ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಊರಿಗೆ ಮರಳಿದ ವಲಸೆ ಕಾರ್ಮಿಕರು

Last Updated 24 ಏಪ್ರಿಲ್ 2020, 14:56 IST
ಅಕ್ಷರ ಗಾತ್ರ

ಚಿತ್ರದುರ್ಗ: ಲಾಕ್‌ಡೌನ್‌ ಘೋಷಣೆಯಾದ ಬಳಿಕ ಜಿಲ್ಲೆಯ ಗಡಿದಾಟಲು ಪ್ರಯತ್ನಿಸಿ ಅತಂತ್ರರಾಗಿದ್ದ ನೂರಾರು ಕಾರ್ಮಿಕರು ಊರಿಗೆ ಮರಳಲು ಜಿಲ್ಲಾಡಳಿತ ಶುಕ್ರವಾರ ಅವಕಾಶ ಕಲ್ಪಿಸಿತು. ವಸತಿ ಶಾಲೆ, ಹಾಸ್ಟೆಲ್‌ಗಳಲ್ಲಿ ನೆಲೆಸಿದ್ದ ಇವರನ್ನು ಆತ್ಮೀಯವಾಗಿ ಬೀಳ್ಕೊಡಲಾಯಿತು.

ಚಿತ್ರದುರ್ಗದ ಗಾಂಧಿ ನಗರದ ಸರ್ಕಾರಿ ಹಾಸ್ಟೆಲ್‌ನಲ್ಲಿದ್ದ ಯಾದಗಿರಿಯ ಕಾರ್ಮಿಕರು, ಚಳ್ಳಕೆರೆಯ ಮೊರಾರ್ಜಿ ವಸತಿ ಶಾಲೆಯಲ್ಲಿದ್ದ ರಾಯಚೂರು, ಕಲಬುರ್ಗಿ, ಕೊಪ್ಪಳ ಜಿಲ್ಲೆಯ ಕಾರ್ಮಿಕರು ಊರಿಗೆ ತೆರಳಿದರು. ರಾಜ್ಯದೊಳಗಿನ ಕಾರ್ಮಿಕರನ್ನು ಊರಿಗೆ ಮರಳಿಸಲು ಸರ್ಕಾರ ಅವಕಾಶ ಕಲ್ಪಿಸಿದ ಹಿನ್ನಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಕೆಲಸ ಅರಸಿ ಬೆಂಗಳೂರಿಗೆ ಹೋಗಿದ್ದ ಕಾರ್ಮಿಕರು ಮಾರ್ಚ್‌ 24ರಂದು ಲಾಕ್‌ಡೌನ್‌ ಘೋಷಣೆಯಾದ ಬಳಿಕ ಅತಂತ್ರರಾಗಿದ್ದರು. ಸಾರಿಗೆ ಸಂಪರ್ಕವೂ ಕಡಿತಗೊಂಡ ಪರಿಣಾಮ ಗೂಡ್ಸ್‌ ವಾಹನದಲ್ಲಿ ಊರಿಗೆ ಹೊರಟಿದ್ದರು. ಚೆಕ್‌ಪೋಸ್ಟ್‌ಗಳಲ್ಲಿ ಇವರನ್ನು ತಡೆದ ಪೊಲೀಸರು ಪುನರ್ವಸತಿ ಕಲ್ಪಿಸಿದ್ದರು. ಊಟ ಸೇರಿ ಎಲ್ಲ ಸೌಲಭ್ಯವನ್ನು ಕಲ್ಪಿಸಲಾಗಿತ್ತು.

‘ಯಾದಗಿರಿ ಜಿಲ್ಲೆಯ 17 ಕಾರ್ಮಿಕರಿಗೆ ಗಾಂಧಿ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಪುನರ್ವಸತಿ ಸೌಲಭ್ಯ ಕಲ್ಪಿಸಲಾಗಿತ್ತು. ಇವರ ಆರೋಗ್ಯ ತಪಾಸಣೆ ನಡೆಸಿ, ರಾತ್ರಿಯ ಊಟ ನೀಡಿ ಊರಿಗೆ ಕಳುಹಿಸಿಕೊಡಲಾಯಿತು. ಕೆಎಸ್‌ಆರ್‌ಟಿಸಿ ಬಸ್‌ವೊಂದರಲ್ಲಿ ಪ್ರಯಾಣಿಸಿದರು’ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಮಂಜುಳಮ್ಮ ಮಾಹಿತಿ ನೀಡಿದರು.

ಬೆಂಗಳೂರಿನಿಂದ ಊರಿಗೆ ಹೊರಟಿದ್ದ 178 ಕಾರ್ಮಿಕರನ್ನು ಮೊಳಕಾಲ್ಮುರು ಗಡಿಯಲ್ಲಿ ವಶಕ್ಕೆ ಪಡೆಯಲಾಗಿತ್ತು. ಚಳ್ಳಕೆರೆಯ ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಮೊರಾರ್ಜಿ ವಸತಿ ಶಾಲೆಯಲ್ಲಿ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಿಕೊಡಲಾಗಿತ್ತು. ಇವರಲ್ಲಿ ಐವರು ಗರ್ಭಿಣಿಯರು ಹಾಗೂ 30ಕ್ಕೂ ಹೆಚ್ಚು ಮಕ್ಕಳು ಇದ್ದರು. ಎರಡು ವಾರದ ಬಳಿಕ ಗ್ರಾಮಕ್ಕೆ ತೆರಳಿವ ಅವಕಾಶ ಲಭಿಸಿದೆ.

‘ಗರ್ಭಿಣಿಯರನ್ನು ಚೆನ್ನಾಗಿ ಆರೈಕೆ ಮಾಡಲಾಗಿದೆ. ಮಾವಿನ ಕಾಯಿ, ಮಾಂಸದೂಟದಂತಹ ಬಯಕೆಗಳನ್ನು ಕೂಡ ಈಡೇರಿಸಿದ್ದೇವೆ. ಎಲ್ಲರೂ ಆರೋಗ್ಯವಾಗಿದ್ದು, ಹರ್ಷದಿಂದ ಊರಿಗೆ ಮರಳುತ್ತಿದ್ದಾರೆ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಸುರಪುರ, ಜೇವರ್ಗಿ, ಗುರುಮಿಠಕಲ್, ಶಾಪುರ, ಚಿತ್ತಾಪುರ, ಕುಷ್ಟಗಿ, ಲಿಂಗಸೂರು, ಸಿಂದನೂರು ಹಾಗೂ ದೇವದುರ್ಗ ತಾಲ್ಲೂಕಿನ ಕಾರ್ಮಿಕರು ಊರುಗಳಿಗೆ ಮರಳಿದರು. ಇದಕ್ಕೆ ಜಿಲ್ಲಾಡಳಿತ ಏಳು ಕೆಎಸ್‌ಆರ್‌ಟಿಸಿ ಬಸ್‌ ವ್ಯವಸ್ಥೆ ಕಲ್ಪಿಸಿತ್ತು. ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಕಾರ್ಮಿಕರನ್ನು ಬೀಳ್ಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT