ಬುಧವಾರ, ಸೆಪ್ಟೆಂಬರ್ 22, 2021
28 °C

ಮೊಳಕಾಲ್ಮುರು: ಮದ್ಯ ಮಾರಾಟ ಬಂದ್, ನೀರಾಕ್ಕೆ ಬೇಡಿಕೆ ಹೆಚ್ಚಿಸಿದ ಕೊರೊನಾ

ಕೊಂಡ್ಲಹಳ್ಳಿ ಜಯಪ್ರಕಾಶ Updated:

ಅಕ್ಷರ ಗಾತ್ರ : | |

Prajavani

ಮೊಳಕಾಲ್ಮುರು: ಕೋವಿಡ್-19 ಭೀತಿಯಿಂದ ಲಾಕ್‌ಡೌನ್ ಮಾಡಿರುವ ಕಾರಣ ಮದ್ಯ ಅಂಗಡಿಗಳು ಮುಚ್ಚಿವೆ. ಇದರಿಂದ ನೀರಾಕ್ಕೆ ವ್ಯಾಪಕ ಬೇಡಿಕೆ ಬಂದಿದೆ.

ತಾಲ್ಲೂಕಿನ ಬಿ.ಜಿ.ಕೆರೆ ಗ್ರಾಮದಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ಕೃಷಿಕ ಎಸ್.ಸಿ. ವೀರಭದ್ರಪ್ಪ ಅವರ ತೋಟದಲ್ಲಿ ಲಾಕ್‌ಡೌನ್ ನಂತರ ನೀರಾ ಮಾರಾಟ ಹೆಚ್ಚಿದೆ. ತೆಂಗಿನಮರದ ಹೊಂಬಾಳೆಯಿಂದ ಇಳಿಸುವ ನೀರಾ ಹಲವು ಪೌಷ್ಠಿಕಾಂಶಗಳನ್ನು ಹೊಂದಿದೆ. ಎಳನೀರಿಗಿಂತಲೂ ಇದು ಉತ್ತಮ ಪೇಯ ಎಂದು ಪ್ರಚಾರ ನಡೆಸಿದ್ದರೂ ಜನರು ಅಷ್ಟಾಗಿ ಇತ್ತ ಗಮನ ಕೊಟ್ಟಿರಲಿಲ್ಲ. ಆದರೆ ಕೊರೊನಾ ಬಂದ ನಂತರ ಬೇಡಿಕೆ ಹಲವು ಪಟ್ಟು ಏರಿದ್ದು, ಅಗತ್ಯದಷ್ಟು ಪೂರೈಸಲು ಸಾಧ್ಯವಾಗುತ್ತಿಲ್ಲ ಎಂಬುದು ರೈತರ ಮಾತು. 

ಬೆಂಗಳೂರು- ಬಳ್ಳಾರಿ ರಾಜ್ಯಹೆದ್ದಾರಿಗೆ ಹೊಂದಿಕೊಂಡಿರುವ ‘ವಸುಂಧರಾ ಸಸ್ಯಕ್ಷೇತ್ರ‘ ಮುಂಭಾಗದಲ್ಲಿ ನೀರಾ ಮಾರಾಟಕ್ಕೆ ಶೆಡ್ ನಿರ್ಮಿಸಲಾಗಿದೆ. ಅಲ್ಲಿ ಬೆಳಿಗ್ಗೆ ಹಾಗೂ ಸಂಜೆ ಸರದಿಯಲ್ಲಿ ನಿಂತು ಜನರು ನೀರಾ ಪಡೆದುಕೊಳ್ಳುತ್ತಿದ್ದಾರೆ. ಪ್ರತಿ 200 ಮಿ.ಲೀಟರ್‌ಗೆ ₹ 50ರಂತೆ ಮಾರಾಟ ಮಾಡಲಾಗುತ್ತಿದೆ. ಜಿಲ್ಲೆ ಹಾಗೂ ಹೊರಜಿಲ್ಲೆಯವರು ಬಂದು ಕೊಂಡುಕೊಳ್ಳುತ್ತಿದ್ದಾರೆ ಅಲ್ಲಿನ ಸಿಬ್ಬಂದಿ ತಿಳಿಸಿದರು.

‘ತೋಟದಲ್ಲಿ 40 ಮರಗಳಿಂದ ನೀರಾ ಇಳಿಸಲಾಗುತ್ತಿದೆ. ಮೂರು ವರ್ಷಗಳಿಂದ ನೀರನ್ನು ವೈಜ್ಞಾನಿಕವಾಗಿ ಇಳಿಸಿ, ಸಂಸ್ಕರಣೆ ಮಾಡಿ ಮಾರಾಟ ಮಾಡಲಾಗುತ್ತಿದೆ. ಎಲ್ಲಾ ಹಂತದಲ್ಲೂ ವೈಜ್ಞಾನಿಕತೆ ಕಾಪಾಡಲಾಗಿದೆ. ಐಸ್ ಚೇಂಬರ್ ಬಳಸಲಾಗುತ್ತಿದೆ. ಬ್ಯಾಕ್ಟೀರಿಯಾ ಆದಲ್ಲಿ ಮಾತ್ರ ನೀರಾ ಹುಳಿಯಾಗಿ ಹೆಂಡವಾಗುತ್ತದೆ. ಇಲ್ಲದಿದ್ದರೆ ಪೌಷ್ಟಿಕಾಂಶದ ಪೇಯ’ ಎಂದು ಸಸ್ಯಕ್ಷೇತ್ರ ಮಾಲೀಕ ಎಸ್.ಸಿ. ವೀರಭದ್ರಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ಈಗ ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮತ್ತಷ್ಟು ಮರಗಳಿಂದ ನೀರಾ ಇಳಿಸಲು ಮುಂದಾಗಿದ್ದೇವೆ. ಮರ ಹತ್ತಿ ಇಳಿಸುವ ಬಗ್ಗೆ ಕಾರ್ಮಿಕರಿಗೆ ತರಬೇತಿ ನೀಡಲಾಗುತ್ತಿದೆ. ನೀರಾ ಇಳಿಸುವುದು ಎಳನೀರು, ತೆಂಗಿನಕಾಯಿ ಮಾರಾಟಕ್ಕಿಂತ ಹೆಚ್ಚು ಲಾಭದಾಯಕ. ಎಲ್ಲಾ ತೆಂಗಿನ ಬೆಳೆಗಾರರು ಇದರತ್ತ ಗಮನಹರಿಸಬೇಕು ಎಂದು ಅವರು ಸಲಹೆ ನೀಡಿದರು.

ದುಪ್ಪಟ್ಟು ದರ: ಮದ್ಯದಂಗಡಿಗಳು ಮುಚ್ಚಿರುವ ಹಿನ್ನೆಲೆಯಲ್ಲಿ ಮದ್ಯವನ್ನು ಬೇಕಾಬಿಟ್ಟಿ ಹೆಚ್ಚಿನ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ತಾಲ್ಲೂಕು ಇದಕ್ಕೆ ಹೊರತಾಗಿಲ್ಲ. ನಿಗದಿತ ದರಕ್ಕಿಂತ 4-5 ಪಟ್ಟು ಹೆಚ್ಚು ದರಕ್ಕೆ ಮಾರಾಟವಾಗುತ್ತಿದೆ. ಇದು ನೀರಾ ಬೇಡಿಕೆಗೆ ಒತ್ತು ನೀಡಿದೆ ಎಂಬ ಮಾತು ಕೇಳಿಬಂದಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ವೀರಭದ್ರಪ್ಪ, ‘ಮದ್ಯವ್ಯಸನಿಗಳು ನೀರಾವನ್ನು ದುರ್ಬಳಕೆ ಮಾಡಿಕೊಳ್ಳಲು ಅವಕಾಶ ಕೊಟ್ಟಿಲ್ಲ. ಕೊಡುವುದೂ ಇಲ್ಲ’ ಎಂದು ಸ್ಪಷ್ಟಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು