ಶನಿವಾರ, ಅಕ್ಟೋಬರ್ 24, 2020
18 °C
ನೂತನ ಜಿಲ್ಲಾಡಳಿತ ಭವನಕ್ಕೆ ಪರಿಸರ ನಾಶ ಆರೋಪ

PV Web Exclusive: ನೆಲಸಮವಾಗುತ್ತಿದೆ ಚಿತ್ರದುರ್ಗದ ಕುಂಚಿಗನಾಳ್‌ ಕಣಿವೆ

ಜಿ.ಬಿ.ನಾಗರಾಜ್‌ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಬೆಟ್ಟದ ತುದಿಯಲ್ಲಿ ಹತ್ತಕ್ಕೂ ಹೆಚ್ಚು ಜೆಸಿಬಿ ಸದ್ದು ಮಾಡುತ್ತಿವೆ. 25 ಲಾರಿಗಳು ಮಣ್ಣು ಹೊತ್ತು ಸಂಚರಿಸುತ್ತಿವೆ. ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದ ಕುಂಚಿಗನಾಳ್‌ ಕಣಿವೆ ಕೆಲವೇ ದಿನಗಳಲ್ಲಿ ಗಣಿಗಾರಿಕೆ ಪ್ರದೇಶದಂತೆ ಕಾಣುತ್ತಿದೆ. ಚಿತ್ರದುರ್ಗ ನಗರಕ್ಕೆ ಕಳಶಪ್ರಾಯದಂತ್ತಿದ್ದ ಬೆಟ್ಟದ ಸಾಲು ನೆಲಸಮವಾಗುತ್ತಿದೆ.

ನೂತನ ಜಿಲ್ಲಾಡಳಿತ ಭವನ ನಿರ್ಮಾಣಕ್ಕೆ ಆಯ್ಕೆ ಮಾಡಿಕೊಂಡ ಸ್ಥಳ ಕುಂಚಿಗನಾಳ್‌ ಕಣಿವೆ. ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಇರುವ ಬೆಟ್ಟದ ಸಾಲು ನಗರಕ್ಕೆ ಹೊಂದಿಕೊಂಡಿದೆ. ಪವನ ವಿದ್ಯುತ್‌ ಯಂತ್ರಗಳನ್ನು ತಲೆ ಮೇಲೆ ಹೊತ್ತುಕೊಂಡಂತೆ ಭಾಸವಾಗುವ ಈ ಬೆಟ್ಟ ಸಾಲು ಕಣ್ಮನ ಸೆಳೆಯುತ್ತಿದೆ. ಕುರುಚಲು ಗಿಡ, ಹುಲ್ಲು ಆವರಿಸಿಕೊಂಡ ಬೆಟ್ಟ ಕಣ್ಮರೆಯಾಗುವ ಆತಂಕ ಕಾಡಲಾರಂಭಿಸಿದೆ.

ಜೋಗಿಮಟ್ಟಿ ವನ್ಯಜೀವಿಧಾಮಕ್ಕೆ ಹೊಂದಿಕೊಂಡ ಕುಂಚಿಗನಾಳ್‌ ಬೆಟ್ಟವನ್ನು ಹೆದ್ದಾರಿ ಪ್ರತ್ಯೇಕಿಸಿದೆ. ಆಂಜನೇಯ ಸ್ವಾಮಿ ವಿರಾಜಮಾನವಾಗಿರುವ ಬೆಟ್ಟ ಜೀವವೈವಿಧ್ಯದ ತಾಣವಾಗಿಯೂ ಗಮನ ಸೆಳೆದಿದೆ. ದೇಗುಲ ಸಮೀ‍ಪದ 40 ಎಕರೆ ಪ್ರದೇಶದಲ್ಲಿ ಜಿಲ್ಲಾಡಳಿತ ಭವನ ನಿರ್ಮಾಣ ಮಾಡುವ ಪ್ರಸ್ತಾವ ಹೊಸದಲ್ಲ. ದಶಕದಿಂದಲೂ ನಡೆಯುತ್ತಿರುವ ಪ್ರಯತ್ನ ನಿರ್ಣಾಯಕ ಹಂತ ತಲುಪಿದೆ. ₹ 25 ಕೋಟಿ ವೆಚ್ಚದಲ್ಲಿ ಭವನ ನಿರ್ಮಾಣಕ್ಕೆ ಟೆಂಡರ್‌ ಕರೆಯಲಾಗಿದೆ. ಕಟ್ಟಡ ನಿರ್ಮಾಣ ಕಾಮಗಾರಿಗೆ ಸಿದ್ಧತೆಗಳು ಆರಂಭವಾದ ಬಳಿಕ ಪರಿಸರ ಪ್ರಜ್ಞೆ ಜಾಗೃತವಾಗಿದೆ.

ಕಟ್ಟಡ ನಿರ್ಮಾಣಕ್ಕೆ ಬೆಟ್ಟವನ್ನು ಸಮತಟ್ಟು ಮಾಡಿಕೊಳ್ಳುವ ಅಗತ್ಯವಿದೆ. ಕಟ್ಟಡ ನಿರ್ಮಾಣದ ಗುತ್ತಿಗೆ ಪಡೆದ ‘ಅಪೂರ್ವ ಕನ್‌ಸ್ಟ್ರಕ್ಷನ್ಸ್‌’ ಸಮತಟ್ಟು ಮಾಡಿಕೊಡುವಂತೆ ಮುಂದಿಟ್ಟ ಪ್ರಸ್ತಾವಕ್ಕೆ ಜಿಲ್ಲಾಡಳಿತ ಸಮ್ಮತಿ ಸೂಚಿಸಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎ) ಬೆಟ್ಟದ ಮಣ್ಣು ತೆಗೆಯುವ ಕೆಲಸಕ್ಕೆ ಕೈಹಾಕಿದೆ. ಜೆಸಿಬಿ ಯಂತ್ರಗಳು ಬೆಟ್ಟವನ್ನು ಸುಮಾರು 25 ಅಡಿಯಷ್ಟು ಆಳಕ್ಕೆ ಅಗೆಯುತ್ತಿವೆ. ಕಣಿವೆಯಲ್ಲಿ ಕೇಳಿಬರುತ್ತಿದ್ದ ಹಕ್ಕಿ–ಪಕ್ಷಿಗಳ ಕಲರವ ಸಂಪೂರ್ಣ ನಿಂತು ಹೋಗಿದೆ.

‘ದೇಗುಲಕ್ಕೆ ಬಂದಾಗ ಕೆಲ ಹೊತ್ತು ಬೆಟ್ಟದಲ್ಲಿ ಕಾಲ ಕಳೆಯುತ್ತಿದ್ದೆವು. ತಂಪಾಗಿ ಬೀಸುವ ಗಾಳಿ, ಅದ್ಭುತವಾಗಿ ಕಾಣುವ ಪ್ರಕೃತಿಯ ಸೊಬಗನ್ನು ಆಸ್ವಾಧಿಸುತ್ತಿದ್ದೆವು. ವಾರಕ್ಕೆ ಒಮ್ಮೆಯಾದರೂ ಆಂಜನೇಯಸ್ವಾಮಿ ದೇಗುಲಕ್ಕೆ ಭೇಟಿ ನೀಡುತ್ತಿದ್ದೆ. ದೇಗುಲಕ್ಕೆ ಹೊಂದಿಕೊಂಡ ಬೆಟ್ಟವನ್ನು ಅಗೆಯುತ್ತಿರುವ ರೀತಿ ಆತಂಕ ಸೃಷ್ಟಿಸಿದೆ. ಹಸಿರಿನಿಂದ ಕಂಗೊಳಿಸುತ್ತಿದ್ದ ಬೆಟ್ಟ ಗಣಿಗಾರಿಕೆ ಪ್ರದೇಶದಂತೆ ಕಾಣುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು ಆಂಜನೇಯಸ್ವಾಮಿ ಭಕ್ತ ಮಹೇಶ್‌.

ಚಿತ್ರದುರ್ಗದ ಶಕ್ತಿದೇವತೆ ಕಣಿವೆ ಮಾರಮ್ಮನ ದೇಗುಲ ಇದೇ ಬೆಟ್ಟದ ಸಾಲಿನಲ್ಲಿದೆ. ಸಮೀಪದಲ್ಲಿ ಕೌಶಲಾಭಿವೃದ್ಧಿ ಕೇಂದ್ರದ ಕಟ್ಟಡವೂ ನಿರ್ಮಾಣವಾಗುತ್ತಿದೆ. ಬೆಟ್ಟದ ನೆತ್ತಿಯ ಮೇಲೆ ಕಾಂಕ್ರಿಟ್‌ ಕಟ್ಟಡಗಳು ಮೇಲೆಳುತ್ತಿರುವ ರೀತಿ ಪರಿಸರ ಪ್ರೇಮಿಗಳಲ್ಲಿ ಬೇಸರ ಮೂಡಿಸಿದೆ. ಚಾರಣ ಪ್ರಿಯರ ತಾಣವೊಂದು ಅಭಿವೃದ್ಧಿಯ ಹೊಡೆತಕ್ಕೆ ನಲುಗುತ್ತಿದೆ.

‘ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು ಸೇರಿ ಪಶ್ಚಿಮಘಟ್ಟದ ಅನೇಕರ ಕಡೆ ಗುಡ್ಡ ಕುಸಿತ ಅಗುತ್ತಿದೆ. ಇಂತಹದೇ ಬೆಟ್ಟದಲ್ಲಿ ಬೃಹತ್‌ ಕಟ್ಟಡ ನಿರ್ಮಾಣ ಮಾಡಿದರೆ ಅಪಾಯ ಆಗುವುದಿಲ್ಲವೇ‘ ಎಂಬುದು ಕೆಳಗೋಟೆ ನಿವಾಸಿ ಗೋಪಾಲ ಅವರ ಪ್ರಶ್ನೆ.

ಚಿತ್ರದುರ್ಗ ನಗರದ ಒಂದು ಭಾಗವನ್ನು ಬೆಟ್ಟದ ಸಾಲು ಸುತ್ತುವರೆದಿದೆ. ಈ ಬೆಟ್ಟದ ಬುಡದವರೆಗೂ ಬಡಾವಣೆಗಳು ತಲೆಯತ್ತುತ್ತಿವೆ. ಹೊಳಲ್ಕೆರೆ ರಸ್ತೆಯಲ್ಲಿ ಬೆಟ್ಟದ ಬುಡವನ್ನು ನೆಲಸಮ ಮಾಡಲಾಗಿದೆ. ಚೋಳಗುಡ್ಡದ ಮೇಲೆಯೂ ಮನೆ ಕಾಣಿಸುತ್ತಿವೆ. ಜೋಗಿಮಟ್ಟಿಯ ಕೆಲ ಭಾಗವೂ ಒತ್ತುವರಿಯಾಗಿರುವ ಆರೋಪ ಕೇಳಿಬರುತ್ತಿದೆ. ಕುಂಚಿಗನಾಳ್‌ ಕಣಿವೆಯಲ್ಲಿ ಕಟ್ಟಡ ನಿರ್ಮಾಣ ಮಾಡುತ್ತಿರುವುದು ಬೆಟ್ಟದ ಹಾನಿಗೆ ಹೊಸ ಸೇರ್ಪಡೆ.

‘ಕುಂಚಿಗನಾಳ್‌ ಬೆಟ್ಟವನ್ನು ಪೂರ್ಣವಾಗಿ ನೆಲಸಮ ಮಾಡುತ್ತಿಲ್ಲ. ಪಾರ್ಶ್ವಭಾಗವನ್ನು ಮಾತ್ರ ಜಿಲ್ಲಾಡಳಿತ ಭವನಕ್ಕೆ ಗುರುತಿಸಲಾಗಿದೆ. ಬೆಳಗಾವಿಯ ಸುವರ್ಣಸೌಧದ ಮಾದರಿಯ ಕಟ್ಟಡ ನಿರ್ಮಾಣವಾಗಲಿದೆ. ನಗರ ವ್ಯಾಪ್ತಿಯಲ್ಲಿ ಇಷ್ಟೊಂದು ವಿಶಾಲವಾದ ಸರ್ಕಾರಿ ಭೂಮಿ ಇಲ್ಲದಿರುವುದರಿಂದ ಕಣಿವೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ’ ಎನ್ನುತ್ತಾರೆ ಜಿಲ್ಲಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು