ಗುರುವಾರ , ಸೆಪ್ಟೆಂಬರ್ 16, 2021
29 °C
ಸ್ಥಳ ಪರಿಶೀಲನೆ ನಡೆಸಿದ ತಂತ್ರಜ್ಞರ ತಂಡ, ಆಕರ್ಷಣೆ ಕೇಂದ್ರವಾಗಲಿದೆ ಚಂದ್ರವಳ್ಳಿ

ಚಿತ್ರದುರ್ಗ: ಐತಿಹಾಸಿಕ ಕೋಟೆಗೆ ಧ್ವನಿ–ಬೆಳಕು ಮೆರುಗು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಐತಿಹಾಸಿಕ ಕಲ್ಲಿನ ಕೋಟೆ ಧ್ವನಿ–ಬೆಳಕು ಮೆರುಗು ಪಡೆಯಲಿದೆ. ತಂತ್ರಜ್ಞರ ತಂಡವೊಂದು ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಎರಡು ವಾರದಲ್ಲಿ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧವಾಗುವ ಸಾಧ್ಯತೆ ಇದೆ.

ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅವರ ಸೂಚನೆಯ ಮೇರೆಗೆ ಬೆಂಗಳೂರಿನ ಇಡಿಸಿ ಕಂಪೆನಿಯ ತಂತ್ರಜ್ಞರು ಚಿತ್ರದುರ್ಗಕ್ಕೆ ಭೇಟಿ ನೀಡಿದ್ದರು. ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಜೊತೆಗಿದ್ದರು.

ಕೋಟೆಯನ್ನು ಬೆರಗು ಕಣ್ಣಿನಿಂದ ವೀಕ್ಷಿಸಿದ ತಂತ್ರಜ್ಞರ ತಂಡ, ಪೂರಕ ಮಾಹಿತಿಯನ್ನು ಕಲೆಹಾಕಿತು. ಪ್ರವೇಶ ದ್ವಾರ, ಬಂಧಿಖಾನೆ, ಉಯ್ಯಾಲೆ ಕಂಬ, ಮುರುಘಾ ಮಠ, ಸಂಪಿಗೆ ಸಿದ್ಧೇಶ್ವರ ದೇಗುಲ, ಏಕನಾಥೇಶ್ವರಿ ದೇಗುಲ... ಹೀಗೆ ಹಲವು ಸ್ಥಳಗಳನ್ನು ಪರಿಶೀಲಿಸಿತು. ಕೋಟೆಯ ಇತಿಹಾಸ, ಬುರುಜು, ಬತ್ತೇರಿಯ ಪ್ರಾಮುಖ್ಯತೆಯ ಬಗ್ಗೆ ತಂತ್ರಜ್ಞರು ಅರಿತರು. ಅಗಳು, ಕಲ್ಯಾಣಿ, ಹೊಂಡಗಳನ್ನು ಕಣ್ತುಂಬಿಕೊಂಡರು.

ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಮಾತನಾಡಿ, ‘ಧ್ವನಿ ಮತ್ತು ಬೆಳಕಿನ ವ್ಯವಸ್ಥೆಗೆ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಪಣತೊಟ್ಟಿದ್ದಾರೆ. ಇಲಾಖೆಯ ಪರವಾನಗಿ ಪಡೆದು ತಂತ್ರಜ್ಞರನ್ನು ಕಳುಹಿಸಿಕೊಟ್ಟಿದ್ದಾರೆ. ಇದು ಅನುಷ್ಠಾನಗೊಂಡರೆ ಕೋಟೆ ಇನ್ನಷ್ಟು ಆಕರ್ಷಣೀಯ ತಾಣವಾಗಲಿದೆ. ರಾಜ್ಯ ಮತ್ತು ರಾಷ್ಟ್ರದ ಗಮನ ಸೆಳೆಯಲಿದೆ’ ಎಂದು ಅಭಿಪ್ರಾಯಪಟ್ಟರು.

‘ಹಂಪಿಯಷ್ಟೇ ಐತಿಹಾಸಿಕ ಮಹತ್ವ ಪಡೆದಿರುವ ಚಿತ್ರದುರ್ಗ ಅಭಿವೃದ್ಧಿ ಹೊಂದುವಲ್ಲಿ ವಿಳಂಬವಾಗಿದೆ. ಹಂಪಿ ವೀಕ್ಷಣೆಗೆ ಬರುವ ಪ್ರವಾಸಿಗರನ್ನು ಇತ್ತ ಸೆಳೆಯುವ ಅಗತ್ಯವಿದೆ. ಉತ್ತರ ಕರ್ನಾಟಕ ಹಾಗೂ ಕರಾವಳಿಗೆ ಸಂಪರ್ಕ ಬೆಸೆಯುವ ಹೆದ್ದಾರಿ ಸೇರುವುದರಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ಸಾಧ್ಯತೆ ಇದೆ’ ಎಂದು ಹೇಳಿದರು.

‘ಚಿತ್ರದುರ್ಗ ಹೋರಾಟದ ಭೂಮಿ. ಮದಕರಿ ನಾಯಕ, ‍ಪಾಳೆಗಾರರ ಇತಿಹಾಸ ರೋಮಾಂಚನಕಾರಿಯಾಗಿದೆ. ಐತಿಹಾಸಿಕ ಪ್ರಸಂಗವನ್ನು ಧ್ವನಿ ಮತ್ತು ಬೆಳಕಿನ ರೂಪದಲ್ಲಿ ಕಟ್ಟಿಕೊಡುವ ಕಾರ್ಯ ನಡೆಯುತ್ತಿದೆ. ಒಂದು ಗಂಟೆಯ ಕುತೂಹಲಕಾರಿ ಕಥೆ ಹೆಣೆಯಬೇಕಿದೆ. ಪ್ರತಿ ಶನಿವಾರ ಮತ್ತು ಭಾನುವಾರ ಸಂಜೆ 6ರಿಂದ 9ರವರೆಗೆ ಧ್ವನಿ–ಬೆಳಕಿನಲ್ಲಿ ಕೋಟೆಯನ್ನು ಕಣ್ತುಂಬಿಕೊಳ್ಳಲು ಸಾಧ್ಯವಿದೆ. ಮುಂದಿನ ಆರು ತಿಂಗಳಲ್ಲಿ ಇದು ಕಾರ್ಯರೂಪಗೊಳ್ಳುವ ವಿಶ್ವಾಸವಿದೆ’ ಎಂದರು.

‘ಶರಣಸಂಸ್ಕೃತಿ ಉತ್ಸವಕ್ಕೆ ಲೇಸರ್‌ ಷೋ’
ಧ್ವನಿ ಮತ್ತು ಬೆಳಕಿನ ವ್ಯವಸ್ಥೆಗೆ ಆರು ತಿಂಗಳು ಕಾಲಾವಕಾಶ ಹಿಡಿಯುತ್ತದೆ. ಮೊದಲ ಹಂತದಲ್ಲಿ ಶರಣಸಂಸ್ಕೃತಿ ಉತ್ಸವಕ್ಕೆ ಲೇಸರ್‌ ಷೋ, ಎಲ್‌ಇಡಿ ಬೆಳಕು ಹಾಗೂ 3ಡಿ ಪ್ರೊಜೆಕ್ಷನ್‌ ಮ್ಯಾಪಿಂಗ್‌ ಅಳವಡಿಸಲಾಗುತ್ತದೆ ಎಂದು ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಮಾಹಿತಿ ನೀಡಿದರು.

‘ಶರಣ ಸಂಸ್ಕೃತಿ ಉತ್ಸವಕ್ಕೆ ಕೋಟೆಗೆ ಬೆಳಕಿನ ವ್ಯವಸ್ಥೆ ಮಾಡಲಾಗುತ್ತಿದೆ. ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರಿಗೆ ರಾಜವಂಶಸ್ಥರು ಭಕ್ತಿ ಸಮರ್ಪಣೆ ಮಾಡುವ ದಿನ ವಿಶೇಷ ಕಾರ್ಯಕ್ರಮ ನಡೆಯಲಿದೆ. ದಸರಾ, ದೀಪಾವಳಿ ಹಾಗೂ ರಾಷ್ಟ್ರೀಯ ಹಬ್ಬಗಳ ದಿನ ಕೋಟೆ ವಿಶೇಷವಾಗಿ ಕಂಗೊಳಿಸಲಿದೆ’ ಎಂದರು.

ದೇಶದ ಹಲವೆಡೆ ಕೊಡುಗೆ
ಬೆಂಗಳೂರಿನ ಇಡಿಸಿ ಕಂಪನಿಯ ಧ್ವನಿ ಮತ್ತು ಬೆಳಕಿನ ವ್ಯವಸ್ಥೆ ರೂಪಿಸುವಲ್ಲಿ ನೈಪುಣ್ಯತೆ ಪಡೆದಿದೆ. ಗುಜರಾತಿನ ಸರ್ದಾರ್‌ ವಲ್ಲಭಬಾಯ್‌ ಪಟೇಲ್‌ ಥೀಮ್‌ ಪಾರ್ಕ್‌ ಹಾಗೂ ಸೋಮನಾಥ ದೇಗುಲಕ್ಕೆ ಇದೇ ಕಂಪನಿ ಈ ವ್ಯವಸ್ಥೆ ಮಾಡಿಕೊಟ್ಟಿದೆ.

‘ಬಾದಾಮಿಯಲ್ಲಿ ಧ್ವನಿ–ಬೆಳಕಿನ ವ್ಯವಸ್ಥೆ ಮಾಡುವ ಡಿಪಿಆರ್‌ ಸಿದ್ಧವಾಗಿದೆ. ಇದಕ್ಕೆ ಶೀಘ್ರವೇ ಅನುಮತಿ ದೊರೆಯಲಿದೆ. ಮೈಸೂರು ಸೇರಿ ಹಲವೆಡೆ ಇಂತಹ ಪ್ರಯತ್ನಗಳು ನಡೆಯುತ್ತಿವೆ. ಕೋಟೆಯನ್ನು ಪರಿಶೀಲಿಸಿ ಡಿಪಿಆರ್‌ ಸಿದ್ಧಪಡಿಸಲು ತೀರ್ಮಾನಿಸಲಾಗಿದೆ. ಸರ್ಕಾರ ಅನುಮತಿ ನೀಡಿದರೆ ಶೀಘ್ರವೇ ಕೆಲಸ ಕಾರ್ಯಾರಂಭ ಆಗಲಿದೆ’ ಎಂದು ಇಡಿಸಿ ಕಂಪನಿಯ ಶಶಿಕುಮಾರ್‌ ತಿಳಿಸಿದರು.

ಬೆಂಗಳೂರಿನ ಇಡಿಸಿ ಕಂಪನಿಯ ರಾಹುಲ್‌ ಧಾರವಾಡಕರ್‌, ನಗರಸಭಾ ಸದಸ್ಯ ಶಶಿಕುಮಾರ್‌, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಗುರುಮೂರ್ತಿ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಜಿ.ಎಚ್‌.ಮೋಹನ್‌ಕುಮಾರ್‌, ಮಹಾಂತೇಶ ನಾಯಕ ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.