ಭಾನುವಾರ, ಮೇ 22, 2022
21 °C
ಭಗೀರಥಶ್ರೀ ಪಟ್ಟಾಭಿಷೇಕದ 22ನೇ ವಾರ್ಷಿಕೋತ್ಸವದಲ್ಲಿ ಸಚಿವ ಕೆ.ಎಸ್‌. ಈಶ್ವರಪ್ಪ

ಹಿಂದುಳಿದ ಮಠಾಧೀಶರು ಸೌಲಭ್ಯ ಪಡೆಯಿರಿ: ಕೆ.ಎಸ್‌. ಈಶ್ವರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸದುರ್ಗ: ‘ಹಿಂದುಳಿದ, ದಲಿತ ಮಠಾಧೀಶರು ಒಗ್ಗಟ್ಟಾಗಿ, ಸಮುದಾಯ ಹಾಗೂ ಮಠದ ಅಭಿವೃದ್ಧಿಗೆ ಬೇಕಾದ ಸೌಲಭ್ಯಗಳನ್ನು ಯಾವುದೇ ಸರ್ಕಾರ ಇರಲಿ ಎಚ್ಚರಿಕೆ ನೀಡುವ ಮೂಲಕವಾದರೂ ಪಡೆದುಕೊಳ್ಳಬೇಕು’ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ ತಿಳಿಸಿದರು.

ತಾಲ್ಲೂಕಿನ ಬ್ರಹ್ಮವಿದ್ಯಾನಗರದಲ್ಲಿ ಭಗೀರಥ ಗುರುಪೀಠದ ಸಗರ ಚಕ್ರವರ್ತಿ ಮಹಾಮಂಟಪದಲ್ಲಿ ಬುಧವಾರ ನಡೆದ ಪುರುಷೋತ್ತಮಾನಂದಪುರಿ ಸ್ವಾಮೀಜಿ ಅವರ ಪಟ್ಟಾಭಿಷೇಕದ 22ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಒಂದೇ ಸಮುದಾಯದಲ್ಲಿ ನಾಲ್ಕೈದು ಮಠಗಳಿವೆ. ಅವರಲ್ಲಿ ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗೋಲ್ಲ. ಆದರೆ, ದಲಿತ, ಹಿಂದುಳಿದ ಮಠಾಧೀಶರು ಒಂದೆಡೆ ಸೇರಿ ಒಕ್ಕೂಟ ರಚಿಸಿಕೊಂಡು ಕಾಗಿನೆಲೆ ನಿರಂಜನಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ಮಠಕ್ಕೆ ಹಿಂದೆ ಅನುದಾನ ಕೇಳಿದ್ದರು. ಆಗ ಸಿಎಂ ಆಗಿದ್ದ ಡಿ.ವಿ. ಸದಾನಂದಗೌಡ ಅವರಿಂದ 39 ಹಿಂದುಳಿದ, ದಲಿತ ಮಠಗಳಿಗೆ ₹ 100 ಕೋಟಿ ಅನುದಾನ ಕೊಡಿಸಿದ್ದೆ’ ಎಂದು ಹೇಳಿದರು.

‘ಪುರುಷೋತ್ತಮಾನಂದಪುರಿ ಸ್ವಾಮೀಜಿ ಅವರು ರಾಜ್ಯದ 10 ವಿಧಾನಸಭೆ ಕ್ಷೇತ್ರಗಳಲ್ಲಿ ಉಪ್ಪಾರ ಸಮುದಾಯದವರಿಗೆ ಟಿಕೆಟ್ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದರು. ಆದರೆ, ಆಗ ಯಾರೂ ಮುಂದೆ ಬರಲಿಲ್ಲ. ರಾಜಕಾರಣಕ್ಕೆ ಬರುವಂತವರು ಜನ ಸಮೂಹದಲ್ಲಿ ಗುರುತಿಸಿಕೊಂಡು ಜನಸೇವೆ ಮಾಡಬೇಕು. ಉಪ್ಪಾರ ಸಮಾಜ ದೊಡ್ಡ ಮಟ್ಟದಲ್ಲಿ ಸಂಘಟಿತರಾಗಬೇಕು. ಆಗ ಯಾವುದೇ ಪಕ್ಷವಾಗಲಿ ಗುರುತಿಸಿ ಟಿಕೆಟ್ ಕೊಡುತ್ತದೆ. ಇಲ್ಲದಿದ್ದರೆ ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೂ ಟಿಕೆಟ್ ಸಿಗೋದಿಲ್ಲ ಎನ್ನುವುದು ನೆನಪಿನಲ್ಲಿರಲಿ’ ಎಂದು ಉಪ್ಪಾರ ಸಮಾಜ ಮುಖಂಡರನ್ನು
ಎಚ್ಚರಿಸಿದರು.

ಕೆಲ್ಲೋಡು ಕಾಗಿನೆಲೆ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿ, ‘ಉಪ್ಪಾರ ಸಮಾಜ ಎಲ್ಲಾ ಕ್ಷೇತ್ರಗಳಲ್ಲಿಯೂ ಹಿಂದುಳಿದಿದೆ. ಈ ಸಮಾಜದ ಅನೇಕ ಜನರಿಗೆ ಮನೆ, ಭೂಮಿ, ಮಕ್ಕಳಿಗೆ ಶಿಕ್ಷಣ ಹಾಗೂ ರಾಜಕೀಯ ಪ್ರಾಬಲ್ಯ ಇಲ್ಲ. ಅವಕಾಶ ಹಾಗೂ ಹಕ್ಕುಗಳನ್ನು ಹೋರಾಟದ ಮೂಲಕ ಪಡೆದುಕೊಳ್ಳಬೇಕಾಗಿದೆ. ಶಿವಪುರಿ ಸ್ವಾಮೀಜಿ ಮತ್ತು ತಿರುಚಿ ಸ್ವಾಮೀಜಿ ಅವರು ಹಿಂದುಳಿದ ಸಮುದಾಯಗಳಿಗೆ ಶಕ್ತಿ ತುಂಬಿದರು. ಉಪ್ಪಾರರ ಸಂಘಟನೆ ಹಾಗೂ ಅಭಿವೃದ್ಧಿಗೆ ಪುರುಷೋತ್ತಮಾನಂದಪುರಿ ಸ್ವಾಮೀಜಿ ಶ್ರಮಿಸುತ್ತಿರುವುದು ಶ್ಲಾಘನೀಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಉಪ್ಪಾರ ಸಂಘದ ಜಿಲ್ಲಾ ಅಧ್ಯಕ್ಷ ಆರ್‌. ಮೂರ್ತಿ, ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಗಿರೀಶ್ ಉಪ್ಪಾರ ಅವರಿಗೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಯಾವುದಾದರೂ ಕ್ಷೇತ್ರದಲ್ಲಿ ಟಿಕೆಟ್ ಕೊಡಿ ಎಂದು ಸಚಿವ ಕೆ.ಎಸ್‌. ಈಶ್ವರಪ್ಪ ಅವರಿಗೆ ಚೀಟಿ ಕೊಟ್ಟರು. ಆಗ ಸಚಿವರು ಯಾವುದೇ ಪ್ರತಿಕ್ರಿಯೆ ನೀಡದೇ ಜೇಬಿನಲ್ಲಿ ಚೀಟಿ ಇಟ್ಟುಕೊಂಡಿದ್ದರಿಂದ ಬೇಸರಗೊಂಡರು.

ಕಾರ್ಯಕ್ರಮದಲ್ಲಿ ಚಿತ್ರದುರ್ಗ ಶಿವಮೂರ್ತಿ ಮುರುಘಾ ಶರಣರು, ಕಬೀರಾನಂದಮಠದ ಶಿವಾಲಿಂಗಾನಂದ ಸ್ವಾಮೀಜಿ, ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಮಡಿವಾಳ ಮಾಚಿದೇವ ಸ್ವಾಮೀಜಿ, ಕುಂಚಿಟಿಗ ಮಹಾಸಂಸ್ಥಾನದ ಶಾಂತವೀರ ಸ್ವಾಮೀಜಿ, ಅಬಕಾರಿ ಸಚಿವ ಕೆ. ಗೋಪಾಲಯ್ಯ ಮಾತನಾಡಿದರು.

ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಗಿರೀಶ್ ಉಪ್ಪಾರ, ಉಪ್ಪಾರ ಸಮಾಜದ ತಾಲ್ಲೂಕು ಅಧ್ಯಕ್ಷ ಮಂಜುನಾಥ್, ಜಿಲ್ಲಾ ಪಂಚಾಯಿತಿ ಸದಸ್ಯೆ ವಿಶಾಲಾಕ್ಷಿ ನಟರಾಜು, ಸಾಹಿತಿ ಗುರುಮೂರ್ತಿ, ಮುಖ್ಯಶಿಕ್ಷಕ ಬಿ.ಎಂ. ಪ್ರಕಾಶ್‌, ಉಪನ್ಯಾಸಕ ಟಿ. ಸುರೇಶ್‌, ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಸಮಾಜದ ಮುಖಂಡರು ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು