ಶನಿವಾರ, ಜೂನ್ 19, 2021
22 °C

ರೈತ ತಿಮ್ಮರಾಜು ಬದುಕು ಹಸನಾಗಿಸಿದ ಬೆಂಡೇಕಾಯಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪರಶುರಾಂಪುರ: ಒಂದು ಕಡೆ ಬೆಂಡೇಕಾಯಿ, ಮತ್ತೊಂದು ಕಡೆ ಟೊಮೆಟೊ, ಇನ್ನೊಂದು ಕಡೆ ದುಂಡು ಮಲ್ಲಿಗೆ ಹೂವು... ಹೀಗೆ ಮಿಶ್ರ ಬೇಸಾಯ ಪದ್ಧತಿ ಅಳವಡಿಸಿಕೊಂಡು ಕೈತುಂಬಾ ಆದಾಯ ಪಡೆಯುತ್ತಿದ್ದಾರೆ ಕ್ಯಾದಿಗುಂಟೆಯ ರೈತ ತಿಮ್ಮರಾಜು.

‘ಕೃಷಿಯಲ್ಲಿ ಮಿಶ್ರ ಬೇಸಾಯ ಅಳವಡಿಸಿಕೊಂಡರೆ ಒಂದಲ್ಲಾ ಒಂದು ಬೆಳೆಯಿಂದ ಲಾಭ ಬರುತ್ತದೆ. ಜೊತೆಗೆ ನಷ್ಟ ಉಂಟಾಗುವುದನ್ನೂ ತಪ್ಪಿಸಬಹುದು. ಹಾಗಾಗಿ ರೈತರು ಒಂದೇ ಬೆಳೆಗೆ ಜೋತು ಬೀಳುವುದಕ್ಕಿಂತ ಮಿಶ್ರ ಬೆಳೆಗಳನ್ನು ಬೆಳೆಯಬೇಕು’ ಎಂದು ಸಲಹೆ
ನೀಡುತ್ತಾರೆ ಅವರು.

ಖರ್ಚು ಕಡಿಮೆ ಆದಾಯ ಹೆಚ್ಚು: ‘ಮೂರು ವರ್ಷಗಳಿಂದ ಬೆಂಡೇಕಾಯಿ ಬೆಳೆ ಬೆಳೆದು ಉತ್ತಮ ಆದಾಯ ಗಳಿಸುತ್ತಿದ್ದೇನೆ. ಮಕ್ಕಳ ವಿದ್ಯಾಭ್ಯಾಸಕ್ಕೂ ಅನುಕೂಲವಾಗಿದೆ. ನನಗಿರುವ 2.5 ಎಕರೆ ಜಮೀನಿನಲ್ಲಿ ಹಂತ ಹಂತವಾಗಿ ಬೆಂಡೇಕಾಯಿ ಬೆಳೆದು ವರ್ಷ ಪೂರ್ತಿ ಆದಾಯ ಬರುವಂತೆ ನೋಡಿಕೊಳ್ಳುತ್ತೇನೆ. ಹನಿ ನೀರಾವರಿ ಪದ್ಧತಿ ಅನುಸರಿಸಿ ಬೀಜ ನಾಟಿ ಮಾಡಿ ರಸಗೊಬ್ಬರ ಕೊಟ್ಟರೆ ಸಾಕು. ಈ ಭಾಗದಲ್ಲಿ ಒಳ್ಳೆಯ ಇಳುವರಿ ಬರುತ್ತದೆ. ಜೊತೆಗೆ ಎಲ್ಲಾ ಕಾಲದಲ್ಲೂ ಬೆಡಿಕೆ ಇರುವಂತಹ ತರಕಾರಿ ಬೆಂಡೇಕಾಯಿ’ ಎನ್ನುತ್ತಾರೆ ರೈತ ತಿಮ್ಮರಾಜು.

ಸ್ಥಳೀಯ ಸಂತೆಗಳೇ ಮಾರುಕಟ್ಟೆ: ಕ್ಯಾದಿಗುಂಟೆ, ಪರಶುರಾಂಪುರ, ಲಿಂಗದಹಳ್ಳಿ (ತುಮಕೂರು ಜಿಲ್ಲೆ), ಅಮರಾಪುರ (ಆಂಧ್ರಪ್ರದೇಶ)ದಲ್ಲಿ ಸಂತೆಗಳು ದಿನ ಬಿಟ್ಟು ದಿನ ನಡೆಯುತ್ತವೆ. ದಿನ ಬಿಟ್ಟು ದಿನ ಬೆಂಡೆ ಕಾಟವು ಮಾಡಿ 80 ಕೆ.ಜಿ.ಯಿಂದ 120 ಕೆ.ಜಿ. ತನಕ ಸಂತೆಯಲ್ಲಿ ಮಾರಾಟ ಮಾಡುವವರಿಗೆ ಕೆ.ಜಿ.ಗೆ ₹ 25ರಂತೆ ಮಾರಾಟ ಮಾಡುತ್ತೇವೆ. ಇದರಿಂದ ದಿನಕ್ಕೆ
₹ 2,500ರವರೆಗೂ ಆದಾಯ ಬರುತ್ತದೆ. ಹೀಗೆ 2 ತಿಂಗಳಿಗೆ ₹ 50 ಸಾವಿರದಿಂದ
₹ 60 ಸಾವಿರ ಆದಾಯ ಬರುತ್ತದೆ. ಮಾರುಕಟ್ಟೆ ಸಮಸ್ಯೆಯೇ ಇಲ್ಲ’ ಎನ್ನುತ್ತಾರೆ ಅವರು.

ಬೆಂಡೇಕಾಯಿಗೆ ಬೇಡಿಕೆ ಹೆಚ್ಚು: ‘ಬೆಂಡೇಕಾಯಿ ತಿನ್ನುವುದರಿಂದ ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಬರುತ್ತದೆ. ಹಾಗಾಗಿ ಬೆಂಡೇಕಾಯಿಗೆ ಹೆಚ್ಚು ಬೇಡಿಕೆ ಇದೆ. ಜೊತೆಗೆ ಡಾಬಾ ಹೋಟೆಲ್‌ಗಳಲ್ಲಿಯೂ ಬೇಡಿಕೆ ಇದ್ದು, ಬೆಲೆ ಕಡಿಮೆಯಾಗುವುದಿಲ್ಲ. ಇದರಿಂದ ರೈತರಿಗೆ ಲಾಭ ಬರುತ್ತದೆ. ನಷ್ಟ ಕಡಿಮೆ’ ಎಂಬುದು ಅವರ ಅಭಿಪ್ರಾಯ.

ದುಂಡು ಮಲ್ಲಿಗೆ ಹೂವಿನಿಂದ ನಿತ್ಯವೂ ಆದಾಯ: ‘ಅರ್ಧ ಎಕರೆಯಲ್ಲಿ ದುಂಡು ಮಲ್ಲಿಗೆ ಹೂವಿನ ಗಿಡ ನಾಟಿ ಮಾಡಲಾಗಿದೆ. ಪ್ರತಿದಿನ 5ರಿಂದ 6 ಕೆ.ಜಿ. ಹೂವು ಸಿಗುತ್ತದೆ. ಇದರಿಂದ ನಿತ್ಯ ಆದಾಯವನ್ನು ಕಾಣಬಹುದು. ದಿನ ನಿತ್ಯ ಹೂವು ಕಟಾವು ಮಾಡಿ ತೂಕ ಹಾಕಿ ಬಸ್ಸಿನಲ್ಲಿಟ್ಟು ಚಿತ್ರದುರ್ಗಕ್ಕೆ ಕಳುಹಿಸಿದರೆ ಹೂವಿನ ವ್ಯಾಪರಿಗಳು ನಮ್ಮ ಖಾತೆಗೆ ಹಣ ಹಾಕುತ್ತಾರೆ. ಇದರ ಜೊತೆಗೆ ಟೊಮೆಟೊ ಸಸಿಯನ್ನು ಅರ್ಧ ಎಕರೆಯಲ್ಲಿ ನಾಟಿ ಮಾಡಿದ್ದು, ಈಗ ಸ್ವಲ್ಪ ಬೆಲೆ ಕಡಿಮೆ ಇದೆ. ಆದರೆ, ಇನ್ನೆರಡು ಬೆಳೆಗಳಿಂದ ಅದರ ಸಮತೋಲನವಾಗುತ್ತದೆ. ಆದ್ದರಿಂದ ಕೃಷಿಯಲ್ಲಿ ಮಿಶ್ರ ಬೇಸಾಯ ಪದ್ಧತಿ
ಒಳಿತು’ ಎಂದು ಪ್ರತಿಪಾದಿಸುತ್ತಾರೆ ರೈತ ತಿಮ್ಮರಾಜು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು