ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಂಡು ಹೂವು ಬೆಳೆದು ಚಂದದ ಆದಾಯ

ಹಬ್ಬದ ವೇಳೆ ಲಾಭ ತರುವ ಬೆಳೆಯತ್ತ ಉಮೇಶ್‌ ಚಿತ್ತ
Last Updated 19 ಅಕ್ಟೋಬರ್ 2022, 4:55 IST
ಅಕ್ಷರ ಗಾತ್ರ

ಸಿರಿಗೆರೆ: ಸಮೀಪದ ಹಿರೇಬೆನ್ನೂರು ಗ್ರಾಮದ ರೈತ ಬಿ.ಉಮೇಶ್ ಅವರು ತಮ್ಮ ಕೆಂಪು ಮಿಶ್ರಿತ ಕಪ್ಪುಮಣ್ಣುಳ್ಳ ಮುಕ್ಕಾಲು ಎಕರೆ ಜಮೀನಿನಲ್ಲಿ ಅಲ್ಪ ಅವಧಿಯ ಹಳದಿ ಬಣ್ಣದ ಚೆಂಡು ಹೂವು ಬೆಳೆದು ಉತ್ತಮ ಆದಾಯ ಪಡೆಯುತ್ತಿದ್ದಾರೆ.

ಸಾಂಪ್ರದಾಯಿಕ ಬೆಳೆಗಳನ್ನು ಕೈಬಿಟ್ಟು ಲಾಭದಾಯಕ ಕೃಷಿ ಪದ್ಧತಿ ಅನುಸರಿಸುತ್ತಿರುವ ಇವರು, ಮಾರುಕಟ್ಟೆಯಲ್ಲಿ ಸದಾ ಬೇಡಿಕೆ ಮತ್ತು ಬೆಲೆ ಇರುವ ಉತ್ಪನ್ನಗಳಿಗೆ ಒತ್ತು ನೀಡುತ್ತಿದ್ದಾರೆ. ವರ್ಷಕ್ಕೆ ಎರಡು ಬಾರಿ ಚೆಂಡು ಹೂವಿನ ಬೆಳೆ ಬೆಳೆದು ಲಕ್ಷಾಂತರ ರೂಪಾಯಿ ಲಾಭ ಕಂಡುಕೊಳ್ಳುತ್ತಿದ್ದಾರೆ.

ಸಮೀಪದ ಬೆನ್ನೂರು ನರ್ಸರಿಯಲ್ಲಿ ಒಂದು ಗಿಡಕ್ಕೆ ₹ 3ರಂತೆ 9,000 ಸಸಿಗಳನ್ನು ತಂದು,ಭೂಮಿ ಹದ ಮಾಡಿ ನಾಟಿ ಮಾಡಿದ್ದಾರೆ. ಅದಕ್ಕಾಗಿ ಇವರು ಮಾಡಿರುವ ಖರ್ಚು ₹ 40,000. ಅಂದಾಜು 60ರಿಂದ 80 ದಿನಗಳಲ್ಲಿ ಚಂಡು ಹೂ ಕೈಗೆ ಸಿಗುತ್ತದೆ. 2 ಅಡಿ ಎತ್ತರದ ಆರೆಂಜ್ ತಳಿಯ ಒಂದು ಗಿಡದಲ್ಲಿ ಎರಡು ಕೆ.ಜಿ.ಯಷ್ಟು ಹೂ ಸಿಗುತ್ತದೆ.

‘ಈ ಬಾರಿ ಮಳೆ ಹೆಚ್ಚಾಗಿ ಸುರಿದ ಕಾರಣ ಅನೇಕ ಕಡೆ ಬೆಳೆ ನಷ್ಟ ಆಗಿರುವುವದರಿಂದ ಹೂವಿಗೆ ಬೇಡಿಕೆ ಹೆಚ್ಚಿದೆ.‌ ಮಳೆಗಾಲದಲ್ಲಿ ಸಸಿಗಳನ್ನು ನಾಟಿ ಮಾಡಲಾಗಿದ್ದು, ಆಯುಧಪೂಜೆ ಸಮಯದಲ್ಲಿ ಒಂದಷ್ಟು ಹೂ ಕಟಾವಿಗೆ ಬಂದಿತ್ತು. ಈಗ ದೀಪಾವಳಿಗೆ ಕಟಾವಿಗೆ ಬರಲಿದೆ. ಆಗಸ್ಟ್– ಸೆಪ್ಟಂಬರ್ ತಿಂಗಳಲ್ಲಿ ಬಹಳಷ್ಟು ಮಳೆಯಾಗಿತ್ತು. ಕೆಲವು ಗಿಡಗಳು ನೆಲಕ್ಕೆ ಭಾಗಿದ್ದರೆ, ಇನ್ನು ಕೆಲವೊಂದರಲ್ಲಿ ಉತ್ತಮ ಹೂ ಕಂಡಿದ್ದೇನೆ. ಜಿನ್ ಫ್ಲವರ್, ಯೂನೋ ಫ್ಲವರ್, ವೀವ-666 ಔಷಧ ಬಳಸಿದ್ದೇನೆ. ಮುಕ್ಕಾಲು ಎಕರೆಯಲ್ಲಿ 15ರಿಂದ 18 ಕ್ವಿಂಟಲ್ ಇಳುವರಿ ಪಡೆಯುವ ಗುರಿ ಹೊಂದಿದ್ದೇನೆ’ ಎಂದು ಉಮೇಶ್‌ ವಿಶ್ವಾಸದಿಂದ ಹೇಳುತ್ತಾರೆ.

‘ಮಾರುಕಟ್ಟೆಯಲ್ಲಿ ಕೆ.ಜಿ.ಗೆ ₹ 100ರಂತೆ ಹೂವು ಮಾಟವಾಗುತ್ತಿದೆ. ನಮ್ಮ ಹತ್ತಿರ ಮಾರಾಟಗಾರರು ಕೊಂಡು ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಾರೆ. ಎಕರೆ ಲೆಕ್ಕದಲ್ಲಿ ಹೂ ಮಾರಿದರೆ ಅನುಕೂಲವಾಗುತ್ತದೆ. ಒಬ್ಬ ಕೂಲಿ ಕಾರ್ಮಿಕನಿಗೆ ದಿನಕ್ಕೆ ₹ 300 ಕೊಡುತ್ತೇನೆ. ಹಿಂದಿನ ಬಾರಿ ಮಳೆಯಿಂದಾಗಿ ನಷ್ಟ ಉಂಟಾಗಿತ್ತು. ಈ ಬಾರಿ ಉತ್ತಮ ಲಾಭ ಪಡೆಉವ ಭರವಸೆ ಇದೆ’ ಎಂದು ಅವರು ತಿಳಿಸಿದ್ದಾರೆ.

‘ಸ್ಥಳೀಯವಾಗಿ ಸಿಗುವ ಚೆಂಡು ಹೂವಿನ ಸಸಿಗಳು ಗುಣಮಟ್ಟವಿಲ್ಲದ ಕಾರಣ, ತಮಿಳುನಾಡಿನಿಂದ ವಿಭಿನ್ನ ತಳಿಯ ಸಸಿಗಳನ್ನು ಹಾಕಬೇಕು. ಆ ಹೂಗಳು ದಪ್ಪವಾಗಿ ಬಿಡುವುದಲ್ಲದೇ, ರೋಗ ಬಾಧೆ, ನಿರ್ವಹಣೆ ವೆಚ್ಚ, ಕೆಲಸ ಕಡಿಮೆ. ಒಮ್ಮೆ ಕಿತ್ತ ಹೂವು ನಾಲ್ಕು ದಿವಸದವರೆಗೆ ಹಾಗೇ ಇರುತ್ತದೆ ಎನ್ನುವುದು ಸ್ನೇಹಿತರ ಸಲಹೆ. ಮುಂದಿನ ಬಾರಿ ಪ್ರಯತ್ನಿಸುತ್ತೇನೆ’ ಎಂದು ಅವರು ವಿವರಿಸಿದರು.

***

ಆಯುಧಪೂಜೆ, ದೀಪಾವಳಿ ಹಬ್ಬದ ಸಮಯದಲ್ಲಿ ರಾತ್ರಿಯೆಲ್ಲ ಹೊಲ ಕಾಯಬೇಕು. ಕೂಲಿಕಾರರು ಸಿಗದ ಕಾರಣ ಮನೆಯ ಸದಸ್ಯರು ತಮ್ಮ ಬಿಡುವಿನ ವೇಳೆಯಲ್ಲಿ ಕೃಷಿ ಕೆಲಸಕ್ಕೆ ನೆರವಾಗುತ್ತಾರೆ.

ಉಮೇಶ್‌, ಕೃಷಿಕ

***

ರೈತ ಕಾಲಕ್ಕೆ ತಕ್ಕಂತೆ ಬೆಳೆ ಬೆಳೆಯಬೇಕು. ಲಾಭದ ಬೆಳೆ ಬರುವ ಹೂವನ್ನು ಬೆಳೆದರೆ ನಷ್ಟವಾಗುವುದಿಲ್ಲ. ಆಧುನಿಕ ಕೃಷಿ ಪರಿಕರಗಳನ್ನು ಬಳಸಿಕೊಂಡು ಇನ್ನು ಉತ್ತಮ ಕೃಷಿ ಕಾಯಕದಲ್ಲಿ ತೊಡಗಿಕೊಳ್ಳಬಹುದಾಗಿದೆ.

ಬಸವರಾಜಪ್ಪ, ಉಮೇಶ್‌ ತಂದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT