ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷದ ತೀರ್ಮಾನಕ್ಕೆ ಟಿಕೆಟ್‌ ಆಕಾಂಕ್ಷಿಗಳು ಬದ್ಧ

ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಹೇಳಿಕೆ
Last Updated 31 ಡಿಸೆಂಬರ್ 2022, 2:42 IST
ಅಕ್ಷರ ಗಾತ್ರ

ಚಿತ್ರದುರ್ಗ: ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಿಂದ ಕಾಂಗ್ರೆಸ್‌ನಿಂದ ಸ್ಪರ್ಧೆ ಬಯಸಿ 57 ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಯಾವುದೇ ಒತ್ತಡಕ್ಕೆ ಮಣಿಯದೆ ಟಿಕೆಟ್‌ ಘೋಷಿಸಲಾಗುತ್ತದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ತಿಳಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆಕಾಂಕ್ಷಿಗಳ ಜತೆ ಸಮಾಲೋಚನೆ ನಡೆಸಿದ್ದು, ಎಲ್ಲರೂ ತಮಗೇ ಟಿಕೆಟ್ ನೀಡಿ ಎಂದು ಮನವಿ ಮಾಡಿದ್ದಾರೆ. ಆದರೆ ಟಿಕೆಟ್‌ ಅಂತಿಮಗೊಳಿಸಿ ಪ್ರಕಟಿಸುವುದು ಹೈಕಮಾಂಡ್‌. ಈ ವಿಚಾರದಲ್ಲಿ ಯಾರ ಹಸ್ತಕ್ಷೇಪ ಸಹ ಇರುವುದಿಲ್ಲ’ ಎಂದು ತಿಳಿಸಿದರು.

‘ಜಿಲ್ಲೆಯ ನಾಲ್ಕು ಕ್ಷೇತ್ರದ ಆಕಾಂಕ್ಷಿಗಳು ಹಾಗೂ ಮುಖಂಡರುಗಳನ್ನು ಭೇಟಿ ಮಾಡಿದ್ದೇವೆ. ಆದರೆ ಎಲ್ಲರೂ ಸಹ ಅಂತಿಮವಾಗಿ ಪಕ್ಷ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧರಾಗಿದ್ದಾರೆ. ಯಾರನ್ನೇ ಅಭ್ಯರ್ಥಿಯನ್ನಾಗಿ ಘೋಷಿಸಿದರೂ ಅವರ ಗೆಲುವಿಗೆ ಶ್ರಮಿಸುವುದಾಗಿ ಹೇಳಿದ್ದಾರೆ’ ಎಂದರು.

‘ರಾಜ್ಯದ ಹಿತಕ್ಕಾಗಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲುವು ಮುಖ್ಯ. 224 ಕ್ಷೇತ್ರಗಳಿಂದ ಕಾಂಗ್ರೆಸ್‌ನಿಂದ ಸ್ಪರ್ಧೆ ಬಯಸಿ 1,350 ಅರ್ಜಿಗಳು ಬಂದಿದೆ. ಎಲ್ಲಾ ಜಿಲ್ಲೆಗಳಿಗೂ ಹೋಗಿ ಮುಖಂಡರುಗಳನ್ನು ಭೇಟಿ ಮಾಡಿದ್ದೇವೆ. ಎಐಸಿಸಿ ಸಭೆ ಕೂಡ ನಡೆದಿದೆ. 150 ಸೀಟುಗಳನ್ನು ಗೆಲ್ಲುವುದು ನಮ್ಮ ಗುರಿ’ ಎಂದು ತಿಳಿಸಿದರು.

‘ಆಪರೇಷನ್ ಕಮಲದ ಮೂಲಕ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿಗೆ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಮತ ಕೇಳುವ ನೈತಿಕತೆಯಿಲ್ಲ. ಕಳಸಾ ಬಂಡೂರಿ ಯೋಜನೆಗೆ ಡಿ.ಪಿ.ಆರ್. ಮಾಡಲು ಡಬಲ್ ಎಂಜಿನ್ ಸರ್ಕಾರಕ್ಕೆ ಮೂರೂವರೆ ವರ್ಷ ಬೇಕಾಯಿತಾ’ ಎಂದು ಪ್ರಶ್ನಿಸಿದರು. ‘ಚುನಾವಣೆ ಹಿನ್ನೆಲೆಯಲ್ಲಿ ಇಂತಹ ಬೇಜವಾಬ್ದಾರಿ ಹೇಳಿಕೆ ನೀಡುತ್ತಿರುವುದನ್ನು ವಿರೋಧಿಸಿ ಜ. 2 ರಂದು ಹೋರಾಟ ಮಾಡುತ್ತೇವೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಕ್ಷಣದಿಂದಲೂ ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ ಜಾಸ್ತಿಯಾಗಿದೆ. ಇವೆಲ್ಲದರ ನಡುವೆ ಕಮಿಷನ್ ದಂಧೆ ಹೆಚ್ಚಾಗಿದೆ. ಇವರು ‘ಜನಸಂಕಲ್ಪ ಯಾತ್ರೆ’ ಬದಲು ‘ಜನರ ಕ್ಷಮೆಯಾತ್ರೆ’ ನಡೆಸಲಿ ಎಂದು
ಆಗ್ರಹಿಸಿದರು.

‘ಚಿಲುಮೆ ಸಂಸ್ಥೆ ಮೂಲಕ ಹುಬ್ಬಳ್ಳಿ, ವಿಜಯಪುರ, ಬೆಂಗಳೂರಿನಲ್ಲಿ ವೋಟುಗಳನ್ನು ಕದಿಯುವ ಕೆಲಸ ಮಾಡುತ್ತಿರುವ ಬಿಜೆಪಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ. ಈಗಾಗಲೇ ಇಬ್ಬರು ಐಎಎಸ್‌ ಅಧಿಕಾರಿಗಳನ್ನು ಅಮಾನತುಗೊಳಿಸಿದೆ’ ಎಂದರು.

‘ಸಾಮೂಹಿಕ ನಾಯಕತ್ವದಲ್ಲಿ ಜ. 11 ರಂದು ಬೆಳಗಾಂನಿಂದ ಬಸ್‌ಯಾತ್ರೆ ಪ್ರಾರಂಭವಾಗಲಿದೆ. ಇಪ್ಪತ್ತು ಜಿಲ್ಲೆಗಳಲ್ಲಿ ಸಂಚರಿಸುವ ಈ ಯಾತ್ರೆ ಮೂಲಕ ಬಿಜೆಪಿಯ ಭ್ರಷ್ಟಾಚಾರ ಹಾಗೂ ಕಾಂಗ್ರೆಸ್‍ನ ಸಾಧನೆಗಳನ್ನು ಜನತೆಗೆ ತಿಳಿಸಲಾಗುತ್ತದೆ’ ಎಂದು ಹೇಳಿದರು.

ಎಐಸಿಸಿ ಕಾರ್ಯದರ್ಶಿ ಮಯೂರ ಜಯಕುಮಾರ್, ಕೆಪಿಸಿಸಿ ಉಪಾಧ್ಯಕ್ಷರಾದ ಎಚ್‌. ಆಂಜನೇಯ, ಬಿ.ಎನ್‌. ಚಂದ್ರಪ್ಪ, ಪ್ರಧಾನ ಕಾರ್ಯದರ್ಶಿ ಮುರಳಿಧರ ಹಾಲಪ್ಪ, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ. ತಾಜ್‌ಪೀರ್‌, ಕಾರ್ಯಾಧ್ಯಕ್ಷ ಹಾಲಸ್ವಾಮಿ, ಶಾಸಕ ಟಿ. ರಘುಮೂರ್ತಿ, ಮಾಜಿ ಶಾಸಕರಾದ ಡಿ. ಸುಧಾಕರ್‌, ಬಿ.ಜಿ. ಗೋವಿಂದಪ್ಪ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಕೆ.ಪಿ. ಸಂಪತ್‌ ಕುಮಾರ್, ಡಿ.ಎನ್‌. ಮೈಲಾರಪ್ಪ ಇದ್ದರು.

............

ಆಕಾಂಕ್ಷಿಗಳ ದಂಡು

ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಕಾಂಗ್ರೆಸ್‌ ಪಕ್ಷದ 57 ಆಕಾಂಕ್ಷಿಗಳು ಬೆಂಬಲಿಗರೊಂದಿಗೆ ನಗರದ ಜಿಲ್ಲಾ ಕಾಂಗ್ರೆಸ್‌ ಘಟಕದ ಕಚೇರಿಗೆ ಶುಕ್ರವಾರ ಆಗಮಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್‌, ಕೆಪಿಸಿಸಿ ಕಾರ್ಯದರ್ಶಿ ಮಯೂರ ಜಯಕುಮಾರ್‌ ಸಮಿತಿ ಮುಂದೆ ತಮ್ಮ ನಾಯಕರಿಗೆ ಟಿಕೆಟ್‌ ನೀಡಿ ಎಂದು ಬೆಂಬಲಿಗರು ಆಗ್ರಹಿಸಿದರು.

ಮುರುಘಾ ಶರಣರ ವಿರುದ್ಧ ಪಿತೂರಿ ಪ್ರಕರಣದಲ್ಲಿ ಬಂಧನವಾಗಿ ಜಾಮೀನಿನ ಮೇಲೆ ಹೊರಬಂದಿರುವ ಮಾಜಿ ಶಾಸಕ ಎಸ್‌.ಕೆ. ಬಸವರಾಜನ್, ವಿಧಾನ ಪರಿಷತ್‌ ಮಾಜಿ ಸದಸ್ಯ ಜಿ. ರಘು ಆಚಾರ್, ಕೆ.ಸಿ. ವೀರೇಂದ್ರ ಪಪ್ಪಿ ಪರವಾಗಿ ಅವರ ಬೆಂಬಲಿಗರು ಕಚೇರಿಗೆ ತೆರಳಿ ಟಿಕೆಟ್ ನೀಡುವಂತೆ ಮನವಿ ಮಾಡಿದರು.

ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ, ಮಾಜಿ ಸಚಿವ ಎಚ್‌. ಆಂಜನೇಯ, ಮಾಜಿ ಶಾಸಕರಾದ ಬಿ.ಜಿ. ಗೋವಿಂದಪ್ಪ, ಡಿ. ಸುಧಾಕರ್, ತಿಪ್ಪೇಸ್ವಾಮಿ ಇತರ ಪ್ರಮುಖರು ಬೆಂಬಲಿಗರೊಂದಿಗೆ ಸಮಿತಿ ಮುಂದೆ ಹಾಜರಾಗಿ ಪಕ್ಷಕ್ಕೆ ನೀಡಿರುವ ಕೊಡುಗೆಗಳ ಬಗ್ಗೆ ಮಾಹಿತಿ ಹಂಚಿಕೊಂಡರು.

ನೂರಾರು ಸಂಖ್ಯೆಯ ಬೆಂಬಲಿಗರು ಆಕಾಂಕ್ಷಿಗಳ ಭಾವಚಿತ್ರಗಳನ್ನು ಹಿಡಿದು ಘೋಷಣೆ ಕೂಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT