ಹೊಸದುರ್ಗ: ಈ ಬಾರಿ ಉತ್ತಮ ಮಳೆಯಾಗಿದ್ದು ಹಳ್ಳ, ಕೊಳ್ಳ, ನದಿಗಳು ಮೈದುಂಬಿ ಹರಿಯುತ್ತಿವೆ. ರೈತರು ಮೊಗದಲ್ಲಿ ಮಂದಹಾಸ ಮೂಡಿದೆ. ಪ್ರಕೃತಿಯ ವಿರುದ್ಧ ಹೋಗದೆ ಅದನ್ನು ಉಳಿಸಿ, ಬೆಳೆಸುವ ಕಾರ್ಯವಾಗಬೇಕು. ಸ್ವಾತಂತ್ರ್ಯ ದಿನದಂದು ಪ್ರಕೃತಿ ಪ್ರೇಮಿಗಳಾಗಲು ಸಂಕಲ್ಪ ಮಾಡೋಣ ಎಂದು ಶಾಸಕ ಬಿ.ಜಿ. ಗೋವಿಂದಪ್ಪ ಸಲಹೆ ನೀಡಿದರು.
ತಾಲ್ಲೂಕು ಆಡಳಿತದ ವತಿಯಿಂದ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಗುರುವಾರ ಆಯೋಜಿಸಿದ್ದ 78ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯೋತ್ಸವ ಒಂದು ದಿನದ ಆಚರಣೆಯಾಗಬಾರದು. ಶಾಲಾ ಕಾಲೇಜುಗಳಲ್ಲಿ ಬಿಡುವಿನ ಸಮಯದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಬೇಕು. ನಿತ್ಯವೂ ಹೋರಾಟಗಾರರ ಸ್ಮರಣೆ ಮಾಡಬೇಕು. ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಸಂಸ್ಕಾರ ಕಲಿತು, ದೇಶದ ಸತ್ಪ್ರಜೆಗಳಾಗಬೇಕು ಎಂದು ಕಿವಿಮಾತು ಹೇಳಿದರು.
7ನೇ ವೇತನ ಆಯೋಗ ಜಾರಿಗೊಳಿಸುವ ಮೂಲಕ ಸರ್ಕಾರ ನೌಕರರಿಗೆ ಸ್ಪಂದಿಸಿದೆ. ಅದೇ ರೀತಿ ನೌಕರರು ಸ್ವಾರ್ಥ ಬಿಟ್ಟು ಸರ್ಕಾರದ ಯೋಜನೆಗಳನ್ನು ಪ್ರತಿ ಮನೆಗೆ ತಲುಪಿಸಲು ಶ್ರಮಿಸಬೇಕು. ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸಿ, ಸಾರ್ವಜನಿಕರನ್ನು ಪ್ರೀತಿ, ಗೌರವದಿಂದ ಕಾಣಬೇಕು. ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸಬೇಕು. ಕೆಲವರು ಉದಾಸೀನ ತೋರುತ್ತಿದ್ದು, ಹೀಗೆಯೇ ಮುಂದುವರಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ತಹಶೀಲ್ದಾರ್ ತಿರುಪತಿ ಪಾಟೀಲ್, ತಾಲ್ಲೂಕು ಪಂಚಾಯಿತಿ ಇಒ ಸುನೀಲ್ ಕುಮಾರ್, ನೌಕರ ಸಂಘದ ಅಧ್ಯಕ್ಷ ಆರ್. ಗಂಗಾಧರ್, ಕಸಾಪ ಅಧ್ಯಕ್ಷ ಬಿ.ಪಿ. ಓಂಕಾರಪ್ಪ, ಕನ್ನಡ ಜಾನಪದ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಮೈಲಾರಪ್ಪ, ಪುರಸಭೆ ಮುಖ್ಯಾಧಿಕಾರಿ ತಿಮ್ಮರಾಜು, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಸೋಮಶೇಖರಯ್ಯ, ಪುರಸಭೆ ಸದಸ್ಯರಾದ ದೊಡ್ಡಯ್ಯ, ಸರೋಜಮ್ಮ, ಪುಷ್ಪ, ಶ್ರೀನಿವಾಸ್, ಸ್ವಾತಿ ಪ್ರದೀಪ್, ಜಾಫರ್ ಸಾದಿಕ್, ತಾಹಿರಾಬಾನು, ಗಿರಿಜಮ್ಮ, ಶಂಕ್ರಪ್ಪ, ರಾಜೇಶ್ವರಿ ಆನಂದ್, ದಾಳಿಂಬೆ ಗಿರೀಶ್, ಎಚ್. ರಾಮಚಂದ್ರಪ್ಪ, ನಾಗರಾಜ್, ಬಿಇಒ ಸೈಯದ್ ಮೋಸಿನ್, ಸದ್ಗುರು ಪ್ರದೀಪ್ ಡಿ.ಎಸ್, ಪೂರ್ಣಿಮಾ ಮಹೇಶ್, ಗಜೇಂದ್ರ, ರಮೇಶ್, ಹನುಮಂತಪ್ಪ, ಆಂಜನಪ್ಪ, ತಾಲ್ಲೂಕು ಮಟ್ಟದ ಅಧಿಕಾರಿಗಳು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.