ದಾವಣಗೆರೆ ವಿಶ್ವವಿದ್ಯಾಲಯದ ಜಿ.ಆರ್.ಹಳ್ಳಿ ಸ್ನಾತಕೋತ್ತರ ಕೇಂದ್ರದಲ್ಲಿ ಕನ್ನಡ ಮತ್ತು ಇಂಗ್ಲಿಷ್ ವಿಭಾಗ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೋಮವಾರ ಹಮ್ಮಿಕೊಂಡಿದ್ದ ಕವಿಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಕಾವ್ಯ ಬದುಕಿನಿಂದ ಆರಂಭವಾಗುತ್ತದೆ. ಕವಿತೆ ಹುಟ್ಟದೇ ಇದ್ದರೆ ಬದುಕು ಕೊನೆಯಾಗುತ್ತದೆ. ಜೀವನ ರೂಪಿಸುವ ಕವಿತೆ ಪ್ರಕಟವಾಗಬೇಕಿಲ್ಲ. ಕವಿತೆಯನ್ನು ಬರೆಯುತ್ತಾ ಹೋದರೆ ಸಾಕು, ಕವಿಯ ಬದುಕು ಉಜ್ವಲಗೊಳ್ಳುತ್ತದೆ’ ಎಂದು ಹೇಳಿದರು.

‘ಕನ್ನಡದ ಸಹೃದಯಿಗಳು ಕಾವ್ಯದಿಂದ ದೂರ ಸರಿಯುತ್ತಿದ್ದಾರೆ. ಸಾಹಿತ್ಯಾಸಕ್ತರು ಕಡಿಮೆಯಾಗುತ್ತಿದ್ದಾರೆ. ಜನರನ್ನು ಸಾಹಿತ್ಯದ ಸಮೀಪಕ್ಕೆ ತರುವ ಪ್ರಯತ್ನ ಪ್ರಜ್ಞಾಪೂರ್ವಕವಾಗಿ ಆಗಬೇಕಿ. ಸಾಹಿತ್ಯದ ರುಚಿ ಉಣಿಸುವ ಕೆಲಸವನ್ನು ಸರ್ಕಾರವೂ ಕೈಗೆತ್ತಿಕೊಂಡಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಚಿಲಿ ದೇಶದ ಪಾಬ್ಲೊ ನೆರೂಡಾ ತನ್ನದೇ ಭಾಷೆಯಲ್ಲಿ ಸಾಹಿತ್ಯ ರಚಿಸಿದರು. ಅವರಿಗೆ ನೋಬೆಲ್‌ ಪ್ರಶಸ್ತಿ, ಅಂತರರಾಷ್ಟ್ರೀಯ ಮನ್ನಣೆ ದೊರೆಯಿತು. ಕನ್ನಡದಲ್ಲಿ ಸಾಹಿತ್ಯ ಬರೆಯುವವರು ಕೂಡ ನೋಬೆಲ್‌ ಪಡೆಯಲು ಅರ್ಹರು. ಆಶಾಭಾವನೆಯಿಂದ ಸಾಹಿತ್ಯ ಕೃಷಿಯಲ್ಲಿ ತೊಡಗೋಣ’ ಎಂದು ಸಲಹೆ ನೀಡಿದರು.

‘ಕವಿಯ ಒಡಲಿನಿಂದ ಕಾವ್ಯ ಹುಟ್ಟುತ್ತದೆ. ನೆರೂಡಾ ಕಾವ್ಯ ವಾಚನ ಮಾಡತೊಡಗಿದರೆ ಜನ ಸೇರುತ್ತಿದ್ದರು. ಕನ್ನಡದ ಪ್ರೇಮ ಕವಿ ಕೆ.ಎಸ್‌.ನರಸಿಂಹಸ್ವಾಮಿ ಅವರ ಕಾವ್ಯ ಜನಸಾಮಾನ್ಯರನ್ನೂ ತಲುಪಿತು. ಸಹೃದಯಿಗಳನ್ನು ಹುಡುಕಿಕೊಂಡು ಹೋಗುವ ಕಾವ್ಯ ಕನ್ನಡದಲ್ಲಿ ರಚನೆಯಾಗಬೇಕಿದೆ’ ಎಂದರು.

ಜಿ.ಆರ್.ಹಳ್ಳಿ ಸ್ನಾತಕೋತ್ತರ ಕೇಂದ್ರದ ಸಂಯೋಜನಾಧಿಕಾರಿ ಡಾ.ಕೆ.ಟಿ.ಶ್ರೀನಿವಾಸ್ ಮಾತನಾಡಿ, ‘ಕನ್ನಡ ಓದಿದವರಿಗೆ ಉದ್ಯೋಗಾವಕಾಶ ಕಡಿಮೆ. ಕನ್ನಡದ ಸಾಹಿತ್ಯ, ಕವಿತೆ ವ್ಯವಹಾರಿಕವಾಗಿ ಬೆಳೆದಿಲ್ಲ. ಹೀಗಾಗಿ ಕನ್ನಡ ಭಾಷೆಗೆ ಇಂತಹ ಸಮಸ್ಯೆ ಉದ್ಭವಿಸಿದೆ’ ಎಂದು ಅಭಿಪ್ರಾಯಪಟ್ಟರು.

‘ಹಿಂದಿ ಭಾಷೆಯಲ್ಲಿ ಶಿಕ್ಷಣ ಪಡೆದವರಿಗೆ ಕಾರ್ಪೊರೇಟ್‌ ಕಂಪನಿಯಲ್ಲಿ ಕೆಲಸ ಸಿಗುತ್ತಿದೆ. ಭಾಷಾಂತರ ಮಾಡುವವರಿಗೆ ಕೈತುಂಬ ವೇತನ ಸಿಗುತ್ತಿದೆ. ಆದರೆ, ಕನ್ನಡದ ಪದವೀಧರರು ನಿರುದ್ಯೋಗಿಗಳಾಗುತ್ತಿದ್ದಾರೆ. ಕನ್ನಡ ಭಾಷೆಯನ್ನು ವ್ಯವಹಾರಿಕವಾಗಿ ಬೆಳೆಸಲು ಪ್ರಯತ್ನಿಸಬೇಕು’ ಎಂದು ಕಿವಿಮಾತು ಹೇಳಿದರು.

ವಿಮರ್ಶಕಿ ತಾರಿಣಿ ಶುಭದಾಯಿನಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಧ್ಯಾಪಕಿ ಆರ್.ಪುಷ್ಪಲತಾ, ಇಂಗ್ಲಿಷ್ ವಿಭಾಗದ ಪ್ರಾಧ್ಯಾಪಕರಾದ ಡಾ.ರವಿಕುಮಾರ್ ಕುಂಬಾರ್, ಎಚ್.ಆರ್.ಮದಕರಿ ನಾಯಕ, ಡಾ.ಜಗದೀಶ್ ಕೆರೆನಹಳ್ಳಿ, ಡಾ.ಬಿ.ಎಂ.ಗುರುನಾಥ್ ಇದ್ದರು.

ಯೋಗೀಶ್ ಸಹ್ಯಾದ್ರಿ, ಬಿ.ಮೋಹಿದ್ದೀನ್ ಖಾನ್, ಕೊರ‍್ಲುಕುಂಟೆ ತಿಪ್ಪೇಸ್ವಾಮಿ, ಡಾ.ಸಿ.ಗುರುಸ್ವಾಮಿ, ನಟರಾಜ್, ಶಾರದಮ್ಮ ಕಂಪಾಲಿ, ಪ್ರವರ ಕೊಟ್ಟೂರು, ಟಿ.ತಿಪ್ಪೇಸ್ವಾಮಿ ಕೆರೆಯಾಗಳಹಳ್ಳಿ, ಡಾ.ಯಶೋಧರ ಗುಳ್ಯ, ಕೆ.ಬಿ.ರವಿಕುಮಾರ್, ಡಾ.ಎನ್. ಧನಕೋಟಿ, ಆನಂದ್ ದ್ಯಾವರನಹಳ್ಳಿ ಕವನ ವಾಚನ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT