ಶನಿವಾರ, ಜೂಲೈ 4, 2020
24 °C
75ನೇ ವಸಂತಕ್ಕೆ ಕಾಲಿಟ್ಟ ಸಾಹಿತಿ ಬಿ.ಎಲ್‌.ವೇಣು

ಬರಹವೇ ನನ್ನ ಆರೋಗ್ಯದ ಗುಟ್ಟು: ಬಿ.ಎಲ್‌.ವೇಣು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಬರಹವೇ ನನ್ನ ಆರೋಗ್ಯದ ಗುಟ್ಟು. ಬರವಣಿಗೆಯೇ ನನ್ನ ಉಸಿರು. ಬದುಕಿರುವವರೆಗೂ ಬರೆಯುತ್ತೇನೆ ಎಂದು ಕಾದಂಬರಿಕಾರ ಬಿ.ಎಲ್.ವೇಣು ಹೇಳಿದರು.

75ನೇ ವಸಂತಕ್ಕೆ ಕಾಲಿಟ್ಟ ವೇಣು ಅವರನ್ನು ಸಾಹಿತ್ಯ ಅಭಿಮಾನಿಗಳು ಕೆಳಗೋಟೆಯ ನಿವಾಸದಲ್ಲಿ ಬುಧವಾರ ಅಭಿನಂದಿಸಿದರು. ಸರಳವಾಗಿ ನಡೆದ ಸಮಾರಂಭದಲ್ಲಿ ಬದುಕಿನ ಪುಟಗಳನ್ನು ವೇಣು ಅವರು ತೆರೆದಿಟ್ಟರು.

‘ಸಿನಿಮಾ ನನ್ನ ಆಯ್ಕೆಯಲ್ಲ. ಕಾದಂಬರಿ ಮೂಲಕ ಸಿನಿಮಾ ಕ್ಷೇತ್ರಕ್ಕೆ ಪ್ರವೇಶ ಸಿಕ್ಕಿತು. ಭಾಷೆಯ ಮೇಲಿನ ಪ್ರೌಢಿಮೆಯನ್ನು ಗಮನಿಸಿದ ನಿರ್ದೇಶಕರು ಸಂಭಾಷಣೆ ಬರೆಯುವ ಅವಕಾಶ ನೀಡಿದರು. ಎಷ್ಟೇ ಒತ್ತಡ ಇದ್ದರೂ ವಾಸ್ತವ್ಯವನ್ನು ಬದಲಾಯಿಸಲಿಲ್ಲ. ಚಿತ್ರದುರ್ಗದಲ್ಲೇ ನೆಲೆಸಿದ್ದರಿಂದ ಬರಹ ಹಾಗೂ ಬದುಕು ಸುಗಮವಾಗಿ ಸಾಗುತ್ತಿದೆ’ ಎಂದರು.

‘ಚಿತ್ರದುರ್ಗ ತೊರೆದಿದ್ದರೆ ಆರೋಗ್ಯವಾಗಿ ಇರುತ್ತಿರಲಿಲ್ಲ. ಇತಿಹಾಸಕಾರ ಲಕ್ಷ್ಮಣ್‌ ತೆಲಗಾವಿ ಸಿಗುತ್ತಿರಲಿಲ್ಲ. ಪಾಳೆಗಾರರ ಬಗ್ಗೆ ಕಾದಂಬರಿ ಬರೆಯಲು ಸಾಧ್ಯವಾಗುತ್ತಿರಲಿಲ್ಲ. ನನ್ನ ವ್ಯಕ್ತಿತ್ವ ರೂಪುಗೊಳ್ಳುವಲ್ಲಿ ಈ ನೆಲದ ಕೊಡುಗೆ ಅಪಾರ’ ಎಂದು ಸ್ಮರಿಸಿಕೊಂಡರು.

‘ಮೊದಲ ಸ್ವಾತಂತ್ರ್ಯ ಸಂಗ್ರಾಮಕ್ಕೂ ಮುನ್ನ ಬ್ರಿಟಿಷರ ವಿರುದ್ಧ ಚಿತ್ರದುರ್ಗದಲ್ಲಿ ದಂಗೆ ನಡೆದಿದೆ. ಬೇಡ ಜನಾಂಗದ ಏಳು ಯುವಕರು 1849ರಲ್ಲಿ ದಂಗೆ ಎದ್ದಿದ್ದರು. ತುಮಕೂರು ಹಾಗೂ ಚಿತ್ರದುರ್ಗ ಆಳ್ವಿಕೆ ಮಾಡುತ್ತಿದ್ದ ಡಾಬ್ಸ್‌ ವಿರುದ್ಧ ಈ ಹೋರಾಟ ನಡೆಯಿತು. ಆದರೆ, ಚರಿತ್ರೆಯಲ್ಲಿ ಇದು ದಾಖಲಾಗಿಲ್ಲ. ‘ದುರ್ಗಾಯಣ’ ಕಾದಂಬರಿಯಲ್ಲಿ ಈ ದಂಗೆಯನ್ನು ಕಟ್ಟಿಕೊಡುತ್ತಿದ್ದೇನೆ’ ಎಂದು ಹೇಳಿದರು.

ಕನ್ನಡ ಪ್ರಾಧ್ಯಾಪಕ ಡಾ.ಕರಿಯಪ್ಪ ಮಾಳಿಗೆ, ‘ಸಾಹಿತ್ಯ ಕೃಷಿಯಲ್ಲಿ ನಿರಂತರವಾಗಿ ತೊಡಗಿಕೊಂಡಿರುವ ವೇಣು ದಣಿವರಿಯದ ಬರಹಗಾರ. ಹೆಚ್ಚು ಓದುಗರನ್ನು ತಲುಪುವಂತೆ ಬರೆಯುವುದು ಸಾಹಿತ್ಯದ ಬಹುದೊಡ್ಡ ಸವಾಲು. ಬದುಕು ಹಾಗೂ ಚರಿತ್ರೆಯನ್ನು ಸೂಕ್ಷ್ಮವಾಗಿ ದಾಖಲಿಸುತ್ತ ಅಪಾರ ಓದುಗರನ್ನು ತಲುಪಿದ್ದಾರೆ’ ಎಂದು ಅಭಿಪ್ರಾಯಪಟ್ಟರು.

‘ವೈಯಕ್ತಿಕ ಅನುಭವವನ್ನು ಸಾರ್ವತ್ರೀಕರಿಸಿ ಬರೆಯುವ ಶೈಲಿ ಅವರಿಗೆ ಸಿದ್ಧಿಸಿದೆ. 75ನೇ ವರ್ಷಕ್ಕೆ ಪದಾರ್ಪಣೆ ಮಾಡಿದ ವೇಣು ಅವರ ಬದುಕನ್ನು ಅವಲೋಕಿಸಿದರೆ ಹಲವು ಮಜಲುಗಳು ಸಿಗುತ್ತವೆ. ಜನಮುಖಿ ವ್ಯಕ್ತಿತ್ವ ಬರಹದ ಮೂಲಕ ಪರಿಚಿತವಾಗುತ್ತದೆ. ಸಾಹಿತಿ, ಇತಿಹಾಸಕಾರ, ಸಾಂಸ್ಕೃತಿಕ ನಾಯಕರಾಗಿ ಬೆಳೆದಿದ್ದಾರೆ’ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಡಾ.ದೊಡ್ಡಮಲ್ಲಯ್ಯ, ವಕೀಲ ಬಿ.ಕೆ.ರಹಮತ್‌ವುಲ್ಲಾ, ಪಾಳೆಗಾರ ವಂಶಸ್ಥ ಮದಕರಿ ನಾಯಕ, ಮದಕರಿ ನಾಯಕ ಸಾಂಸ್ಕೃತಿಕ ಸಂಘದ ಡಿ.ಗೋಪಾಲಸ್ವಾಮಿ ನಾಯಕ, ಮೇಘ ಗಂಗಾಧರ ನಾಯ್ಕ್, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಲಕ್ಷಣ್‌ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.