ಚಿರತೆ ದಾಳಿ: ನಾಲ್ಕು ಕುರಿ ಬಲಿ

7
ಬೇವಿನಹಳ್ಳಿ ಗ್ರಾಮಸ್ಥರ ಆತಂಕ

ಚಿರತೆ ದಾಳಿ: ನಾಲ್ಕು ಕುರಿ ಬಲಿ

Published:
Updated:
Prajavani

ಹೊಸದುರ್ಗ: ತಾಲ್ಲೂಕಿನ ಲಕ್ಕಿಹಳ್ಳಿ ಗ್ರಾಮ ಪಂಚಾಯಿತಿ ಬೇವಿನಹಳ್ಳಿಯ ಕುರಿ ರೊಪ್ಪದಲ್ಲಿ ಗುರುವಾರ ರಾತ್ರಿ ಚಿರತೆ ದಾಳಿಗೆ 4 ಕುರಿಗಳು ಮೃತಪಟ್ಟಿವೆ.

ಬೇವಿನಹಳ್ಳಿ ಗ್ರಾಮದ ಮಂಜಣ್ಣ ಹಾಗೂ ನಾಗರಾಜಪ್ಪ ಅವರಿಗೆ ಕುರಿಗಳು ಸೇರಿವೆ. ₹ 30 ಸಾವಿರ ಮೌಲ್ಯದ 4 ಕುರಿಗಳನ್ನು ಒಂದೇ ರಾತ್ರಿಯಲ್ಲಿ ಚಿರತೆಗೆ ಬಲಿಯಾಗಿರುವುದರಿಂದ ಗ್ರಾಮಸ್ಥರು ಆತಂಕಗೊಂಡಿದ್ದಾರೆ.

ವಾಣಿವಿಲಾಸ ಸಾಗರದ ಹಿನ್ನೀರು ಪ್ರದೇಶದ ಅಂಚಿನಲ್ಲಿ ಇರುವ ಬೇವಿನಹಳ್ಳಿ, ತಿಮ್ಮಪ್ಪನಹಳ್ಳಿ, ಮಾಳಿಗೆಹಟ್ಟಿ, ಬಂಟನಗವಿ, ಹೊಸೂರು ಭೋವಿಹಟ್ಟಿ, ಐನಹಳ್ಳಿ, ಪೂಜಾರಹಟ್ಟಿ, ಮಲ್ಲಾಪುರ, ಅರೇಹಳ್ಳಿ, ತಿಪ್ಪೇನಹಳ್ಳಿ, ಅಜ್ಜಿಕಂಸಾಗರ ಗ್ರಾಮಗಳಲ್ಲಿ  ಮೂರು ತಿಂಗಳಿನಿಂದಲೂ ಎರಡು, ಮೂರು ಚಿರತೆಗಳು ಸಂಜೆ ಹಾಗೂ ಮುಂಜಾನೆ ಹೊತ್ತಿನಲ್ಲಿ ಅಡ್ಡಾಡುತ್ತಿವೆ. ಎರಡು ತಿಂಗಳಲ್ಲಿ 50ಕ್ಕೂ ಅಧಿಕ ಕುರಿ ಹಾಗೂ ಮೇಕೆಗಳನ್ನು ಬಲಿ ತೆಗೆದುಕೊಂಡಿವೆ ಎಂದು ಬೇವಿನಹಳ್ಳಿ ಕುಬೇರಪ್ಪ ತಿಳಿಸಿದರು.

ವಾಣಿವಿಲಾಸ ಸಾಗರದ ಹಿನ್ನೀರು ಪ್ರದೇಶದಲ್ಲಿ ಆಹಾರ ಸಮಸ್ಯೆ ಉಂಟಾಗಿರುವುದರಿಂದ ಚಿರತೆಗಳು ಹಸಿವಿನ ದಾಹ ನೀಗಿಸಿಕೊಳ್ಳಲು ಮತ್ತೋಡು ಹಾಗೂ ಮಾಡದಕೆರೆ ಹೋಬಳಿಯ ಜನವಸತಿ ಪ್ರದೇಶಗಳತ್ತ ಲಗ್ಗೆ ಇಡುತ್ತಿವೆ. ಸಂಜೆ ಹಾಗೂ ಬೆಳಿಗ್ಗೆ ಹೊತ್ತಿನಲ್ಲಿ ಜನರು ಮನೆಯಿಂದ ಹೊರಗೆ ಬರಲು ಭಯ ಪಡುತ್ತಿದ್ದಾರೆ. ತೋಟ ಹಾಗೂ ಹೊಲಗಳಿಗೆ ಹೋಗಲು ಆಗುತ್ತಿಲ್ಲ. ಎರಡು ತಿಂಗಳಿನಿಂದ ಚಿರತೆ ಬೇವಿನಹಳ್ಳಿ ಸುತ್ತಮುತ್ತಲ ಗ್ರಾಮಗಳಲ್ಲಿ ಕಾಣಿಸುತ್ತಲೇ ಇರುತ್ತವೆ. ಕುರಿ, ಮೇಕೆ, ಬೆಕ್ಕು ಹಾಗೂ ನಾಯಿಗಳನ್ನು ತಿನ್ನುತ್ತಿವೆ. ಇಷ್ಟಾದರೂ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಹಿಡಿಯಲು ಕ್ರಮ ಕೈಗೊಂಡಿಲ್ಲ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಪ್ರೇಮಾ ರವೀಂದ್ರ ದೂರಿದರು.

ಗ್ರಾಮದಲ್ಲಿ ಆತಂಕ ಸೃಷ್ಟಿಸಿರುವ ಚಿರತೆಗಳನ್ನು ಹಿಡಿಯಲು ಅರಣ್ಯ ಇಲಾಖೆ ಮುಂದಾಗಬೇಕು ಎಂದು ಮಾಡದಕೆರೆ, ಮತ್ತೋಡು ಹೋಬಳಿ ಗ್ರಾಮಸ್ಥರು ಮನವಿ ಮಾಡಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !