ಧರ್ಮಪುರ: ‘ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅತಂತ್ರ ಸರ್ಕಾರ ರಚನೆಯಾಗಲಿದ್ದು, ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಕಿಂಗ್ ಮೇಕರ್ ಆಗಲಿದೆ’ ಎಂದು ಪಕ್ಷದ ಸಂಸ್ಥಾಪಕ ಗಾಲಿ ಜನಾರ್ದನ ರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು.
ಇಲ್ಲಿನ ಶನೇಶ್ವರ ಮೈದಾನದಲ್ಲಿ ಪಕ್ಷದಿಂದ ಭಾನುವಾರ ಹಮ್ಮಿಕೊಂಡಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದರು.
‘ಮುಂದಿನ ಚುನಾವಣೆಯಲ್ಲಿ 30ರಿಂದ 40 ಸೀಟು ಗೆಲ್ಲಲಿದೆ. ಆಗ ನಮ್ಮ ಪಕ್ಷ ಸರ್ಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ.
ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸುವುದರ ಮೂಲಕ ಉತ್ತಮ ಆಡಳಿತಕ್ಕೆ ಅಡಿಪಾಯ ಹಾಕಬೇಕು. ಮತದಾರರು ಯಾವುದೇ ಆಮಿಷಕ್ಕೆ ಬಲಿಯಾಗಬಾರದು’ ಎಂದು ಮನವಿ ಮಾಡಿದರು.
‘ಕುತಂತ್ರಕ್ಕೆ ಒಳಗಾಗಿ 12 ವರ್ಷಗಳ ಕಾಲ ನಾನು ರಾಜಕೀಯ ಸನ್ಯಾಸತ್ವವನ್ನು ತೆಗೆದುಕೊಳ್ಳುವಂತ ಪರಿಸ್ಥಿತಿ ಬಂತು. ಜತೆಗೆ ಜೈಲು ವಾಸವನ್ನು ಅನುಭವಿಸಬೇಕಾಯಿತು. 2008ರಲ್ಲಿ ದಕ್ಷಿಣ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಿ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಆಗಲು ಕಾರಣವಾದವನು ನಾನು. ಆದರೆ, ನಾನು ರಾಜಕೀಯವಾಗಿ ಬೆಳೆಯುವುದನ್ನು ಸಹಿಸಲಾರದ ಕುತಂತ್ರಿಗಳು ನನ್ನನ್ನು ತುಳಿಯುವ ತಂತ್ರ ರೂಪಿಸಿದರು’ ಎಂದು ಪರೋಕ್ಷವಾಗಿ ಬಿಜೆಪಿ ನಾಯಕರನ್ನು ಕುಟುಕಿದರು.
‘ಚುನಾವಣೆಗೆ 12 ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ವಾರದ ನಂತರ 19 ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗುವುದು’ ಎಂದರು.
‘ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ರೈತರು ರಾಸಾಯನಿಕ ಗೊಬ್ಬರ, ಔಷಧ, ಬಿತ್ತನೆ ಬೀಜಕ್ಕೆ ಅಲೆಯುವುದನ್ನು ತಪ್ಪಿಸಿ ರೈತರ ಮನೆ ಬಾಗಿಲಿಗೆ ಅದನ್ನು ಪೂರೈಸಲಾಗುವುದು. ಹಿರಿಯೂರಿನಲ್ಲಿ ಮಹಿಳೆಯರಿಗಾಗಿ ಗಾರ್ಮೆಂಟ್ಸ್ ಕಾರ್ಖಾನೆಗಳನ್ನು ತೆರೆದು ₹ 15 ಕೋಟಿ ವೆಚ್ಚದಲ್ಲಿ ತರಬೇತಿ ಸಂಸ್ಥೆ ಸ್ಥಾಪಿಸುವ ಉದ್ದೇಶವನ್ನು ಹೊಂದಲಾಗಿದೆ’ ಎಂದರು.
‘ನಾನು ಶಾಸಕನಾದರೆ ನನಗೆ ಬರುವ ಸಂಭಾವನೆ ₹ 75 ಲಕ್ಷವನ್ನು ರೈತರ ಮಕ್ಕಳ ಶಿಕ್ಷಣಕ್ಕೆ ಕೊಡುತ್ತೇನೆ’ ಎಂದು ಹಿರಿಯೂರು ಕ್ಷೇತ್ರದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿ ಮಹೇಶ್ ಗನ್ನನಾಯಕನಹಳ್ಳಿ ಹೇಳಿದರು.
ಪಾವಗಡ ಕ್ಷೇತ್ರದ ಅಭ್ಯರ್ಥಿ ನಾಗೇಂದ್ರಕುಮಾರ್ ಮಾತನಾಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.