ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆ ಕಿತ್ತೂರು ರಾಣಿ ಚೆನ್ಮಮ್ಮನಾಗಲು ವ್ಯವಸ್ಥೆಯೇ ಅಡ್ಡಿ: ಡಾ.ಕೆ.ಚಿದಾನಂದ

ಕಿತ್ತೂರು ರಾಣಿ ಚೆನ್ಮಮ್ಮ ಜಯಂತಿಯಲ್ಲಿ ಪ್ರಾಧ್ಯಾಪಕ ಡಾ.ಕೆ.ಚಿದಾನಂದ ಬೇಸರ
Last Updated 23 ಅಕ್ಟೋಬರ್ 2021, 12:11 IST
ಅಕ್ಷರ ಗಾತ್ರ

ಚಿತ್ರದುರ್ಗ: ಪ್ರತಿಯೊಂದು ಮನೆಯಲ್ಲಿಯೂ ರಾಣಿ ಚೆನ್ನಮ್ಮ ಇದ್ದಾರೆ. ಆದರೆ, ರಾಣಿ ಚೆನ್ಮಮ್ಮಳಾಗಿ ರೂಪುಗೊಳ್ಳಲು ನಮ್ಮ ಸಾಮಾಜಿಕ ವ್ಯವಸ್ಥೆ ಬಿಡುತ್ತಿಲ್ಲ ಎಂದು ಸರ್ಕಾರಿ ಕಲಾ ಕಾಲೇಜು ಸಹಾಯಕ ಪ್ರಾಧ್ಯಾಪಕ ಡಾ.ಕೆ.ಚಿದಾನಂದ ಅಭಿಪ್ರಾಯಪಟ್ಟರು.

ನಗರದ ತರಾಸು ರಂಗಮಂದಿರದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ವತಿಯಿಂದ ಹಮ್ಮಿಕೊಂಡಿದ್ದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯಲ್ಲಿ ಅವರು ಮಾತನಾಡಿದರು. ‘ಕಿತ್ತೂರು ರಾಣಿ ಚೆನ್ನಮ್ಮ ಅವರು ಮಹಿಳೆಯರ ಸ್ವಾತಂತ್ರ್ಯ ಹಾಗೂ ಸ್ವಾಭಿಮಾನದ ದೊಡ್ಡ ಸಂಕೇತ. ರಾಣಿ ಚೆನ್ನಮ್ಮ ಎಲ್ಲ ಮಹಿಳೆಯರಿಗೆ ಸ್ಫೂರ್ತಿಯಾಗಿದ್ದಾರೆ. ಈ ಸ್ಫೂರ್ತಿಯು ಮಹಿಳಾ ಸಬಲೀಕರಣಕ್ಕೆ ಪೂರಕವಾಗಲಿ’ ಎಂದು ಆಶಯ ವ್ಯಕ್ತಪಡಿಸಿದರು.

‘ರಾಣಿ ಚೆನ್ನಮ್ಮ ಅವರು 18ನೇ ಶತಮಾನದಲ್ಲಿಯೇ ಕತ್ತಿವರಸೆ, ಕುದರೆ ಸವಾರಿ, ಮಲ್ಲಯುದ್ಧ ಕಲೆಯನ್ನು ಕಲಿಯುವಂತಹ ಸಾಹಸ ತೋರಿದರು. ಸಾಮಾಜಿಕ ಅಡೆತಡೆಗಳನ್ನು ಮೀರಿ ಬೆಳೆದರು. 15ನೇ ವರ್ಷಕ್ಕೆ ಬಾಲ್ಯವಿವಾಹವಾದ ಚೆನ್ಮಮ್ಮ, ಗಂಡನ ಮರಣ, ಪುತ್ರ ಶೋಕದ ಸವಾಲುಗಳ ನಡುವೆ ವೀರಾಗ್ರಣಿಯಾಗಿ ಹೊರಹೊಮ್ಮಿದರು’ ಎಂದು ಹೇಳಿದರು.

‘ಚೆನ್ನಮ್ಮ ಕೇವಲ ರಾಣಿಯಾಗಿ ಕೆಲಸ ಮಾಡಲಿಲ್ಲ. ಜೊತೆಗೆ ಉತ್ತಮ ಆಡಳಿತಗಾರರಾಗಿದ್ದರು. ಕತ್ತಿಗಿಂತ ಹೆಚ್ಚಾಗಿ ಪೆನ್ನು ಬಳಕೆ ಮಾಡಿರುವುದನ್ನು ಕಾಣಬಹುದು. ಬ್ರಿಟಿಷ್ ಸರ್ಕಾರದ ಜೊತೆ ನಡೆಸಿದ ಪತ್ರವ್ಯವಹಾರಗಳು ಇದಕ್ಕೆ ಸಾಕ್ಷಿಯಾಗಿವೆ’ ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಇ.ಬಾಲಕೃಷ್ಣ ಮಾತನಾಡಿ, ‘ಕಿತ್ತೂರು ರಾಣಿ ಚೆನ್ನಮ್ಮ ಅವರು ಆಗಿನ ಕಾಲಘಟ್ಟದಲ್ಲಿ ಯುದ್ಧದ ಅಭ್ಯಾಸ ಮಾಡಿದ್ದರು. ಚೆನ್ನಮ್ಮ ಅವರು ತನ್ನ ರಾಜ್ಯದ ರಕ್ಷಣೆಗಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ಮೊದಲ ಮಹಿಳೆಯಾಗಿದ್ದಾರೆ. ಮಹಿಳೆಯರಿಗೆ ಸಮಾನ ಅವಕಾಶ ಸಿಗಬೇಕು’ ಎಂದರು.

‘ವ್ಯಾಪಾರಕ್ಕಾಗಿ ದೇಶಕ್ಕೆ ಬಂದ ಬ್ರಿಟಿಷರು ಹಂತ ಹಂತವಾಗಿ ಆಳ್ವಿಕೆ ಮಾಡುತ್ತಾ ಹೋದರು. ಚೆನ್ನಮ್ಮ ಅವರ ಧೈರ್ಯ, ಹೋರಾಟದ ಕಿಚ್ಚು ಬ್ರಿಟಿಷರಲ್ಲಿ ಇರಲಿಲ್ಲ. ಬ್ರಿಟಿಷರ ಕುತಂತ್ರಕ್ಕೆ ಚೆನ್ನಮ್ಮ ಬಲಿಯಾದರು. ಚೆನ್ನಮ್ಮ ಎಂಬ ಹೆಸರಿನಲ್ಲಿಯೇ ಶಕ್ತಿ ಇದೆ. ಶಕ್ತಿಮಾತೆ ಚೆನ್ನಮ್ಮ ನಮ್ಮೆಲ್ಲರಿಗೂ ಆದರ್ಶವಾಗಿದ್ದಾರೆ’ ಎಂದು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಧನಂಜಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಮಹಡಿ ಶಿವಮೂರ್ತಿ, ಪ್ರಧಾನ ಕಾರ್ಯದರ್ಶಿ ಮಹೇಶ್, ವೀರಶೈವ ಸಮಾಜ ಕಾರ್ಯದರ್ಶಿ ಎನ್.ಬಿ.ವಿಶ್ವನಾಥ್, ಮಹಿಳಾ ಸಮಾಜದ ಅಧ್ಯಕ್ಷರಾದ ಜ್ಯೋತಿ ದೇವೆಂದ್ರಪ್ಪ, ಉಪಾಧ್ಯಕ್ಷೆ ಮೋಕ್ಷಾ ರುದ್ರಸ್ವಾಮಿ, ಕಿತ್ತೂರು ರಾಣಿ ಚೆನ್ನಮ್ಮ ಮಹಿಳಾ ಘಟಕದ ಕಾರ್ಯದರ್ಶಿ ರೀನಾ ವೀರಭದ್ರಪ್ಪ, ಉಪವಿಭಾಗಾಧಿಕಾರಿ ಆರ್.ಚಂದ್ರಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT