ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಕಾರ ಸಂಘ ರಾಜಕೀಯ ಮುಕ್ತವಾಗಲಿ

ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ಎ. ನಾರಾಯಣಸ್ವಾಮಿ
Last Updated 17 ಸೆಪ್ಟೆಂಬರ್ 2022, 4:31 IST
ಅಕ್ಷರ ಗಾತ್ರ

ಚಿತ್ರದುರ್ಗ: ಸಹಕಾರ ಸಂಘಗಳ ಸ್ವತ್ತನ್ನು ಕುಟುಂಬ ಹಾಗೂ ರಾಜಕೀಯ ಸ್ವಾರ್ಥಕ್ಕಾಗಿ ಬಳಸಿಕೊಂಡು ರೈತರಿಗೆ ಮೋಸ ಮಾಡಲಾಗಿದೆ. ಇಂತಹ ಸನ್ನಿವೇಶಗಳಿಂದ ಸಹಕಾರ ಸಂಘಗಳು ಮುಕ್ತವಾಗಬೇಕು ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ತಿಳಿಸಿದರು.

ನಗರದ ಎಪಿಎಂಸಿ ಆವರಣದ ‘ಸಿ’ ಬ್ಲಾಕ್‌ನಲ್ಲಿ ಚಿತ್ರದುರ್ಗ ತಾಲ್ಲೂಕು ವ್ಯವಸಾಯೋತ್ಪನ್ನಗಳ ಮಾರಾಟ ಸಹಕಾರ ಸಂಘದಿಂದ ನಿರ್ಮಿಸಿರುವ ಸಾವಿರ ಮೆಟ್ರಿಕ್‌ ಟನ್ ಸಾಮರ್ಥ್ಯದ ಉಗ್ರಾಣವನ್ನು ಶುಕ್ರವಾರ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

‘ದೇಶದ ಸಹಕಾರ ಕ್ಷೇತ್ರಕ್ಕೆ ಬಹುದೊಡ್ಡ ಇತಿಹಾಸವಿದೆ. ಹಲವು ಸಹಕಾರಿ ಧುರೀಣರು ನಿಸ್ವಾರ್ಥದಿಂದ ಜನರ ಏಳಿಗೆಗಾಗಿ ಶ್ರಮಿಸಿದ್ದಾರೆ. ಇಂತಹ ಮಹನೀಯರ ಬದ್ಧತೆ ಹಾಗೂ ಮಹತ್ವಾಕಾಂಕ್ಷೆಯಿಂದ ಸಹಕಾರ ಸಂಘಗಳು ಅಭಿವೃದ್ಧಿ ಹೊಂದಿವೆ. ಆದರೆ ಕೆಲವು ಜಿಲ್ಲೆಗಳಲ್ಲಿ ಕುಟುಂಬ ಹಾಗೂ ರಾಜಕೀಯ ಹಸ್ತಕ್ಷೇಪದಿಂದ ಸಹಕಾರ ಸಂಘಗಳು ಅವನತಿಯ ಹಾದಿ ಹಿಡಿದಿವೆ’ ಎಂದು ಬೇಸರಿಸಿದರು.

‘ಕೇಂದ್ರ ಸರ್ಕಾರ ಎಪಿಎಂಸಿಗೆ ಹೆಚ್ಚಿನ ಅಧಿಕಾರ ನೀಡಿದೆ. ಸಹಕಾರ ಸಂಘಗಳ ಮೂಲಕ ರೈತರಿಗೆ ಅಗತ್ಯವಾದ ಯೂರಿಯಾ ಹಾಗೂ ನ್ಯಾನೊ ರಸಗೊಬ್ಬರ, ಕೃಷಿ ಸಲಕರಣೆಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಸಹಕಾರ ಹಾಗೂ ವ್ಯವಸಾಯ ಉತ್ಪನ್ನ ಸಂಘಗಳು ಉದ್ದಿಮೆ, ಶಿಕ್ಷಣ ಹಾಗೂ ಕೈಗಾರಿಕಾ ಕ್ಷೇತ್ರದಲ್ಲಿ ತೊಡಗಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಕೃಷಿ ತಂತ್ರಜ್ಞಾನದ ಬಗ್ಗೆ ಕೌಶಲ್ಯ ಬೆಳಸಲು ಕೃಷಿ ಇಲಾಖೆ ಮೂಲಕ ರೈತರಿಗೆ ಕೌಶಲ್ಯ ತರಬೇತಿ ನೀಡಲಾಗುತ್ತಿದೆ. ಪ್ರಧಾನಿ ಮೋದಿ ಅವರ ದೃಢ ನಿರ್ಧಾರದಿಂದಾಗಿ ರೈತ ಬೆಳೆದ ಬೆಳೆಯನ್ನು ಯಾವುದೇ ನಿರ್ಬಂಧವಿಲ್ಲದೆ ದೇಶ ವಿದೇಶಗಳಿಗೆ ಮಾರಾಟ ಮಾಡಬಹುದು. ಈ ಮೂಲಕ ಅನ್ನದಾತರ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ’ ಎಂದರು.

‘ಕೇಂದ್ರ ಸರ್ಕಾರ ಒಂದು ಜಿಲ್ಲೆ ಒಂದು ಬೆಳೆ ಯೋಜನೆಯನ್ನು ಜಾರಿಗೊಳಿಸಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ದಾಳಿಂಬೆ ಹಾಗೂ ಈರುಳ್ಳಿ ಬೆಳೆಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಜಿಲ್ಲೆಗೆ ಅಗತ್ಯ ಇರುವ ಆಹಾರ ಸಂಸ್ಕರಣಾ ಘಟಕ ಸ್ಥಾಪನೆಗೆ ಪ್ರಯತ್ನಿಸಲಾಗುವುದು. ಎಪಿಎಂಸಿ ಆವರಣದಲ್ಲಿ ಮತ್ತೊಂದು ಉಗ್ರಾಣ ನಿರ್ಮಾಣಕ್ಕೆ ಸಂಸದರ ನಿಧಿಯಲ್ಲಿ ಅನುದಾನ ನೀಡಲಾಗುವುದು’ ಎಂದು ಭರವಸೆ ನೀಡಿದರು.

ಚಿತ್ರದುರ್ಗ ತಾಲ್ಲೂಕು ವ್ಯವಸಾಯೋತ್ಪನ್ನಗಳ ಮಾರಾಟದ ಸಹಕಾರ ಸಂಘದ ಅಧ್ಯಕ್ಷ ಎಚ್‌.ಎಂ.ಮಂಜುನಾಥಪ್ಪ, ಕಾರ್ಯದರ್ಶಿ ಜಿ.ಎನ್‌.ಉಮಾಶಂಕರ್‌, ಉಪಾಧ್ಯಕ್ಷ ಸಿ.ಕುಬೇರಪ್ಪ, ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ ನಿರ್ದೇಶಕರಾದ ಎಸ್‌.ಆರ್‌.ಗಿರೀಶ್‌, ಸುರೇಶ್ ಹೊಸಕೋಟೆ, ಹನುಮಂತರಾಯ, ವ್ಯವಸ್ಥಾಪಕ ನಿರ್ದೇಶಕ ಎಸ್‌.ಅರಳಿ ಸೂರ್ಯಕಾಂತ್‌, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ವ್ಯವಸ್ಥಾಪಕ ನಿರ್ದೇಶಕ ಇಲ್ಯಾಸ್‌ ಉಲ್ಲಾ ಷರೀಷ್‌, ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕ ಎಚ್‌.ಮೂರ್ತಿ ಇದ್ದರು.

‘ಕೃಷಿಕರಲ್ಲಿ ಸಂಘಟನೆ ಕೊರತೆ’

‘ನಾಡಿನ ಜೀವನಾಡಿಯಾಗಿರುವ ಕೃಷಿಕರಲ್ಲಿ ಸಂಘಟನೆ ಕೊರತೆ ಇದೆ. ಎಲ್ಲರೂ ಆತ್ಮ ಬಲದಿಂದ ಒಂದಾದರೆ ಸರ್ಕಾರಗಳೇ ನಿಮ್ಮ ಮುಂದೆ ಬರುತ್ತವೆ. ಕೈ ಎತ್ತಿ ನೀಡುವ ಹೃದಯ ಶ್ರೀಮಂತಿಯ ನೀವು ಯಾರ ಮುಂದೆ ಕೈ ಚಾಚುವ ಸನ್ನಿವೇಶ ಎದುರಾಗುವುದಿಲ್ಲ’ ಎಂದು ಸಾಣೇಹಳ್ಳಿಯ ತರಳಬಾಳು ಶಾಖಾ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

‘ಸಹಕಾರ ಕ್ಷೇತ್ರದಲ್ಲಿರುವವರಿಗೆ ಸಹಕಾರ ಗುಣ ಬಹಳ ಮುಖ್ಯ. ರೈತರಿಗೆ ಆರ್ಥಿಕ ಹೊರೆಯಾಗದಂತೆ ಕೃಷಿ ಪರಿಕರಗಳು, ರಸಗೊಬ್ಬರ, ಬಿತ್ತನೆ ಬೀಜಗಳನ್ನು ವಿತರಿಸಬೇಕು. ಆಗ ಅನ್ನದಾತರು ಸಾಲ ಮಾಡದೆ ನೆಮ್ಮದಿಯಿಂದ ಬೆಳೆ ಬೆಳೆಯುತ್ತಾರೆ’ ಎಂದರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT