ಶನಿವಾರ, ಏಪ್ರಿಲ್ 17, 2021
23 °C
ಗುಗ್ಗರಿ ಹಬ್ಬದಲ್ಲಿ ಬುಡಕಟ್ಟು ಸಂಸ್ಕೃತಿಯ ಅನಾವರಣ

ನಾಯಕನಹಟ್ಟಿ: ಕಾಯಕಯೋಗಿ ತಿಪ್ಪೇರುದ್ರಸ್ವಾಮಿಗೆ ಗುಗ್ಗರಿ ಸೇವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಾಯಕನಹಟ್ಟಿ: ಬುಡಕಟ್ಟು ಜನರ ಆರಾಧ್ಯ ದೈವ ಗುರು ತಿಪ್ಪೇರುದ್ರಸ್ವಾಮಿ ಹೊರಮಠದಲ್ಲಿ ಸೋಮವಾರ ವಾರ್ಷಿಕ ಗುಗ್ಗರಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಹಬ್ಬದಲ್ಲಿ ‌ಬುಡಕಟ್ಟು ಸಂಸ್ಕೃತಿಯ ಆಚರಣೆಯ ಅನಾವರಣವಾಯಿತು.

ಗುರು ತಿಪ್ಪೇರುದ್ರಸ್ವಾಮಿಯು ಚಿತ್ರದುರ್ಗ ಜಿಲ್ಲೆಯ ಸಾಂಸಕೃತಿಕ ನಾಯಕನಾಗಿ ನೂರಾರು ಗ್ರಾಮಗಳಿಗೆ ಬುಡಕಟ್ಟು ದೈವವಾಗಿ ಗುರುತಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಪಟ್ಟಣದ ಹೊರಮಠ ದೇವಾಲಯದಲ್ಲಿ ವಾರ್ಷಿಕವಾಗಿ ನಡೆಯುವ ಎಲ್ಲಾ ಕಾರ್ಯಕ್ರಮಗಳು ಜನಪದ ಹಾಗೂ ಬುಡಕಟ್ಟು ಸಂಸ್ಕೃತಿಯ ನೆಲೆಯಲ್ಲಿ ಕಂಡು ಬರುತ್ತವೆ. ಅಂತಹ ಆಚರಣೆಗಳಲ್ಲಿ ಪ್ರಮುಖವಾದದ್ದು ಗುಗ್ಗರಿ ಹಬ್ಬ.

ಗುಗ್ಗರಿ ಹಬ್ಬದ ವಿಶೇಷ: ಶಿವರಾತ್ರಿಯ ನಂತರ ಬರುವ ವಾರ್ಷಿಕ ಜಾತ್ರೆಗೆ ಸಾಕ್ಷಿಯಾಗಿ ಕಂಕಣ ಪೂಜೆಯ ಮೊದಲು ಬರುವ ಶುಭ ಸೋಮವಾರದಂದು ಗುಗ್ಗರಿ ಹಬ್ಬವನ್ನು ಆಚರಿಸಲಾಗುವುದು. ಅಂದು ಪಟ್ಟಣದ ಎರಡು ದೇವಾಲಯಗಳಲ್ಲಿ ವಿಶೇಷ ಪೂಜೆಯನ್ನು ಕೈಗೊಂಡು, ರೈತರು, ಭಕ್ತರು ಬೆಳೆದ ಹೊಸ ಧಾನ್ಯವನ್ನು ಮೊದಲು ದೇವರಿಗೆ ಅರ್ಪಿಸುತ್ತಾರೆ. ಜತೆಗೆ ಸಮೀಪದ ಹಳ್ಳಿಗಳ ಬುಡಕಟ್ಟು ಸಂಸ್ಕೃತಿಯ ಪ್ರತೀಕವಾದ ದೇವರೆತ್ತುಗಳ ಸೆಗಣಿ ಕುರುಳಿನಿಂದ ಹುರುಳಿ ಧಾನ್ಯವನ್ನು ಬೇಯಿಸಲಾಗುವುದು. ಸೆಗಣಿ ಸುಟ್ಟ ಕುರುಳಿನ ಭಸ್ಮವನ್ನು ಹೊರಮಠದಲ್ಲಿ ಪವಿತ್ರವಾದ ವಿಭೂತಿಯಾಗಿ ವರ್ಷಪೂರ್ತಿ ಬಳಸುತ್ತಾರೆ. ಬೇಯುಸಿದ ಹುರುಳಿ ಗುಗ್ಗರಿಯನ್ನು ಸಂಜೆ ದೇವಾಲಯಕ್ಕೆ ಬರುವ ಎಲ್ಲಾ ಭಕ್ತರಿಗೆ ಪ್ರಸಾದವಾಗಿ ಹಂಚಲಾಗುತ್ತದೆ. ಆ ಮೂಲಕ ಸುಗ್ಗಿಯ ಹಬ್ಬವಾಗಿ ಬಿಂಬಿತವಾಗುವ ಗುಗ್ಗರಿ ಹಬ್ಬವು ಬುಡಕಟ್ಟು ಜನರ ಆಹಾರ ಪದ್ಧತಿಯಲ್ಲಿ ಸಮಾನತೆ ತರುವ ಸಂದೇಶ ಸಾರುತ್ತದೆ.

ಸರದಿಯಲ್ಲಿ ನಿಂತು ಗುಗ್ಗರಿ ಸ್ವೀಕರಿದ ಭಕ್ತರು: ಪ್ರತಿ ಸೋಮವಾರ ದೇವರ ಉತ್ಸವ ಮೂರ್ತಿಯ ಪಲ್ಲಕ್ಕಿಯಲ್ಲಿ ಊಳಿಗೆ ಸೇವೆಗಾಗಿ ಹೊರಮಠಕ್ಕೆ ಬಂದಾಗ, ದೇವಾಲಯದಲ್ಲಿ ವಿಶೇಷ ಪೂಜೆ ಹಾಗೂ ಮಂಗಳಾರತಿ ಮಾಡಿ ನೆರೆದ ಭಕ್ತರಿಗೆ ಗುಗ್ಗರಿ ವಿತರಿಸಲಾಯಿತು. ದೇವಾಲಯದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ ಭಕ್ತರು ಸರದಿ ಸಾಲಿನಲ್ಲಿ ನಿಂತು ಗುಗ್ಗರಿಯನ್ನು ಸ್ವೀಕರಿಸಿದರು.

ಮುಖಂಡರಾದ ಎಸ್. ಸತೀಶ್, ಎಸ್.ಟಿ. ಬೋರಸ್ವಾಮಿ, ಮಹಾಂತೇಶ್, ರವಿ, ಪ್ರಹ್ಲಾದ್, ಪಿ.ರುದ್ರೇಶ್, ಪಾಲಯ್ಯ, ಸೂರಯ್ಯ, ಓಬಣ್ಣ, ರಾಜಯ್ಯ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.