ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗೀಕರಣಕ್ಕೆ ಎಲ್‌ಐಸಿ ನೌಕರರ ವಿರೋಧ

ಜಿಲ್ಲೆಯ ಆರು ಕಚೇರಿಯಲ್ಲಿ ಸೇವೆ ಸ್ಥಗಿತಗೊಳಿಸಿ ಮುಷ್ಕರ
Last Updated 18 ಮಾರ್ಚ್ 2021, 13:23 IST
ಅಕ್ಷರ ಗಾತ್ರ

ಚಿತ್ರದುರ್ಗ: ಜೀವ ವಿಮಾ ನಿಗಮದ (ಎಲ್‌ಐಸಿ) ಷೇರುಗಳನ್ನು ಐಪಿಒ (ಆರಂಭಿಕ ಸಾರ್ವಜನಿಕ ಕೊಡುಗೆ) ಮೂಲಕ ಖರೀದಿಗೆ ಮುಕ್ತಗೊಳಿಸಿದ ಪ್ರಕ್ರಿಯೆಯನ್ನು ಖಾಸಗೀಕರಣದ ಹುನ್ನಾರವೆಂದು ಆರೋಪಿಸಿದ ನೌಕರರು, ಸೇವೆಯನ್ನು ಸ್ಥಗಿತಗೊಳಿಸಿ ಗುರುವಾರ ಮುಷ್ಕರ ನಡೆಸಿದರು.

ಇದರಿಂದ ಜಿಲ್ಲೆಯ ಆರು ಶಾಖಾ ಕಚೇರಿಯಲ್ಲಿ ವಹಿವಾಟು ಸ್ಥಗಿತಗೊಂಡಿತ್ತು. ದೇಶವ್ಯಾಪಿ ಕರೆನೀಡಿದ ಮುಷ್ಕರಕ್ಕೆ ನೌಕರರು ಬೆಂಬಲ ವ್ಯಕ್ತಪಡಿಸಿದರು. ಸೇವೆಯಲ್ಲಿ ವ್ಯತ್ಯಯ ಉಂಟಾಗಿದ್ದರಿಂದ ಸಾರ್ವಜನಿಕರು ಹಾಗೂ ನೌಕರರ ನಡುವೆ ವಾಗ್ವಾದವೂ ನಡೆಯಿತು.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಎಲ್‌ಐಸಿ ಷೇರುಗಳನ್ನು ಮಾರಾಟ ಮಾಡುವ ಪ್ರಸ್ತಾವವನ್ನು 2020ರ ಬಜೆಟ್‌ನಲ್ಲಿ ಉಲ್ಲೇಖಿಸಿದ್ದರು. ಈ ಪ್ರಕ್ರಿಯೆ ನಿರೀಕ್ಷಿತ ಪ್ರಮಾಣದಲ್ಲಿ ನಡೆಯಲಿಲ್ಲ. ಐಪಿಒ ಪ್ರಕ್ರಿಯೆಗೆ ಮತ್ತೆ ಮುಂದಾಗಿರುವುದು ಆತಂಕ ಉಂಟು ಮಾಡಿದೆ. ವಿಮಾ ಕಂಪನಿಯನ್ನು ಖಾಸಗಿ ಕಂಪನಿಗಳಿಗೆ ಅಡ ಇಡಲಾಗುತ್ತಿದೆ ಎಂದು ಆರೋಪಿಸಿದರು.

ದೇಶದ 22 ವಿಮಾ ಕಂಪನಿಗಳ ಪೈಕಿ ಎಲ್‌ಐಸಿ ಬಹುದೊಡ್ಡದು. ದೇಶದ ಶೇ 75ರಷ್ಟು ವಿಮೆಯನ್ನು ಎಲ್‌ಐಸಿ ಹೊಂದಿದೆ. ವ್ಯವಹಾರದಲ್ಲಿ ವಿಶ್ವಾಸ ಉಳಿಸಿಕೊಂಡಿದೆ. ಕ್ಲೇಮ್‌ ದರ ಶೇ 100ರಷ್ಟಿದೆ. 1956ರಿಂದ ಈವರೆಗೆ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಿದೆ. ರಸ್ತೆ, ನೀರು, ವಿದ್ಯುತ್‌ ಹಾಗೂ ಇತರ ಮೂಲ ಸೌಲಭ್ಯಗಳಿಗೆ ಉದಾರ ನೆರವು ನೀಡಿದೆ. ಇಂತಹ ಕಂಪನಿಯ ಷೇರು ಮಾರಾಟ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಸರ್ಕಾರದ ಬಂಡವಾಳಕ್ಕೆ ನಿರಂತರವಾಗಿ ಲಾಭಾಂಶ ನೀಡಿದೆ. ಮಧ್ಯಮ ವರ್ಗ, ರೈತರು ಹಾಗೂ ಕಾರ್ಮಿಕರೇ ಹೆಚ್ಚಿನ ಸಂಖ್ಯೆಯಲ್ಲಿ ವಿಮೆ ಹೊಂದಿದ್ದಾರೆ. ಜನರಲ್ಲಿ ಉಳಿತಾಯದ ಮನೋಭಾವನೆ ಮೂಡಿಸಿ ಸುರಕ್ಷತೆಯ ಭಾವನೆ ಹೆಚ್ಚಿಸಿದೆ. ಎಲ್‌ಐಸಿಯಲ್ಲಿ ಪ್ರತಿಯೊಬ್ಬ ಶ್ರಮಿಕರ ಬೆವರಿನ ಹಣವಿದೆ. ಖಾಸಗೀಕರಣ ಮಾಡಿದರೆ ಅದಾನಿ, ಅಂಬಾನಿಯಂತಹ ಬಂಡವಾಳಶಾಹಿಗಳು ಇನ್ನಷ್ಟು ಶ್ರೀಮಂತರಾಗುತ್ತಾರೆ ಎಂದು ದೂರಿದರು.

ಎಲ್‌ಐಸಿ ನೌಕರರ, ಅಧಿಕಾರಿಗಳ ಸಂಘದ ಮುಖಂಡರಾದ ಎಸ್‌.ಸಿ.ಹೆಗಡೆ, ಕೆ.ವೆಂಕಟೇಶ್‌, ಸುರೇಶ್‌ ಕುಮಾರ್‌, ಜೋಯಿಸ್‌ ಹುಲಿರಾಜ್‌, ಉಷಾ, ಸೀತಾಲಕ್ಷ್ಮಿ, ನಾಗಲಕ್ಷ್ಮಿ, ಪವನ್‌ಕುಮಾರ್‌, ಎನ್‌.ರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT