ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರದಲ್ಲಿ ಗೋಶಾಲೆಗೆ ಭೂಮಿ

ಜಿಲ್ಲಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ ಹೇಳಿಕೆ
Last Updated 19 ಮೇ 2022, 3:06 IST
ಅಕ್ಷರ ಗಾತ್ರ

ಚಿತ್ರದುರ್ಗ: ರಾಜ್ಯದ ಗೋಸಂಪತ್ತಿನ ರಕ್ಷಣೆಗಾಗಿ ಸರ್ಕಾರ 31 ಹೊಸ ಗೋಶಾಲೆ ತೆರೆಯಲು ನಿರ್ಧರಿಸಿದ್ದು, ಜಿಲ್ಲೆಯ ಗೋಶಾಲೆಗಳಿಗೆ ಅಗತ್ಯವಿರುವ ಭೂಮಿಯನ್ನು ವಾರದಲ್ಲಿ ಗುರುತಿಸಿ ಮಂಜೂರು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಕವಿತಾ ಎಸ್‌. ಮನ್ನಿಕೇರಿ ತಿಳಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಜರುಗಿದ ಜಿಲ್ಲಾ ಪ್ರಾಣಿ ದಯಾ ಸಂಘದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಜಿಲ್ಲೆಗೆ 4 ಗೋಶಾಲೆಗಳ ಅವಶ್ಯಕತೆಯಿದ್ದು, ಚಳ್ಳಕೆರೆ ತಾಲ್ಲೂಕಿನ ಕುರುಡಿಹಳ್ಳಿಯಲ್ಲಿ ಒಂದು ಗೋಶಾಲೆ ಕಾರ್ಯನಿರ್ವಹಿಸುತ್ತಿದೆ. ಇದಕ್ಕೆ ಪೂರಕವಾಗಿ 3 ಹೊಸ ಗೋಶಾಲೆಗಳನ್ನು ಜಿಲ್ಲಾ ವ್ಯಾಪ್ತಿಯಲ್ಲಿ ತೆರೆಯಲಾಗುವುದು’ ಎಂದರು.

‘ಚಿತ್ರದುರ್ಗ ತಾಲ್ಲೂಕಿನ ಸಿಂಗಾಪುರ ಬಳಿ 35 ಎಕರೆ ಜಮೀನು ಇದೆ. ಇದರಲ್ಲಿ ಒಂದು ಗೋಶಾಲೆ ತೆರೆಯಲು ಅಗತ್ಯವಿರುವ 10 ಎಕರೆ ಜಾಗವನ್ನು ತಹಶೀಲ್ದಾರ್ ಹಾಗೂ ಪಶು ಇಲಾಖೆ ಉಪನಿರ್ದೇಶಕರು ಜಂಟಿಯಾಗಿ ಪರಿ
ಶೀಲನೆ ನಡೆಸಿ ವರದಿ ನೀಡಬೇಕು. ಮೊಳಕಾಲ್ಮುರು, ಹಿರಿಯೂರು, ಹೊಸದುರ್ಗ ಹಾಗೂ ಹೊಳಲ್ಕೆರೆ ತಾಲ್ಲೂಕುಗಳಲ್ಲಿ ತಹಶೀಲ್ದಾರ್‌ಗಳು ಜಾಗ ಗುರುತಿಸಿ ವರದಿ ಸಲ್ಲಿಸಬೇಕು’ ಎಂದು ಸೂಚಿಸಿದರು.

‘ಖಾಸಗಿ ಗೋಶಾಲೆ ನಡೆಸುವವರು ಗೋ ಹತ್ಯಾ ನಿಷೇಧ ಕಾಯ್ದೆಯಡಿ ರಕ್ಷಿಸಿದ ಜಾನುವಾರುಗಳಿಗೆ ಆಶ್ರಯ ಒದಗಿಸಬೇಕು. ಇಲ್ಲವಾದರೆ ಗೋಶಾಲೆಗಳಿಗೆ ಸರ್ಕಾರ ನೀಡುತ್ತಿರುವ ಸಹಾಯಧನವನ್ನು ತಡೆ ಹಿಡಿಯಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಆದಿಚುಂಚನಗಿರಿ ಗೋಶಾಲೆ ನಿರ್ವಾಹಕ ನಿರಂಜನ ಮೂರ್ತಿ ಮಾತನಾಡಿ, ‘ಎನ್‌ಡಿಆರ್‌ಎಫ್‌ ಮಾರ್ಗಸೂಚಿ ಅನುಸಾರ ಪ್ರತಿ ಜಾನುವಾರುವಿಗೆ ನೀಡುತ್ತಿರುವ ಸಹಾಯಧನ ಹೆಚ್ಚಿಸಬೇಕು’ ಎಂದು ಮನವಿ ಮಾಡಿದರು.

ಇದಕ್ಕೆ ಉತ್ತರಿಸಿದ ಪಶುಪಾಲನೆ ಮತ್ತು ಪಶುವೈದ್ಯ ಸೇವಾ ಇಲಾಖೆ ಉಪನಿರ್ದೇಶಕ ಡಾ.ಎಸ್‌.ಕಲ್ಲಪ್ಪ ‘ಎನ್‌ಡಿಆರ್‌ಎಫ್‌ ಅಡಿ ನೀಡುತ್ತಿರುವ ಸಹಾಯಧನ ಹೆಚ್ಚಿಸುವ ಕುರಿತು ಕೇಂದ್ರ ಸರ್ಕಾರ ಮಟ್ಟದಲ್ಲಿ ಚಿಂತನೆ ನಡೆಸಲಾಗಿದೆ. ಸದ್ಯ ದಿನ ಒಂದಕ್ಕೆ ಪ್ರತಿ ಜಾನುವಾರಿಗೆ ₹ 70 ನಿರ್ವಹಣೆ ವೆಚ್ಚವೆಂದು ನಿಗದಿಪಡಿಸಲಾಗಿದೆ. ಇದರಲ್ಲಿ ಶೇ 25 ರಷ್ಟು ಹಣವನ್ನು ಖಾಸಗಿ ಗೋಶಾಲೆಗಳಿಗೆ ಜಾನುವಾರು ಸಂಖ್ಯೆ ಆಧರಿಸಿ ನೀಡಲಾಗುತ್ತದೆ’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಕೆ. ನಂದಿನಿದೇವಿ, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಪಾಲಿ ಕ್ಲಿನಿಕ್‌ ಉಪ ನಿರ್ದೇಶಕ ಡಾ.ಪ್ರಸನ್ನ, ತಹಶೀಲ್ದಾರ್‌ ಸತ್ಯನಾರಾಯಣ, ಜಿಲ್ಲಾ ಪ್ರಾಣಿ ಕಲ್ಯಾಣ ಅಧಿಕಾರಿ ದೇವಿಪ್ರಸಾದ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT