ಭಾನುವಾರ, ಸೆಪ್ಟೆಂಬರ್ 25, 2022
21 °C

40 ವರ್ಷಗಳ ನಂತರ ಕೋಡಿ ಬಿದ್ದ ಕ್ಯಾದಿಗುಂಟೆ ಕೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪರಶುರಾಂಪುರ: ಹೋಬಳಿಯ ಕ್ಯಾದಿಗುಂಟೆ, ಸಿದ್ದೇಶ್ವರನದುರ್ಗ, ಪಿಲ್ಲಹಳ್ಳಿ ಕೆರೆಗಳು ಕೋಡಿ ಬಿದ್ದಿದ್ದು ಈ ಭಾಗದ ರೈತರಲ್ಲಿ ಹರ್ಷ ಮನೆ ಮಾಡಿದೆ.

ಊರಿನ ಹಿರಿಯರೆಲ್ಲ ಸೇರಿ ಕೆರೆಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಮೈಸೂರು ಮಹರಾಜರ ಕಾಲದಲ್ಲಿ ಕಟ್ಟಿದ್ದ ಕೆರೆಗಳು ಅಗೆಲ್ಲ ಪ್ರತಿ ವರ್ಷ ತುಂಬುತ್ತಿದ್ದವು ಅದರೆ 35-40 ವರ್ಷಗಳಿಂದ ಈ ಭಾಗದಲ್ಲಿ ಮಳೆಯಾಗದೇ ಅಂತರ್ಜಲ ಮಟ್ಟವು ಪಾತಳಕ್ಕೆ ಕುಸಿದಿತ್ತು. ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿತ್ತು. ಅದರೆ ಈ ಬಾರಿ ಮಳೆ ಉತ್ತಮವಾಗಿ ಬಂದಿದ್ದು 40 ವರ್ಷಗಳಿಂದ ತುಂಬದ ಕ್ಯಾದಿಗುಂಟೆ ಕೆರೆ ಈ ಬಾರಿ ಕೋಡಿ ಬಿದ್ದಿದೆ.

ಇತ್ತ ಸಿದ್ದೇಶ್ವರನದುರ್ಗ ಗ್ರಾಮದ ಕೆರೆಯು 28 ವರ್ಷಗಳ ನಂತರ ಕೋಡಿ ಬಿದ್ದಿದ್ದು ಮರಡಿಹಟ್ಟಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಕಡಿದು ಹೋಗಿದೆ.

ಹೋಬಳಿಯ ಪಿಲ್ಲಹಳ್ಳಿ ಕೆರೆಯು 34 ವರ್ಷಗಳ ನಂತರ ಕೋಡಿ ಬಿದ್ದಿದೆ. ಇಲ್ಲಿಯ ಬೊಮ್ಮದೇವರಕುಂಟೆ ಕೆರೆ ಮಾತ್ರ ಸತತ 4 ವರ್ಷಗಳಿಂದ ಕೋಡಿ ಬೀಳುತ್ತಿದೆ.

‘ನಾವು ಚಿಕ್ಕ ಹುಡುಗರಾಗಿದ್ದಾಗ ಕೆರೆ ಕೋಡಿ ಬಿದ್ದುದನ್ನು ನೋಡಿದ್ದೆವು.ಈಗ ಅಂತಹ ದೃಶ್ಯ ಮತ್ತೆ ನೋಡುವ ಭಾಗ್ಯ ಸಿಕ್ಕಿದೆ. ಇದರಿಂದ ಅಂತರ್ಜಲ ಮಟ್ಟವು ಹೆಚ್ಚಲಿದೆ’ ಎಂದು ಕ್ಯಾದಿಗುಂಟೆ ರೈತ ನಾಗರಾಜ ಎ. ಅಭಿಪ್ರಾಯಪಟ್ಟರು. 

‘ನಾನು 6ನೇ ತರಗತಿ ಓದುತ್ತಿರುವಾಗ ಈ ಕೆರೆ ಕೋಡಿ ಬಿದ್ದಿದ್ದನ್ನು ನೋಡಿದ್ದೆ. ಈಗ ಹಿಂದೆಂದೂ ಕಾಣದ ರೀತಿಯಲ್ಲಿ ಹಳ್ಳ ಮತ್ತು ಕೋಡಿಯ ಮೇಲೆ ನೀರು ಹರಿಯುತ್ತಿದೆ. ಹಿಂದಿನ ಕಾಲ ಮರು ಕಳಿಸುತ್ತದೆ ಎಂಬಂತೆ ಭಾಸವಾಗುತ್ತಿದೆ’ ಎಂದು ಮರಡಿಹಟ್ಟಿ ಗ್ರಾಮಸ್ಥ ಸಣ್ಣಪ್ಪ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು