ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಕಾನೂನು ಬಲಗೊಳ್ಳಲಿ: ಆಶಾದೇವಿ

Last Updated 27 ಅಕ್ಟೋಬರ್ 2020, 4:06 IST
ಅಕ್ಷರ ಗಾತ್ರ

ಚಿತ್ರದುರ್ಗ: ಮಹಿಳೆಯ ಮೇಲೆ ದೌರ್ಜನ್ಯ ಎಸಗುವ, ಅಶ್ಲೀಲ ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸುವವರ ವಿರುದ್ಧ ಪ್ರಕರಣ ದಾಖಲಿಸಲು ‘ದಲಿತರ ಮೇಲಿನ ದೌರ್ಜನ್ಯ ತಡೆ ಕಾಯ್ದೆ’ ಮಾದರಿಯ ಕಾನೂನು ಜಾರಿಗೆ ತರಬೇಕು ಎಂದು ವಿಮರ್ಶಕಿ ಡಾ.ಎಂ.ಎಸ್‌.ಆಶಾದೇವಿ ಅಭಿಪ್ರಾಯಪಟ್ಟರು.

ಮರುಘಾ ಮಠದಲ್ಲಿ ನಡೆಯುತ್ತಿರುವ ಶರಣ ಸಂಸ್ಕೃತಿ ಉತ್ಸವದಲ್ಲಿ ಭಾನುವಾರದ ಮಹಿಳಾಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ವಿದ್ಯೆ, ಉದ್ಯೋಗ, ಆರ್ಥಿಕ ಸ್ವಾವಲಂಬನೆ ಕೂಡ ಮಹಿಳೆಗೆ ಘನತೆ ತಂದುಕೊಡಲು ಸಾಧ್ಯವಾಗಿಲ್ಲ. ಮಹಿಳೆಗೆ ಇಂದಿಗೂ ಬಿಡುಗಡೆ ಭಾಗ್ಯ ದೊರೆತಿಲ್ಲ. ಹೆಣ್ಣನ್ನು ದೇಹಭಾಷೆಯಿಂದ ನೋಡುವ ಮನಸ್ಥಿತಿ ಇನ್ನೂ ಹೋಗಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಮಹಿಳೆ ಭೋಗದ ವಸ್ತುವಲ್ಲ ಎಂಬುದರ ಸಂಕೇತವಾಗಿ ಅಕ್ಕಮಹಾದೇವಿ ಕೂದಲಿಂದ ದೇಹ ಮುಚ್ಚಿಕೊಂಡಳು. ಗಂಡು–ಹೆಣ್ಣಿನ ನಡುವಿನ ತಾರತಮ್ಯ ಹೋಗಲಾರದ ಹೊರತು ಸಮಾನತೆ ನೆಲೆಸಲು ಸಾಧ್ಯವಿಲ್ಲ. ದೇವಿ ಹಾಗೂ ದೆವ್ವ ಎಂಬ ಮಿಥ್ಯೆಗಳಲ್ಲಿ ಕಟ್ಟಿಹಾಕಿರುವ ಮಹಿಳೆಯನ್ನು ಬಿಡುಗಡೆ ಮಾಡುವ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟರು.

‘ಮಹಿಳಾ ಹೋರಾಟ ಎಲ್ಲ ಕಾಲದಲ್ಲೂ ಇತ್ತು. 12ನೇ ಶತಮಾನದಲ್ಲಿ ಇದು ಸ್ಫೋಟಗೊಂಡಿತು. ಮಡದಿ ಎಂಬ ಶಬ್ದದೊಂದಿಗೆ ತಳುಕು ಹಾಕಿಕೊಂಡ ಅಧಿಕಾರ ನಿವಾರಣೆಯಾಗಬೇಕು. ಅಂಬೇಡ್ಕರ್‌ ಆಶಯದಂತೆ ಹೆಣ್ಣಿನ ಸ್ಥಿತಿಯನ್ನು ಆಧರಿಸಿ ಅಭಿವೃದ್ಧಿ ಸೂಚ್ಯಂಕ ನಿಗದಿಯಾಗಬೇಕು’ ಎಂದು ಹೇಳಿದರು.

ಅಖಿಲ ಭಾರತೀಯ ವೀರಶೈವ ಮಹಿಳಾ ಘಟಕದ ಅಧ್ಯಕ್ಷೆ ಬಿ.ವೈ.ಅರುಣಾದೇವಿ ಮಾತನಾಡಿ, ‘ಕಾನೂನಿನಿಂದ ಸಂಸ್ಕಾರ ಕಲಿಸಲು ಸಾಧ್ಯವಿಲ್ಲ. ಮನೆಯಲ್ಲಿಯೇ ಮಕ್ಕಳಲ್ಲಿ ಒಳ್ಳೆಯ ಮನಸ್ಥಿತಿಯನ್ನು ಬೆಳೆಸಬೇಕು. ಕುಟುಂಬ ವ್ಯವಸ್ಥೆ ಶುದ್ಧಿಯಾದಾಗ ಸಮಾಜ ಸುಸಂಸ್ಕೃತವಾಗುತ್ತದೆ’
ಎಂದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಶಶಿಕಲಾ ಸುರೇಶಬಾಬು, ವೈದ್ಯ ಡಾ.ಬಿ.ಎನ್‌.ರವೀಶ್‌, ಕವಲೆತ್ತು ಮುಕ್ತಾಯ ಕೇಂದ್ರದ ಮಾತೆ ಮುಕ್ತಾಯಕ್ಕ, ಗುರುಬಸವ ಮಠದ ಬಸವಗೀತಾ ತಾಯಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT