ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವರೆ ಬೆಳೆದು ಯಶಸ್ಸು ಕಂಡ ರೈತ

ಅಕ್ಕಡಿ ಬೆಳೆಯಲ್ಲಿ ಲಾಭ ಗಳಿಸುತ್ತಿರುವ ಮಹೇಶ್ವರಪ್ಪ ಅವರ ಕುಟುಂಬ
Last Updated 25 ಜನವರಿ 2023, 6:22 IST
ಅಕ್ಷರ ಗಾತ್ರ

ಹೊಸದುರ್ಗ: ಬೇಸಿಗೆಯಲ್ಲಿ ನೀರಿನ ಲಭ್ಯತೆ ಇರದ ಕಾರಣ ಬಹುತೇಕ ರೈತರು ಜಮೀನನ್ನು ಖಾಲಿ ಬಿಡುತ್ತಾರೆ. ಆದರೆ, ತಾಲ್ಲೂಕಿನ ನಾಗರಕಟ್ಟೆ ಗ್ರಾಮದ ರೈತ ಮಹೇಶ್ವರಪ್ಪ ಜಕ್ಕನಹಳ್ಳಿಯಲ್ಲಿರುವ ತಮ್ಮ ಮೂರು ಎಕರೆ ಭೂಮಿಯಲ್ಲಿ ಸೋಯಾ ಅವರೆ ಬೆಳೆದು ಉತ್ತಮ ಫಸಲು ಪಡೆದು ಯಶ ಕಂಡಿದ್ದಾರೆ.

ತಮ್ಮ ಇತರೆ ಜಮೀನುಗಳಲ್ಲಿ ತೆಂಗು ಹಾಗೂ ಅಡಿಕೆ ತೋಟ ಮಾಡಿರುವ ಮಹೇಶ್ವರಪ್ಪ, ಊರ ಸಮೀಪವಿರುವ ಮೂರು ಎಕರೆ ಭೂಮಿಯಲ್ಲೂ ಈಚೆಗೆ ಅಡಿಕೆ ಸಸಿ ಹಾಕಿದ್ದಾರೆ. 4ರಿಂದ 5 ತಿಂಗಳ ಅಡಿಕೆ ಸಸಿ ಮಧ್ಯೆದಲ್ಲಿ ಅವರೆ ಬೆಳೆದಿದ್ದಾರೆ.

‘ಮೂರು ಎಕರೆ ಭೂಮಿಯಲ್ಲಿ ಈ ಹಿಂದೆ ಮುಸುಕಿನ ಜೋಳ, ರಾಗಿ, ಎಳ್ಳು ಬೆಳೆಯುತ್ತಿದ್ದೆವು. ಒಮ್ಮೆ ಎಳ್ಳು ಬೆಳೆದು ಅಪಾರ ನಷ್ಟ ಅನುಭವಿಸಿದ ನಂತರ ಜಮೀನನ್ನು ಖಾಲಿ ಬಿಡಲಾಗಿತ್ತು. ಪ್ರಸಕ್ತ ವರ್ಷ ಅಡಿಕೆ ಹಾಕಿದ್ದೇವೆ. ಭೂಮಿಯನ್ನು ಖಾಲಿ ಬಿಡುವ ಬದಲು ಏನಾದರೂ ವಿಶೇಷ ಬೆಳೆ ಬೆಳೆಯಬೇಕು ಎಂದು ಕುಟುಂಬ
ದವರೆಲ್ಲ ಯೋಚಿಸಿ ಅವರೆಯನ್ನು ಅಕ್ಕಡಿ ಬೆಳೆಯಾಗಿ ಹಾಕಿದೆವು’ ಎನ್ನುತ್ತಾರೆ ರೈತ ಮಹೇಶ್ವರಪ್ಪ.

‘ಮೂರು ಎಕರೆ ಭೂಮಿಗೆ ರಾಣೆಬೆನ್ನೂರಿಂದ ಕೆ.ಜಿ.ಗೆ ₹ 120ರಂತೆ 35 ಕೆ.ಜಿ. ಬೀಜ ತಂದು ನವೆಂಬರ್‌ನಲ್ಲಿ ಬಿತ್ತನೆ ಮಾಡಲಾಯಿತು. ಇದಕ್ಕೆ ಯಾವುದೇ ಔಷಧ ಸಿಂಪಡಣೆ ಮಾಡಿಲ್ಲ, ರಾಸಾಯನಿಕ ಗೊಬ್ಬರವನ್ನು ಸಹ ಉಪಯೋಗಿಸಿಲ್ಲ. ಈ ಭೂಮಿಗೆ 5 ಲೋಡ್ ಕೋಳಿ ಗೊಬ್ಬರ ಹಾಕಲಾಗಿದೆ. ಡಿಸೆಂಬರ್‌ ಅಂತ್ಯದಿಂದ ಅವರೆ ಕಾಯಿ ಬಿಡಲು ಆರಂಭಿಸಿತು’ ಎಂದು ಮಾಹಿತಿ ನೀಡಿದರು ಮಹೇಶ್ವರಪ್ಪ ಅವರ ಮಗ ವಾಸು.

‘ಅವರೆ ಬೆಳೆ ಹೆಚ್ಚಿಗೆ ನೀರು ಬೇಡಲ್ಲ. ಕಡಿಮೆ ಶ್ರಮದಲ್ಲಿ ಇದನ್ನು ಬೆಳೆಯಬಹುದು. ಅವರೆ ಬೆಳೆಯಲು ಒಟ್ಟು ₹40,000 ವ್ಯಯಿಸಲಾಗಿದೆ. ಈಗಾಗಲೇ ₹40,000 ಆದಾಯವನ್ನು ಸಹ ಗಳಿಸಲಾಗಿದೆ. ಇನ್ಮುಂದೆ ಬರುವುದೆಲ್ಲ ಲಾಭ. ಅಡಿಕೆ ಗಿಡಕ್ಕೆ ನೆರಳು ಬೇಕು ಎಂಬ ಉದ್ದೇಶದಿಂದ ಅವರೆ ಹಾಕಲಾಗಿತ್ತು. ಆದರೆ, ಅವರೆಯೇ ಹೆಚ್ಚು ಆದಾಯ ತಂದು ಕೊಡುತ್ತಿದೆ. ಮುಂದಿನ ಬಾರಿಯೂ ಅವರೆ ಹಾಕುತ್ತೇವೆ’ ಎಂದು ವಾಸು ತಿಳಿಸಿದರು.

‘ಪ್ರಸ್ತುತ ವಾರಕ್ಕೊಮ್ಮೆ ಅವರೆ ಕೊಯ್ಯಲಾಗುತ್ತಿದೆ. ಬಿಸಿಲಿಗೆ ಅವರೆಕಾಯಿ ಒಣಗುತ್ತಿವೆ. ಹೀಗಾಗಿ ಇನ್ಮುಂದೆ 3ರಿಂದ 4 ದಿನಗಳಿಗೊಮ್ಮೆ ಕೊಯ್ಯಲಾಗುತ್ತದೆ. ಮಾರುಕಟ್ಟೆಯಲ್ಲಿ ಕೆ.ಜಿ.ಗೆ ₹50ರಿಂದ ₹60 ಸಿಗುತ್ತದೆ. ಸೊಗಡಿನ ಅವರೆ ಇದ್ದಾಗ, ಇದರ ಬೆಲೆ ಕೊಂಚ ಕಡಿಮೆಯಾಗುತ್ತದೆ. ಸೊಗಡಿನ ಅವರೆ ಮುಗಿಯುವ ವೇಳೆಗೆ ಫಸಲು ಬರುವಂತೆ ಈ ಅವರೆ ಹಾಕಬೇಕು. ಈ ಬಾರಿ ತೇವಾಂಶ ಹೆಚ್ಚಿದ್ದರಿಂದ ಸೊಗಡಿನ ಅವರೆ ಹೆಚ್ಚು ಇಳುವರಿ ಬಾರದ ಕಾರಣ, ಮಾರುಕಟ್ಟೆಗೆ ಬರುವುದು ಕಡಿಮೆಯಾಗಿದೆ. ಅವರೆಯನ್ನು ಹೊಸದುರ್ಗ ಹಾಗೂ ಕಡೂರು ಮಾರುಕಟ್ಟೆಗೆ ಕೊಂಡೊಯ್ಯಲಾಗುತ್ತದೆ. ಈ ಬಾರಿ ₹ 1 ಲಕ್ಷ ಆದಾಯ ಗಳಿಸುವ ನಿರೀಕ್ಷೆ ಇದೆ’ ಎಂದು ಮಹೇಶ್ವರಪ್ಪ ಇನ್ನೊಬ್ಬ ಪುತ್ರ ಶಶಿಧರ ಹೇಳಿದರು.

ಸ್ನೇಹಿತರ ಮಾರ್ಗದರ್ಶನದಲ್ಲಿ ವಿನೂತನ ಪ್ರಯತ್ನಕ್ಕೆ ಕೈ ಹಾಕಿ ಯಶಸ್ಸು ಸಾಧಿಸಿದ್ದಾರೆ. ಸುತ್ತಮುತ್ತಲಿನ ಗ್ರಾಮದ ರೈತರು ಸಹ ಅವರೆ ಬೆಳೆಯುವ ಇಂಗಿತ ವ್ಯಕ್ತಪಡಿಸುತ್ತಿದ್ದಾರೆ. ಕಡಿಮೆ ಶ್ರಮ, ಕಡಿಮೆ ಖರ್ಚಿನಲ್ಲಿ ಉತ್ತಮ ಆದಾಯ ಕೊಡುವ ಬೆಳೆ ಇದಾಗಿದೆ. ಸೊಗಡಿನ ಅವರೆ ಮುಗಿಯುವ ವೇಳೆಗೆ ಇದು ಫಸಲಿಗೆ ಬರುವಂತೆ ಭಿತ್ತನೆ ಮಾಡಿದರೆ ಉತ್ತಮ ಆದಾಯ ಗಳಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT