ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ | ಕೆಎಸ್ಆರ್‌ಟಿಸಿ: ಲಾಭಕ್ಕಿಂತ ಸೇವೆ ಮುಖ್ಯ

₹9 ಕೋಟಿ ವೆಚ್ಚದ ಬಸ್ ನಿಲ್ದಾಣ ಲೋಕಾರ್ಪಣೆ ಮಾಡಿದ ಸಚಿವ ಬಿ.ಸಿ. ಪಾಟೀಲ
Last Updated 19 ಏಪ್ರಿಲ್ 2022, 4:36 IST
ಅಕ್ಷರ ಗಾತ್ರ

ಹೊಳಲ್ಕೆರೆ: ಕೆಎಸ್ಆರ್‌ಟಿಸಿಯಲ್ಲಿ ಲಾಭಕ್ಕಿಂತ ಸೇವೆ ಪ್ರಮುಖ ಧ್ಯೇಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು.

ಪಟ್ಟಣದಲ್ಲಿ ₹ 9 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣವನ್ನು ಸೋಮವಾರ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

‘ಶ್ರೀಮಂತರು ಕಾರಿನಲ್ಲಿ ಪ್ರಯಾಣಿಸುತ್ತಾರೆ. ಬಡವರು ಮಧ್ಯಮ ವರ್ಗದವರು ಪ್ರಯಾಣಕ್ಕೆ ಕೆಎಸ್ಆರ್‌ಟಿಸಿ ಬಸ್‌ಗಳನ್ನೇ ಅವಲಂಬಿಸಿದ್ದಾರೆ. ಸರ್ಕಾರ ಬಡವರಿಗೆ ನೆರವಾಗುವ ಉದ್ದೇಶದಿಂದ ಲಾಭದ ದೃಷ್ಟಿಕೋನ ಹೊಂದದೆ ಸೇವೆಯ ರೂಪದಲ್ಲಿ ಬಸ್‌ಗಳನ್ನು ಓಡಿಸುತ್ತಿದೆ. ವಿದ್ಯಾರ್ಥಿಗಳು, ಅಂಗವಿಕಲರು, ವೃದ್ಧರಿಗೆ ಪಾಸ್ ನೀಡಲಾಗಿದ್ದು, ಹೆಚ್ಚು ಅನುಕೂಲವಾಗಿದೆ. ತಾಲ್ಲೂಕು ಕೇಂದ್ರದಲ್ಲಿ ಇಷ್ಟು ಸುಸಜ್ಜಿತ ಬಸ್ ನಿಲ್ದಾಣ ನಿರ್ಮಿಸಿರುವುದು ಶ್ಲಾಘನೀಯ. ಶಾಸಕ ಎಂ. ಚಂದ್ರಪ್ಪ ಪಟ್ಟಣದಲ್ಲೇ ₹152 ಕೋಟಿ ವೆಚ್ದದ ಕಾಮಗಾರಿಗಳು ನಡೆಯುತ್ತಿರುವ ಮಾಹಿತಿ ನೀಡಿದರು. ನಾನು ಸಚಿವನಾದರೂ ಶಾಸಕ ಎಂ. ಚಂದ್ರಪ್ಪ ಅವರಷ್ಟು ಕೆಲಸ ಮಾಡಿಲ್ಲ’ ಎಂದರು.

‘ಕೃಷಿಯಲ್ಲಿ ಸಮಗ್ರ ಬದಲಾವಣೆ ಅಗತ್ಯ. ರೈತರು ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು. ಒಂದೇ ಬೆಳೆಯನ್ನು ಆಶ್ರಯಿಸದೇ ಮಿಶ್ರಬೆಳೆ ಪದ್ಧತಿ ಅನುಸರಿಸಬೇಕು. ಆಗ ಒಂದು ಬೆಳೆ ನಷ್ಟವಾದರೂ ಮತ್ತೊಂದು ಬೆಳೆ ಕೈಹಿಡಿಯುತ್ತದೆ. ಬಿ.ಎಸ್. ಯಡಿಯೂರಪ್ಪ ಇದ್ದಾಗ ಬಿ.ಎಸ್ಸಿ ಕೃಷಿ ಪದವಿಗೆ ಆಯ್ಕೆಯಾಗಲು ರೈತರ ಮಕ್ಕಳಿಗೆ ಶೇ 50 ಮೀಸಲಾತಿ ನೀಡಿದರು. ಬಸವರಾಜ ಬೊಮ್ಮಾಯಿ ಬಂದ ಮೇಲೆ ರೈತ ವಿದ್ಯಾನಿಧಿ ಯೋಜನೆ ಜಾರಿಗೊಳಿಸಿದರು. ಈಗ ರೈತರಿಗೆ ಡೀಸೆಲ್ ಸಬ್ಸಿಡಿ ನೀಡಲು ತೀರ್ಮಾನಿಸಲಾಗಿದೆ’ ಎಂದರು.

ಶಾಸಕ ಎಂ.ಚಂದ್ರಪ್ಪ ಮಾತನಾಡಿ, ‘ಪರಿಶಿಷ್ಟ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಿರುವಂತೆ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೂ ಉಚಿತ ಪಾಸ್ ವಿತರಿಸಲು ಚಿಂತಿಸಲಾಗಿದೆ. ಕಟ್ಟಡ ಕಾರ್ಮಿಕರಿಗೆ 50 ಕಿ.ಮೀ. ಪ್ರಯಾಣಿಸಲು ಉಚಿತ ಬಸ್ ಪಾಸ್ ನೀಡಲಾಗುವುದು. ಡೀಸೆಲ್ ದರ ಹೆಚ್ಚಾದರೂ ಬಸ್ ದರ ಹೆಚ್ಚಿಸದೆ ಓಡಿಸುತ್ತಿದ್ದೇವೆ’ ಎಂದರು.

ಕೆಎಸ್ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ಮಾತನಾಡಿ, ‘ನಮ್ಮ ನಾಲ್ಕು ನಿಗಮಗಳಿಂದ ಸುಮಾರು 25,000 ಬಸ್‌ಗಳು ಸಂಚರಿಸುತ್ತಿವೆ. ಕೆಎಸ್ಆರ್‌ಟಿಸಿ ಸಾರ್ವಜನಿಕ ಸೇವಾ ವಲಯದಲ್ಲಿ ದೇಶದಲ್ಲಿಯೇ ಅತ್ಯುತ್ತಮ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ’ ಎಂದರು.

ಐದು ವರ್ಷ ಅಪಘಾತ ರಹಿತ ಚಾಲನೆ ಮಾಡಿದ ಚಾಲಕರಾದ ಸಿ.ಶಿವಕುಮಾರ ಸ್ವಾಮಿ, ಬಾಷ, ಜಿ.ಟಿ. ಲೋಕೇಶ್, ಶಿವಶಂಕರ ಮೂರ್ತಿ, ಎಸ್. ನಟರಾಜ, ಲಕ್ಷ್ಮಣ ಜಾನಮಟ್ಟಿ, ಆರ್.ಪುಟ್ಟರಾಜು, ವಿಜಯ ಕುಮಾರ, ಎಚ್.ಡಿ.ರಾಘವೇಂದ್ರ ಅವರಿಗೆ ಬೆಳ್ಳಿ ಪದಕ ನೀಡಿ ಸನ್ಮಾನಿಸಲಾಯಿತು.

ಪುರಸಭೆ ಅಧ್ಯಕ್ಷ ಆರ್.ಎ. ಅಶೋಕ್, ಉಪಾಧ್ಯಕ್ಷ ಕೆ.ಸಿ. ರಮೇಶ್, ಸದಸ್ಯರಾದ ಮನ್ಸೂರ್, ಮುರುಗೇಶ್, ಮಲ್ಲಿಕಾರ್ಜುನ ಸ್ವಾಮಿ, ಸಜಿಲ್, ಬಿ.ಎಸ್. ರುದ್ರಪ್ಪ, ನಾಗರತ್ನಾ, ಸುಧಾ, ಪುರಸಭೆ ಮುಖ್ಯಾಧಿಕಾರಿ ಎ. ವಾಸಿಂ, ತಹಶೀಲ್ದಾರ್ ರಮೇಶಾಚಾರಿ, ಕೆಎಸ್ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಕೆ. ಸತ್ಯಸುಂದರಂ, ರಾಜಣ್ಣ, ನಿರ್ದೇಶಕರಾದ ರುದ್ರೇಶ್, ರಾಜು, ದಗ್ಗೆ ಶಿವಪ್ರಕಾಶ್, ಎಲ್.ಬಿರಾಜಶೇಖರ್, ಡಿ.ಸಿ.ಮೋಹನ್, ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT