ಗುರುವಾರ , ಜುಲೈ 29, 2021
25 °C

ಪರಿಷತ್ ಚುನಾವಣೆ ನಂತರ ಸಚಿವ ಸಂಪುಟ ವಿಸ್ತರಣೆ: ಈಶ್ವರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಳಲ್ಕೆರೆ (ಚಿತ್ರದುರ್ಗ ಜಿಲ್ಲೆ): ‘ವಿಧಾನ ಪರಿಷತ್ ಚುನಾವಣೆಯ ನಂತರ ಸಚಿವ ಸಂಪುಟ ವಿಸ್ತರಣೆ ಆಗಲಿದೆ’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ತಾಲ್ಲೂಕಿನ ಹಳೇಹಳ್ಳಿಯಲ್ಲಿ ಶುಕ್ರವಾರ ‘ಅಂತರ್ಜಲ ಚೇತನ’ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ‘ಮುಂದಿನ ತಿಂಗಳು ಸಚಿವ ಸಂಪುಟದಲ್ಲಿ ಹಲವು ಬದಲಾವಣೆಗಳು ಆಗಲಿವೆ. ಆಗ ಅನುಭವಿ ಶಾಸಕರಿಗೆ ಅವಕಾಶ ಸಿಗಲಿದೆ. ಇಲ್ಲಿನ ಶಾಸಕ ಎಂ.ಚಂದ್ರಪ್ಪ ನಮ್ಮ ಜತೆಗೆ ಸಚಿವರಾಗಬೇಕಿತ್ತು. ಎಲ್ಲಾ ಅರ್ಹತೆಗಳಿದ್ದರೂ ಅವರಿಗೆ ಸಚಿವ ಸ್ಥಾನ ಏಕೆ ತಪ್ಪಿತೋ ಗೊತ್ತಿಲ್ಲ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಆಪ್ತರಾಗಿರುವ ಅವರು ಈ ಬಾರಿ ಮಂತ್ರಿ ಆಗುವುದರಲ್ಲಿ ಯಾವುದೇ ಅನುಮಾನ ಇಲ್ಲ. ಇಲ್ಲಿನ ಜನರ ಬಯಕೆಯಂತೆ ಅವರಿಗೆ ಅವಕಾಶ ಸಿಗಲಿ ಎಂಬುದು ನನ್ನ ಅಪೇಕ್ಷೆ ಕೂಡ’ ಎಂದರು. ಶಾಸಕ ಎಂ.ಚಂದ್ರಪ್ಪ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ, ಸಿಇಒ ಯೋಗೀಶ್ ಇದ್ದರು.

ಲಾಬಿಗೆ ಮಣಿಯಲ್ಲ (ಚಿತ್ರದುರ್ಗ ವರದಿ): ‘ವಿಧಾನಪರಿಷತ್‌ ಚುನಾವಣೆಗೆ ಟಿಕೆಟ್‌ ಕೇಳುವ ಅರ್ಹತೆ ಪ್ರತಿಯೊಬ್ಬ ಕಾರ್ಯಕರ್ತನಿಗೂ ಇದೆ. ಲಾಬಿಗೆ ಮಣಿದು ಟಿಕೆಟ್‌ ನೀಡುವ ಸಂಸ್ಕೃತಿ ಬಿಜೆಪಿಯಲ್ಲಿಲ್ಲ’ ಎಂದು ಈಶ್ವರಪ್ಪ ಹೇಳಿದರು.

ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪ್ರತಾಪಗೌಡ, ಮುನಿರತ್ನ, ರೋಷನ್‌ ಬೇಗ್‌ ಬಿಜೆಪಿಯವರಾಗಿ ಟಿಕೆಟ್‌ ಕೇಳುವುದು ತಪ್ಪಲ್ಲ. ಆದರೆ, ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಪಕ್ಷದಿಂದ ಬಂದಿದ್ದೇನೆ ಎಂದು ಒತ್ತಡ ಹೇರುವುದು ತಪ್ಪು. ಟಿಕೆಟ್‌ ಹಂಚಿಕೆಯಲ್ಲಿ ಹೈಕಮಾಂಡ್‌ ತೀರ್ಮಾನವೇ ಅಂತಿಮ. ಜಾತಿ ನೋಡಿ ಟಿಕೆಟ್‌ ಕೊಡುವ ಪದ್ಧತಿ ಬಿಜೆಪಿಯಲ್ಲಿ ಇಲ್ಲ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು