ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಳಲ್ಕೆರೆ: ನಿರ್ವಹಣೆ ಇಲ್ಲದೆ ಒಣಗಿದ ಈಚಲ ಮರಗಳು!

ರಸ್ತೆ ವಿಭಜಕದ ಮಧ್ಯೆ ಪಾರ್ಥೇನಿಯಂ ಕಳೆ, ಕಾಣದ ಆಲಂಕಾರಿಕ ಗಿಡಗಳು
Last Updated 23 ಫೆಬ್ರುವರಿ 2022, 2:26 IST
ಅಕ್ಷರ ಗಾತ್ರ

ಹೊಳಲ್ಕೆರೆ: ಪಟ್ಟಣದ ಹೊಸದುರ್ಗ ಮಾರ್ಗದಲ್ಲಿ ರಸ್ತೆ ವಿಭಜಕದ ಮಧ್ಯೆ ನೆಟ್ಟಿದ್ದ ಈಚಲ ಮರಗಳು ಸಮರ್ಪಕ ನಿರ್ವಹಣೆ ಇಲ್ಲದೆ ಒಣಗುತ್ತಿವೆ.

2021ರ ಆಗಸ್ಟ್‌ನಲ್ಲಿ ಹೈದರಾಬಾದ್‌ನಿಂದ 42 ಈಚಲ ಮರಗಳನ್ನು ತರಿಸಲಾಗಿತ್ತು. ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಅಂಗವಾಗಿ ರಸ್ತೆ ವಿಭಜಕದ ಮಧ್ಯೆ ಕ್ರೇನ್ ಬಳಸಿ ಈಚಲ ಮರಗಳನ್ನು ನೆಡಲಾಗಿತ್ತು. ಹೈದರಾಬಾದ್‌ನಿಂದ ಇಲ್ಲಿಗೆ ತರಲು ಸಾಗಾಣಿಕೆ ವೆಚ್ಚ ಸೇರಿದಂತೆ ಪ್ರತಿ ಮರಕ್ಕೆ ₹5,000 ಖರ್ಚಾಗಿತ್ತು. ಇವುಗಳ ಮಧ್ಯದಲ್ಲಿ ಬೆಂಗಳೂರು, ರಾಜಮುಂಡ್ರಿಯಿಂದ ತರಿಸಿದ ಬೋಗನ್ ವಿಲ್ಲಾ, ಟೆಕ್ಸಾಸ್ ಲಂಟಾನ, ಯೂಪೋರ್ಬಿಯಾ, ಮಿಲಯ, ಲಾಜೆಸ್ಟೋಮಿಯ ಇಂಡಿಕಾ, ಮೂರು ತಿಂಗಳು ಹೂಗಳು ಬಾಡದಿರುವ ಲೆಗಟ್ರೋಮಿಯ, ಕ್ರೋಟಾನ್ ಸೇರಿದಂತೆ 48 ವಿವಿಧ ಬಗೆಯ ಆಲಂಕಾರಿಕ ಗಿಡಗಳನ್ನು ನಾಟಿ ಮಾಡಲಾಗಿತ್ತು.

ಈಚಲ ಮರ, ಆಲಂಕಾರಿಕ ಸಸಿ ನೆಡುವುದು, ಹನಿ ನೀರಾವರಿ ಅಳವಡಿಸಲು ಸುಮಾರು ₹12 ಲಕ್ಷ ವೆಚ್ಚವಾಗಿತ್ತು. ಸಸಿ ನೆಡುವುದು, ಗೊಬ್ಬರ ಹಾಕುವುದು ಹಾಗೂ ಮೇಲ್ವಿಚಾರಣೆಯ ಜವಾಬ್ದಾರಿಯನ್ನು ತೋಟಗಾರಿಕೆ ಇಲಾಖೆಗೆ ವಹಿಸಲಾಗಿತ್ತು. ನೀರು ಹಾಯಿಸುವುದು, ಕಳೆ ತೆಗೆಯುವ ಹೊಣೆಯನ್ನು ಪುರಸಭೆಗೆ ನೀಡಲಾಗಿತ್ತು. ಆದರೆ, ಸರಿಯಾದ ನಿರ್ವಹಣೆ ಇಲ್ಲದೆ ಈಚಲ ಮರಗಳೂ ಒಣಗುತ್ತಿದ್ದು, ಕೆಲವು ಕಡೆ ಆಲಂಕಾರಿಕ ಸಸಿಗಳೂ ನಾಶವಾಗಿವೆ.

‘ಭೂಮಿಯಿಂದ ಬುಡ ಸಮೇತ ತೆಗೆದ 10 ವರ್ಷ ಪ್ರಾಯದ ಈಚಲ ಮರಗಳನ್ನು ಹೈದರಾಬಾದ್‌ನಿಂದ ತರಿಸಿದ್ದೆವು. ಮರಗಳನ್ನು ಭೂಮಿಯಿಂದ ಬೇರ್ಪಡಿಸುವಾಗ ಬೇರುಗಳನ್ನು ಕತ್ತರಿಸಲಾಗುತ್ತದೆ. ದೊಡ್ಡ ಮರಗಳನ್ನೇ ನೆಡುವುದರಿಂದ ಅವು ಚಿಗುರಲು ಹೆಚ್ಚು ಸಮಯ ಬೇಕು. ಇದರಿಂದ ಮರಗಳು ಒಣಗಿದಂತೆ ಕಾಣುತ್ತವೆ. ಪಟ್ಟಣ ವ್ಯಾಪ್ತಿಯಲ್ಲಿ ಹೆಚ್ಚು ಶಾಖ ಇರುವುದರಿಂದ ಕೆಲವು ಮರಗಳು ಮಾತ್ರ ಒಣಗಿದ್ದು, ಉಳಿದವು ಚಿಗುರುತ್ತವೆ’ ಎನ್ನುತ್ತಾರೆ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಕುಮಾರ ನಾಯ್ಕ್.

‘ಸಸಿಗಳಿಗೆ ಟ್ಯಾಂಕರ್ ಮೂಲಕ ನೀರು ಹಾಯಿಸುತ್ತಿದ್ದೇವೆ. ಕೆಲವು ಕಡೆ ಕಳೆ ಬೆಳೆದಿದ್ದು, ತೆಗೆಸುತ್ತೇವೆ. ಕೆಲವು ಸಸಿಗಳು ಒಣಗಿದ್ದು, ಉಳಿದವು ಚಿಗುರಿವೆ’ ಎನ್ನುತ್ತಾರೆ ಪುರಸಭೆ ಮುಖ್ಯಾಧಿಕಾರಿ ವಾಸಿಂ.

ಆರೇಳು ಅಡಿ ಬೆಳೆದ ಪಾರ್ಥೇನಿಯಂ ಕಳೆ
ಪಟ್ಟಣದ ವ್ಯಾಪ್ತಿಯಲ್ಲಿ ಮಾತ್ರ ಕಳೆ ತೆಗೆದಿದ್ದು, ಚಿಕ್ಕಕೆರೆಯ ಮುಂದೆ ಪೆಟ್ರೋಲ್ ಬಂಕ್‌ವರೆಗೆ ರಸ್ತೆ ವಿಭಜಕದ ಮಧ್ಯೆ ಪಾರ್ಥೇನಿಯಂ ಬೆಳೆದುನಿಂತಿದೆ. ಸುಮಾರು ಆರೇಳು ಅಡಿ ಎತ್ತರ ಕಳೆ ಬೆಳೆದಿದ್ದು, ಆಲಂಕಾರಿಕ ಸಸಿಗಳು ಮುಚ್ಚಿ ಹೋಗಿವೆ. ಈ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರು, ಸಾರ್ವಜನಿಕರು ಕಳೆ ಬೆಳೆದಿರುವ ದೃಶ್ಯ ನೋಡಿ ಬೇಸರ ವ್ಯಕ್ತಪಡಿಸುತ್ತಾರೆ.

‘ಶಾಸಕ ಎಂ.ಚಂದ್ರಪ್ಪ ಈ ಮಾರ್ಗದ ರಸ್ತೆ ವಿಸ್ತರಿಸಿ ರಸ್ತೆ ವಿಭಜಕದ ಮಧ್ಯೆ ವಿದ್ಯುತ್ ದೀಪ ಅಳವಡಿಸಿದ್ದಾರೆ. ಅವರೇ ಖುದ್ದು ಕಾಳಜಿ ವಹಿಸಿ ಹೈದರಾಬಾದ್ ನಿಂದ ಈಚಲ ಮರಗಳನ್ನು ತರಿಸಿ ನೆಡಿಸಿದ್ದರು. ಆಗ ಶಾಸಕರ ಕಾರ್ಯಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದರು. ಆದರೆ, ಈಗ ಸರಿಯಾದ ನಿರ್ವಹಣೆ ಇಲ್ಲದೆ ಮರಗಳು ಒಣಗುತ್ತಿರುವುದರಿಂದ ಬೇಸರ ಆಗುತ್ತಿದೆ’ ಎನ್ನುತ್ತಾರೆ ಈ ಮಾರ್ಗದಲ್ಲಿ ನಿತ್ಯ ಬೆಳಿಗ್ಗೆ ಮತ್ತು ಸಂಜೆ ವಾಯುವಿಹಾರಕ್ಕೆ ತೆರಳುವ ಪಟ್ಟಣದ ನಿವಾಸಿ ಗುರುಶಾಂತಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT