ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಕ್ಕೊ, ಕಬಡ್ಡಿ ಅಂಕಣಗಳಿಗೆ ಬೇಕಿದೆ ಕಾಯಕಲ್ಪ

ಜಿಲ್ಲಾ ಕೇಂದ್ರದಲ್ಲಿ ಸಂಪೂರ್ಣ ನಿರ್ಲಕ್ಷ್ಯ; ಸಮಸ್ಯೆಯಲ್ಲಿ ಕ್ರೀಡಾಪಟುಗಳು, ಖಾಸಗಿ ಜಾಗಗಳೇ ಆಸರೆ
Last Updated 5 ಡಿಸೆಂಬರ್ 2022, 5:37 IST
ಅಕ್ಷರ ಗಾತ್ರ

ಚಿತ್ರದುರ್ಗ: ಜಿಲ್ಲಾ ಕೇಂದ್ರದಲ್ಲಿರುವ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಗ್ರಾಮೀಣ ಕ್ರೀಡೆಗಳಾದ ಕೊಕ್ಕೊ– ಕಬಡ್ಡಿಯ ಅಂಕಣಗಳು ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಮುಖ್ಯ ಕ್ರೀಡಾಂಗಣದ ಹೊರಭಾಗದಲ್ಲಿರುವ ಈ ಎರಡು ಕೋರ್ಟ್‌ಗಳು ಇದ್ದೂ ಇಲ್ಲದಂತಾಗಿವೆ.

ದಶಕದ ಹಿಂದೆ ಸಿಂಥೆಟಿಕ್‌ ಟ್ರ್ಯಾಕ್‌ ಅಳವಡಿಸಿ ಕ್ರೀಡಾಂಗಣಕ್ಕೆ ನೂತನ ಸ್ಪರ್ಶ ನೀಡಲಾಗಿತ್ತು. ಆ ಸಂದರ್ಭ ಕ್ರೀಡಾಂಗಣದಲ್ಲಿದ್ದ ಕೊಕ್ಕೊ–ಕಬಡ್ಡಿ ಅಂಕಣಗಳನ್ನು ಒಳಾಂಗಣ ಕ್ರೀಡಾಂಗಣದ ಆವರಣಕ್ಕೆ ಸ್ಥಳಾಂತರಿಸಲಾಯಿತು. ಆದರೆ, ಅಭಿವೃದ್ಧಿ ಮಾತ್ರ ಈವರೆಗೂ ಕಂಡಿಲ್ಲ. ನಿರ್ವಹಣೆಯ ಕೊರತೆಯಿಂದ ಅವು ಸೊರಗಿ ಹೋಗಿವೆ.

ರಾಜ್ಯ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳಾಗಿ ರೂಪುಗೊಳ್ಳುವ ಹಂಬಲದಿಂದ ಬರುವ ಆಟಗಾರರು ಅಂಕಣಗಳ ಸ್ಥಿತಿ ಕಂಡು ಕೊರಗುತ್ತಿದ್ದಾರೆ.

400 ಮೀಟರ್‌ ಸಿಂಥೆಟಿಕ್‌ ಟ್ರ್ಯಾಕ್‌ ಅಳವಡಿಸಿ ಅಥ್ಲೆಟಿಕ್ಸ್‌ಗೆ ಅನುಕೂಲ ಕಲ್ಪಿಸಿದಂತೆ ಈ ಅಂಕಣಗಳಿಗೂ ಅಭಿವೃದ್ಧಿಯ ಭಾಗ್ಯ ಸಿಗುತ್ತದೆ ಎಂಬ ಆಸೆಯಲ್ಲಿ ಯುವ ಕ್ರೀಡಾಪಟುಗಳಿದ್ದರು. ಕ್ರೀಡಾ ಕ್ಷೇತ್ರದಲ್ಲಿ ಉತ್ತುಂಗಕ್ಕೆ ಬೆಳೆಯುವ ಕನಸಿನೊಂದಿಗೆ ಯುವಸಮೂಹ ನಿತ್ಯ ಕ್ರೀಡಾಂಗಣಕ್ಕೆ ಇಳಿಯುವ ಹುಮ್ಮಸ್ಸು ತೋರಿಸಿತ್ತು. ಆದರೆ, ಅಗತ್ಯ ಪ್ರೋತ್ಸಾಹ, ಪೂರಕ ವಾತಾವರಣ, ತರಬೇತುದಾರರ ಕೊರತೆ ಕಾರಣಕ್ಕೆ ಕಬಡ್ಡಿ, ಕೊಕ್ಕೊ ಎಂದರೆ ಉತ್ಸಾಹ ತೋರುತ್ತಿಲ್ಲ.

ಅಂಕಣಗಳಿರುವ ಪ್ರದೇಶ ಗಿಡ–ಗಂಟಿಗಳಿಂದ ಆವೃತವಾಗಿದೆ. ನಾಯಿ, ಕುರಿ, ಜಾನುವಾರುಗಳು ನುಗ್ಗುವುದು ಸಾಮಾನ್ಯವಾಗಿದೆ. ಸಂಜೆ ಅಥವಾ ನಸುಕಿನಲ್ಲಿ ಅಭ್ಯಾಸ ನಡೆಸಲು ಸರಿಯಾದ ವಿದ್ಯುತ್‌ ದೀಪದ ವ್ಯವಸ್ಥೆ ಇಲ್ಲ. ಕತ್ತಲಾಗುತ್ತಿದ್ದಂತೆಯೇ ಅಲ್ಲಿ ಭಿನ್ನ ಚಟುವಟಿಕೆಗಳೇ ನಡೆಯುತ್ತವೆ. ಅಲ್ಲಲ್ಲಿ ಕಾಣಿಸುವ ಮದ್ಯದ ಬಾಟಲಿ ಚೂರುಗಳು ಇದಕ್ಕೆ ಸಾಕ್ಷ್ಯ ಒದಗಿಸುತ್ತವೆ. ಅಭ್ಯಾಸಕ್ಕೆ ಬರುವವರಿಗೆ ಆವರಣ ಸ್ವಚ್ಛಗೊಳಿಸುವುದೇ ದೊಡ್ಡ ಸವಾಲಾಗಿದೆ.

ಕಲ್ಲಿನಿಂದ ಕೂಡಿರುವ ಕೊಕ್ಕೊ ಅಂಕಣದ ಅಭಿವೃದ್ಧಿಗೆ ಹುತ್ತದ ಮಣ್ಣಿನ ಅಗತ್ಯವಿದೆ. ಜತೆಗೆ ಆವರಣದಲ್ಲಿ ವಿದ್ಯುತ್‌ ಕಂಬ ಇರುವ ಕಾರಣ ಆಟಗಾರರು ಸಮಸ್ಯೆ ಅನುಭವಿಸುತ್ತಿದ್ದಾರೆ. ಅಗತ್ಯವಿರುವ ಕಂಬ, ನೀರಿನ ವ್ಯವಸ್ಥೆ ಮತ್ತು ಶೌಚಾಲಯದ ಸಮಸ್ಯೆ ಕಾಡುತ್ತಿದೆ.

‘ಪ್ರತಿ ವರ್ಷ ಜಿಲ್ಲೆಯಿಂದ ಕನಿಷ್ಠ ಮೂವರು ಕೊಕ್ಕೊ ಪಟುಗಳು ರಾಷ್ಟ್ರಮಟ್ಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸುತ್ತಿದ್ದರು. ಆದರೆ, ಅಗತ್ಯ ಸೌಲಭ್ಯಗಳ ಕೊರತೆಯಿಂದಾಗಿ ಕೊಕ್ಕೊ ಆಡುವವರ ಆಸಕ್ತಿ ಕಡಿಮೆಯಾಗುತ್ತಿದೆ. ಕೇವಲ ದಸರಾ ಕ್ರೀಡಾಕೂಟ, ಶಾಲಾ, ಕಾಲೇಜು ಕ್ರೀಡಾಕೂಟಗಳಿಗೆ ಮಾತ್ರ ಕ್ರೀಡಾಪಟುಗಳು ಸೀಮಿತವಾಗಿದ್ದಾರೆ. ಅಂಕಣದ ಸಮೀಪವಿರುವ ಕಂಬವನ್ನು ತೆರವುಗೊಳಿಸಿ, ಹೊನಲು ಬೆಳಕಿನ ವ್ಯವಸ್ಥೆ ಕಲ್ಪಿಸಬೇಕು’ ಎನ್ನುತ್ತಾರೆ ಕ್ರೀಡಾಪಟುಗಳು.

ಈ ವಿಚಾರವಾಗಿ ಕೆಲ ದಿನಗಳ ಹಿಂದೆ ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ ಅವರಿಗೆ ಆಟಗಾರರು ಅಂಕಣದ ಅಭಿವೃದ್ಧಿಗೆ ಅನುದಾನ ನೀಡುವಂತೆ ಮನವಿ ಸಲ್ಲಿಸಿದರು. ಕಬಡ್ಡಿ, ಕೊಕ್ಕೊ ಅಂಕಣಗಳ ಸ್ಥಿತಿ ಒಂದೇ ಆಗಿದ್ದು, ಅಧಿಕಾರಿಗಳಿಗೆ ನಿರಂತರವಾಗಿ ಹಿರಿಯ ಆಟಗಾರರು ಮನವಿ ಸಲ್ಲಿಸುತ್ತಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಈ ಮನವಿಗಳು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಪತ್ರ ವ್ಯವಹಾರಕ್ಕೆ ಸೀಮಿತವಾಗಿಯೇ ವಿನಾ ಕಾರ್ಯರೂಪಕ್ಕೆ ಬರುತ್ತಿಲ್ಲ.

ಜಿಲ್ಲಾ ಕ್ರೀಡಾಂಗಣದಲ್ಲಿ ಅಥ್ಲೆಟಿಕ್‌ ಹಾಗೂ ವಾಲಿಬಾಲ್‌ಗೆ ಹೊರತುಪಡಿಸಿ ಉಳಿದ ಕ್ರೀಡೆಗಳಿಗೆ ತರಬೇತುದಾರರಿಲ್ಲ. ಶಾಲೆಗಳ ದೈಹಿಕ ಶಿಕ್ಷಣ ಶಿಕ್ಷಕರು, ಅಸೋಸಿಯೇಷನ್‌, ಕ್ಲಬ್‌ಗಳ ತರಬೇತುದಾರರು ಹೊಸ ಆಟಗಾರರನ್ನು ಸಿದ್ಧಗೊಳಿಸುತ್ತಿದ್ದಾರೆ.

***

ಜಿಲ್ಲೆಯಲ್ಲಿ ದೇಸಿ ಕ್ರೀಡೆಗಳ ಅಭ್ಯಾಸಕ್ಕೆ ಸೂಕ್ತ ವ್ಯವಸ್ಯೆ ಇಲ್ಲವಾಗಿದೆ ಎಂಬುದು ಗಮನಕ್ಕೆ ಬಂದಿದೆ. ಜಿಲ್ಲಾ ಕೇಂದ್ರದಲ್ಲಿ ಕಬಡ್ಡಿ, ಕೊಕ್ಕೊ ಅಂಕಣಗಳ ಅಭಿವೃದ್ಧಿಗೆ ಶಾಸಕರು ಸೂಚಿಸಿದ್ದು, ಶೀಘ್ರವೇ ಕ್ರೀಡಾಪಟುಗಳಿಗೆ ಅನುಕೂಲ ಕಲ್ಪಿಸಲಾಗುವುದು.

-ಎಂ.ಎಸ್‌. ದಿವಾಕರ್‌, ಜಿಲ್ಲಾ ಪಂಚಾಯಿತಿ ಸಿಇಒ

***

ಜಿಲ್ಲಾ ಕೇಂದ್ರದಲ್ಲಿ ಕೊಕ್ಕೊ ಅಂಕಣವನ್ನು ಹುಡುಕುವ ಪರಿಸ್ಥಿತಿಯಿದೆ. ವರ್ಷದಿಂದ ವರ್ಷಕ್ಕೆ ಅಭಿವೃದ್ಧಿಗೊಳ್ಳಬೇಕಿದ್ದ ಕೋರ್ಟ್‌ ಸಂಪೂರ್ಣ ಹಾಳಾಗಿದೆ. ಸೌಲಭ್ಯ ಕಲ್ಪಿಸಿದರೆ ಯುವ ಕ್ರೀಡಾಪಟುಗಳು ಅಭ್ಯಾಸಕ್ಕೆ ಬರುತ್ತಾರೆ.

-ಎಸ್‌.ಸತೀಶ್‌ ಬಾಬು, ರಾಷ್ಟ್ರೀಯ ಕೊಕ್ಕೊ ಆಟಗಾರ

***

ಜಿಲ್ಲಾ ಕ್ರೀಡಾಂಗಣದಲ್ಲಿ ಜಾಗಕ್ಕೆ ಕೊರತೆ ಇಲ್ಲದಿದ್ದರೂ ಅಧಿಕಾರಿಗಳು ಕಬಡ್ಡಿ ಅಂಕಣದ ಅಭಿವೃದ್ಧಿಗೆ ಮುಂದಾಗುತ್ತಿಲ್ಲ. ಮ್ಯಾಟ್‌ ಅಂಕಣಕ್ಕೆ ಒಳಾಂಗಣದಲ್ಲಿ ವ್ಯವಸ್ಥೆ ಮಾಡಿ ಎಂದು ಮನವಿ ಸಲ್ಲಿಸಿದರೂ ಗಮನಹರಿಸುತ್ತಿಲ್ಲ.

-ಡಿ.ಜೆ.ರಮೇಶ್‌, ರಾಷ್ಟ್ರೀಯ ಕಬಡ್ಡಿ ಆಟಗಾರ

***

ಗ್ರಾಮೀಣ ಕ್ರೀಡೆಗಳ ಉಳಿವಿಗೆ ಇಂದಿನ ಅಗತ್ಯಕ್ಕೆ ತಕ್ಕಂತಹ ಕ್ರೀಡಾ ಅಂಕಣಗಳು, ತರಬೇತುದಾರರ ವ್ಯವಸ್ಥೆಯನ್ನು ಸರ್ಕಾರ ಮಾಡಬೇಕು. ಆಗ ಮಾತ್ರ ಯುವ ಸಮುದಾಯ ಹೆಚ್ಚಾಗಿ ಭಾಗವಹಿಸಿ ಅಭ್ಯಾಸ ಮಾಡುತ್ತಾರೆ.

-ಎಂ.ಪಿ.ತಿಪ್ಪೇಸ್ವಾಮಿ, ಕಾರ್ಯದರ್ಶಿ, ಜಿಲ್ಲಾ ಕಬಡ್ಡಿ ಸಂಸ್ಥೆ

***

ಹೊಸದುರ್ಗ ತಾಲ್ಲೂಕು ಕ್ರೀಡಾಂಗಣದಲ್ಲಿ ಕೊಕ್ಕೊ– ಕಬಡ್ಡಿ ಅಂಕಣಗಳು ಇದ್ದೂ ಇಲ್ಲದಂತಾಗಿದೆ. ಕಬಡ್ಡಿ ತರಬೇತಿ ಪಡೆಯುವವರೇ ನಿತ್ಯ ಕೋರ್ಟ್‌ ಸಿದ್ಧಪಡಿಸಿಕೊಳ್ಳುತ್ತಾರೆ. ಕ್ರೀಡಾಕೂಟವಿದ್ದಾಗ ಮಾತ್ರ‌ ಸಿಬ್ಬಂದಿ ಅಂಕಣ ಸಿದ್ಧಪಡಿಸುತ್ತಾರೆ.

-ಚಂದ್ರಶೇಖರ್‌, ಕ್ರೀಡಾಪಟು

***

ಕ್ರೀಡಾಭ್ಯಾಸಕ್ಕೆ ಮೈದಾನದ ಕೊರತೆ

ಹಿರಿಯೂರು: ಗ್ರಾಮೀಣ ಕ್ರೀಡೆಗಳಲ್ಲಿ ಅಗ್ರಸ್ಥಾನದಲ್ಲಿರುವ ಕಬಡ್ಡಿ– ಕೊಕ್ಕೊ ಕ್ರೀಡೆ ಜಿಲ್ಲೆಯಲ್ಲೇ ಹೆಸರು ಪಡೆದಿದೆ. ಆದರೆ ಅಭ್ಯಾಸಕ್ಕೆ ಸೂಕ್ತ ವ್ಯವಸ್ಥೆಯಿಲ್ಲದೆ ಕ್ರೀಡಾಪಟುಗಳ ಪ್ರತಿಭೆ ಸೊರಗುತ್ತಿದೆ.

ನಗರದ ಹುಳಿಯಾರು ರಸ್ತೆಯಲ್ಲಿ ತಾಲ್ಲೂಕು ಕ್ರೀಡಾಂಗಣವಿದ್ದರೂ ಅಭ್ಯಾಸ ಮಾಡಲು ಅಂಕಣ ನಿರ್ಮಿಸಿಲ್ಲ. ಹೀಗಾಗಿ ನಗರದಲ್ಲಿರುವ ನೆಹರೂ ಮೈದಾನದಲ್ಲಿ ಅನಿವಾರ್ಯವಾಗಿ ನೂರಾರು ಅಡಚಣೆಗಳ ನಡುವೆ ಕ್ರೀಡಾಪಟುಗಳು ಅಭ್ಯಾಸ ನಡೆಸುತ್ತಿದ್ದಾರೆ.

ಮೈದಾನಕ್ಕೆ ನೀರು ಹಾಕಿ, ರೋಲ್‌ ಮಾಡಿ, ಬಿಳಿ ಪೌಡರ್ ಬಳಸಿ ಗೆರೆಗಳನ್ನು ಎಳೆದು ಅಭ್ಯಾಸ ಆರಂಭಿಸುವ ವೇಳೆಗೆ ಒಂದು– ಒಂದೂವರೆ ಗಂಟೆ ಸಮಯ ತಗುಲುತ್ತದೆ. ಸಿಂಥೆಟಿಕ್‌ ಅಂಕಣ ಇದ್ದರೆ ಇಷ್ಟು ಸಮಯವನ್ನು ಅಭ್ಯಾಸಕ್ಕೆ ಮೀಸಲಿಡಬಹುದು ಎನ್ನುತ್ತಾರೆ ಖಾಸಗಿ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ದೈಹಿಕ ಶಿಕ್ಷಣ ಶಿಕ್ಷಕ ಪರಮೇಶ್‌.

‘ಬೆಳಿಗ್ಗೆ ಮತ್ತು ಸಂಜೆ ಅಂಕಣ ಸಿದ್ಧಪಡಿಸಿ ಅಭ್ಯಾಸ ಮಾಡುತ್ತೇವೆ. ಸಾರ್ವಜನಿಕರು, ದನಕರುಗಳು, ಹಂದಿ–ನಾಯಿಗಳು ಅಂಕಣದ ಮೇಲೆ ಓಡಾಡುವುದರಿಂದ ನಿರ್ವಹಣೆ ದೊಡ್ಡ ಸಮಸ್ಯೆಯಾಗಿದೆ. ಅಂಕಣದ ಸುತ್ತ ಪರದೆ ಅಳವಡಿಸಲು ಅನುಮತಿ ಸಿಗುತ್ತಿಲ್ಲ’ ಎನ್ನುತ್ತಾರೆ ಕಬಡ್ಡಿ ಆಟಗಾರ ಶ್ರೀನಿವಾಸ್‌.

‘ಮಣ್ಣಿನ ಅಂಕಣದಲ್ಲಿ ಅಭ್ಯಾಸ ಮಾಡಿದವರು ರಾಜ್ಯ–ರಾಷ್ಟ್ರೀಯ ಪಂದ್ಯಗಳಲ್ಲಿ ಸಿಂಥೆಟಿಕ್‌ ಅಂಕಣಕ್ಕೆ ಹೊಂದಿಕೊಳ್ಳಲು ಕೆಲ ಸಮಯ ಬೇಕಾಗುತ್ತದೆ. ಕ್ರೀಡೆಯಲ್ಲಿ ನಮ್ಮದು ಕಳಪೆ ಸಾಧನೆ ಎಂದು ಭಾಷಣ ಮಾಡುವವರು ಉತ್ತಮ ಅಂಕಣ ರಚನೆ ಬಗ್ಗೆ ಧ್ವನಿ ಎತ್ತಬೇಕು. ಹಿರಿಯೂರಿನಲ್ಲಿ ಅಂತಹ ಅಂಕಣ ಇಲ್ಲದಿದ್ದರೂ ವಿಶ್ವವಿದ್ಯಾಲಯ, ರಾಷ್ಟ್ರೀಯ ಮಟ್ಟದಲ್ಲಿ ನೂರಕ್ಕೂ ಹೆಚ್ಚು ಆಟಗಾರರು ಕಬಡ್ಡಿ ಮತ್ತು ಕೊಕ್ಕೊದಲ್ಲಿ ಸಾಧನೆ ಮಾಡಿದ್ದಾರೆ’ ಎನ್ನುತ್ತಾರೆ ರಾಷ್ಟ್ರೀಯ ಕೊಕ್ಕೊ ಆಟಗಾರ ವಿಜಯ್.

ನೂರೆಂಟು ಸಮಸ್ಯೆ ನಡುವೆಯೂ ನಗರದ ನ್ಯೂ ಡೈಮಂಡ್‌ ಸ್ಪೋರ್ಟ್ಸ್‌ ಕ್ಲಬ್‌ ಆಶ್ರಯದಲ್ಲಿ ತರಬೇತಿ ಪಡೆದ ಆಟಗಾರ ಶ್ರೀನಿವಾಸ್‌ ತಲಾ 3 ಬಾರಿ ಸೀನಿಯರ್‌ ನ್ಯಾಷನಲ್‌, ಮೈಸೂರು ವಿಶ್ವವಿದ್ಯಾಲಯ ಪ್ರತಿನಿಧಿಸಿದ್ದಾರೆ. ಪ್ರಸ್ತುತ ಎನ್‌ಐಎಸ್‌ ತರಬೇತುದಾರರಾಗಿರುವ ಮಹಮದ್‌ ಇಸ್ಮಾಯಿಲ್‌ 1 ಬಾರಿ ಸಬ್‌ ಜೂನಿಯರ್‌ ನ್ಯಾಷನಲ್‌, 3 ಬಾರಿ ಕುವೆಂಪು ವಿಶ್ವವಿದ್ಯಾಲಯ ಹಾಗೂ ಒಮ್ಮೆ ಮೈಸೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ್ದಾರೆ. ಎಂ.ಎಸ್‌.ಬಾಲಕೃಷ್ಣ, ಎಂ.ಪಿ. ತಿಪ್ಪೇಸ್ವಾಮಿ, ಎಚ್‌.ಎಂ.ಮನೋಹರ, ಆರ್‌.ಮಂಜುನಾಥ್‌, ಎಂ. ಮಂಜಣ್ಣ ಅವರಂತಹ ಅನೇಕರು ಕ್ರೀಡೆಯಲ್ಲಿ ಉನ್ನತ ಸಾಧನೆ ಮಾಡಿದ್ದಾರೆ.

ಕ್ರೀಡಾ ಸೌಲಭ್ಯ; ಭಾಷಣಕ್ಕೆ ಸೀಮಿತ

ಮೊಳಕಾಲ್ಮುರು: ಗ್ರಾಮೀಣ ಕ್ರೀಡೆಗಳನ್ನು ಉಳಿಸಿ ಬೆಳೆಸಬೇಕು ಎಂಬ ಮಾತುಗಳು ತಾಲ್ಲೂಕಿನಲ್ಲಿರುವ ಕ್ರೀಡಾ ಸೌಲಭ್ಯಕ್ಕೆ ಹೋಲಿಕೆ ಮಾಡಿದಲ್ಲಿ ಭಾಷಣಕ್ಕೆ ಸೀಮಿತವಾಗಿವೆ ಎಂಬುದು ಸ್ಪಷ್ಟ.

ತಾಲ್ಲೂಕು ಕೇಂದ್ರ ಹಾಗೂ ಗ್ರಾಮೀಣ ಭಾಗದಲ್ಲಿ ಬಹುತೇಕ ಖಾಸಗಿ ಜಮೀನು, ಖಾಸಗಿ ಶಾಲೆ, ಸರ್ಕಾರಿ ಶಾಲೆಗಳ ಆವರಣಗಳು ಕ್ರೀಡಾಕೂಟಕ್ಕೆ ಸಿಮೀತವಾಗಿವೆ. ಕೆಲವೆಡೆ ಇದೂ ಸಹ ಇಲ್ಲವಾಗಿದ್ದು, ಪಾಳು ಹೊಲಗಳನ್ನು ಕ್ರೀಡಾಪಟುಗಳು ಅವಲಂಬಿಸುತ್ತಿದ್ದಾರೆ.

ತಾಲ್ಲೂಕು ಮಟ್ಟದ ಕ್ರೀಡಾಕೂಟಗಳನ್ನು ಒಂದೇ ಸ್ಥಳದಲ್ಲಿ ಆಯೋಜಿಸದೇ ಎಲ್ಲೆಲ್ಲಿ ಆಟಕ್ಕೆ ಅನುಕೂಲವಿದೆಯೋ ಆಯಾ ಗ್ರಾಮಗಳಲ್ಲಿ ಸಂಬಂಧಪಟ್ಟ ಕ್ರೀಡಾಕೂಟ ನಡೆಸಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಿ ಬರುವುದು ಶಿಕ್ಷಕರಿಗೆ ತಲೆನೋವಾಗಿ ಪರಿಣಮಿಸಿದೆ. ಸರ್ಕಾರ ಇದಕ್ಕೆ ಯಾವುದೇ ಅನುದಾನ ನೀಡುವುದಿಲ್ಲ. ಸ್ಥಳೀಯ ಸಂಪನ್ಮೂಲ ಬಳಸಿ, ಇದನ್ನು ಮಾಡಬೇಕಿರುವುದು ಇನ್ನಷ್ಟು ಕಷ್ಟದ ಕೆಲಸವಾಗಿದೆ ಎಂದು ದೈಹಿಕ ಶಿಕ್ಷಣ ಶಿಕ್ಷಕರೊಬ್ಬರು ಅಳಲು ತೋಡಿಕೊಂಡರು.

ಪಟ್ಟಣದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಸ್ಥಳ ಗುರುತಿಸುವ ಕೆಲಸ ನಡೆಯುತ್ತಿದೆ. 5 ಎಕರೆ ಜಾಗವಿದ್ದಲ್ಲಿ ಕೇಂದ್ರದ ಖೇಲೋ ಇಂಡಿಯಾ ಕಾರ್ಯಕ್ರಮದಡಿ ತಕ್ಷಣವೇ ಅನುದಾನ ಬಿಡುಗಡೆಗೆ ಅವಕಾಶವಿದೆ. ಜಾಗ ಸಿಕ್ಕ ಕೂಡಲೇ ಕಾಮಗಾರಿ ಆರಂಭಿಸಲಾಗುವುದು ಎಂದು ಸಚಿವ ಶ್ರೀರಾಮುಲು ಭರವಸೆ ನೀಡಿದ್ದಾರೆ. ಪಟ್ಟಣದ ನ್ಯಾಯಾಲಯ ಪಕ್ಕದಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಾಣ ಶೀಘ್ರ ಕಾರ್ಯ ಆರಂಭವಾಗಲಿದೆ ಎನ್ನುತ್ತಾರೆ ಬಿಜೆಪಿ ಮಂಡಲಾಧ್ಯಕ್ಷ ಪಿ.ಎಂ. ಮಂಜುನಾಥ್‌.

ಕಬಡ್ಡಿ, ಕೊಕ್ಕೊ, ವಾಲಿಬಾಲ್ ಕ್ರೀಡೆಗೆ ತಾಲ್ಲೂಕು ಹೆಸರಾಗಿದೆ. ಕಬಡ್ಡಿ, ಕೊಕ್ಕೊದಲ್ಲಿ ವಿದ್ಯಾರ್ಥಿನಿಯರು ಭರವಸೆ ಮೂಡಿಸಿದ್ದಾರೆ. ಆದರೆ ಕ್ರೀಡಾಂಗಣದ ಕೊರತೆ ಇವರ ಉತ್ಸಾಹಕ್ಕೆ ಅಡ್ಡಿಯಾಗಿದೆ ಎಂದು ಶಿಕ್ಷಕ ಮಲ್ಲಿಕಾರ್ಜುನ್‌ ಹೇಳುತ್ತಾರೆ.

ದೇಸಿ ಕ್ರೀಡೆಗೆ ಅವಕಾಶ ಕೊಡಿ

ಹೊಸದುರ್ಗ: ಇಲ್ಲಿನ ತಾಲ್ಲೂಕು ಕ್ರೀಡಾಂಗಣದಲ್ಲಿ ಕ್ರೀಡಾಕೂಟ ಇದ್ದಾಗ ಮಾತ್ರ ಕಬಡ್ಡಿ, ಕೊಕ್ಕೊ ಹಾಗೂ ವಾಲಿಬಾಲ್ ಅಂಕಣಗಳು ಕಾಣುತ್ತವೆ. ಕ್ರೀಡಾಕೂಟ ಇಲ್ಲದಿದ್ದರೆ ಕ್ರೀಡಾಂಗಣದಲ್ಲಿ ದೇಸಿ ಕ್ರೀಡೆಗಳ ಯಾವ ಅಂಕಣವು ಕಾಣಿಸುವುದಿಲ್ಲ.

ತಾಲ್ಲೂಕು ಕ್ರೀಡಾಂಗಣ ದೊಡ್ಡದಾಗಿದೆ. ಒಳಾಂಗಣ, ಹೊರಾಂಗಣ ಸೇರಿ ವಿವಿಧ ಆಟಗಳಿಗೆ ಇಲ್ಲಿ ಸೌಲಭ್ಯ ಕಲ್ಪಿಸಲಾಗಿದೆ. ಸಿಂಥೆಟಿಕ್ ಟ್ರ್ಯಾಕ್‌ ಮತ್ತು ಈಜು ಕೊಳಗಳು ಇತರೆ ತಾಲ್ಲೂಕುಗಳಿಗಿಂತ ಹೊಸದುರ್ಗವನ್ನು ಭಿನ್ನವಾಗಿಸಿವೆ.

ಕ್ರೀಡಾಂಗಣಕ್ಕೆ ನಿತ್ಯವು ಕ್ರೀಡಾಪಟುಗಳು ಅಭ್ಯಾಸಕ್ಕೆ ಬರುತ್ತಾರೆ. ಕೊಕ್ಕೊ ಹಾಗೂ ಕಬಡ್ಡಿ ಆಟಗಾರರು ಮಾತ್ರ ಅಂಕಣ ಹುಡುಕುವುದು ಸಾಮಾನ್ಯವಾಗಿದೆ. ಅವರ ತರಬೇತಿಗೂ ಇಲ್ಲಿ ಅವಕಾಶವಿಲ್ಲದಂತಾಗಿದೆ. ಇಷ್ಟು ಸೌಲಭ್ಯಗಳಿರುವ ಕ್ರೀಡಾಂಗಣದಲ್ಲಿ ದೇಸಿ ಆಟಗಳ ತರಬೇತಿ ಮರೀಚಿಕೆಯಾಗಿದೆ ಎನ್ನುತ್ತಾರೆ ಕ್ರೀಡಾಸಕ್ತ ಸಚಿನ್‌.

ಹೋಬಳಿ ಅಥವಾ ತಾಲ್ಲೂಕು ಮಟ್ಟದ ಕ್ರೀಡಾಕೂಟ ಇದ್ದಾಗ ಇಲ್ಲಿಗೆ ಬರಲು ಸಂತೋಷವಾಗುತ್ತದೆ. ಎಲ್ಲಾ ಕ್ರೀಡೆಗಳ ಅಂಕಣಗಳು ಚೆನ್ನಾಗಿವೆ. ಆದರೆ ಕೊಕ್ಕೊ ಹಾಗೂ ಕಬಡ್ಡಿ ಕೋರ್ಟ್‌ಗಳನ್ನು ಮಾತ್ರ ರಂಗೋಲಿ ಪುಡಿಯಲ್ಲಿ (ಬಿಳಿ ಪಟ್ಟೆ ಹಾಕಿ) ಗುರುತಿಸಿರುತ್ತಾರೆ. 3-4 ತಂಡ ಆಟ ಆಡುವಷ್ಟರಲ್ಲಿ ಪಟ್ಟೆ ಅಳಿಸಿರುತ್ತದೆ. ಶಿಕ್ಷಕರು ಆಟದ ನಡುವೆ ಆ ಪಟ್ಟೆ ಸರಿಪಡಿಸುವುದು ಮಾಮೂಲಿ ಸಂಗತಿಯಾಗಿದೆ.

‘ತಾತ್ಕಾಲಿಕ ಅಂಕಣಗಳ ನಿರ್ವಹಣೆ ಮಾಡದಿರುವ ಕಾರಣ ಹುಲ್ಲು ಬೆಳೆಯುತ್ತದೆ. ಪುನಃ ಕೊಕ್ಕೊ ಕೋರ್ಟ್‌ ಕಾಣುವುದು ಕ್ರೀಡಾಕೂಟದಲ್ಲಿ ಮಾತ್ರ. ತಾಲ್ಲೂಕು ಕ್ರೀಡಾಂಗಣದಲ್ಲಿ ಕೊಕ್ಕೊ, ಕಬಡ್ಡಿ, ವಾಲಿಬಾಲ್‌ ನೆಪ ಮಾತ್ರಕ್ಕೆ ಎನ್ನುವಂತಾಗಿದೆ’ ಎಂದು ಬೇಸರಿಸುತ್ತಾರೆ ವಿದ್ಯಾರ್ಥಿನಿ ಹರ್ಷಿತಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT