ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖರೀದಿ ಸಂಭ್ರಮವಿಲ್ಲದ ಅಕ್ಷಯ ತೃತೀಯ

* ಲಾಕ್‌ಡೌನ್‌ ಕಾರಣಕ್ಕೆ ತೆರೆಯದ ಚಿನ್ನಾಭರಣ ಮಳಿಗೆ * ಗ್ರಾಹಕರಲ್ಲಿ ಉಂಟಾದ ನಿರಾಸೆ
Last Updated 26 ಏಪ್ರಿಲ್ 2020, 16:21 IST
ಅಕ್ಷರ ಗಾತ್ರ

ಚಿತ್ರದುರ್ಗ: ನಗರದ ಬಹುತೇಕ ಚಿನ್ನಾಭರಣ ಮಳಿಗೆಗಳಲ್ಲಿ ಪ್ರತಿ ವರ್ಷ ಅಕ್ಷಯ ತೃತೀಯ ದಿನದಂದು ಬೆಳ್ಳಿ, ಬಂಗಾರ ಖರೀದಿಗೆ ಜನ ಮುಗಿ ಬೀಳುತ್ತಿದ್ದರು. ಆದರೆ, ಈ ಬಾರಿ ಲಾಕ್‌ಡೌನ್ ಹಿನ್ನೆಲೆಯಲ್ಲಿ ಅಂಗಡಿಗಳು ತೆರೆಯದ ಕಾರಣ ಭಾನುವಾರ ಎಲ್ಲಿಯೂ ಖರೀದಿ ಸಂಭ್ರಮ ಇರಲಿಲ್ಲ.

ಲಕ್ಷ್ಮಿ ಮತ್ತು ಗಣಪತಿ ಮುದ್ರೆಯ ಚಿನ್ನ ಹಾಗೂ ಬೆಳ್ಳಿ ನಾಣ್ಯಗಳು, ಬಂಗಾರದ ಕಿವಿ ಓಲೆ, ಉಂಗುರ, ಮೂಗುತ್ತಿ, ಬೆಳ್ಳಿಯ ಕಾಲು ಚೈನು ಸೇರಿ ಸಣ್ಣಪುಟ್ಟ ಚಿನ್ನದ ವಸ್ತುಗಳಿಗೆ ಮಳಿಗೆಗಳಲ್ಲಿ ಬೇಡಿಕೆ ಹೆಚ್ಚಾಗಿ ಇರುತ್ತಿತ್ತು. ಆದರೆ, ಖರೀದಿಗೆ ಅವಕಾಶ ಇಲ್ಲದ ಕಾರಣ ಜನರಲ್ಲೂ ನಿರಾಸೆ ಉಂಟಾಗಿದೆ.

ಮದುವೆ, ಗೃಹಪ್ರವೇಶ ಶುಭ ಸಮಾರಂಭಗಳಿಗೂ ಮುಂಗಡವಾಗಿಯೇ ಅನೇಕರು ಚಿನ್ನಾಭರಣ ಕಾಯ್ದಿರಿಸುತ್ತಿದ್ದರು. ಕೆಲವರು ಅಕ್ಷಯ ತೃತೀಯ ದಿನದಂದು ಮನೆಗೆ ತೆಗೆದುಕೊಂಡು ಹೋಗುತ್ತಿದ್ದರು. ಐದಕ್ಕಿಂತ ಹೆಚ್ಚು ಜನ ಸೇರದಂತೆ ಸರಳವಾಗಿ ಶುಭ ಸಮಾರಂಭ ಆಚರಿಸಲು ಸರ್ಕಾರ ಸೂಚನೆ ನೀಡಿರುವ ಕಾರಣ ಮುಂಗಡ ಕಾಯ್ದಿರಿಸಲು ಉತ್ಸಾಹ ತೋರಿಲ್ಲ.

ವರ್ಷದ ಎಲ್ಲ ದಿನಗಳಿಗಿಂತಲೂ ಚಿನ್ನ, ಬೆಳ್ಳಿ ಖರೀದಿಗೆ ಅಕ್ಷಯ ತೃತೀಯ ಅತ್ಯಂತ ಶ್ರೇಷ್ಠವಾದ ದಿನ. ಅಂದು ಚಿನ್ನಾಭರಣ ಖರೀದಿಸಿದರೆ, ಮುಂದಿನ ವರ್ಷದವರೆಗೂ ಒಳ್ಳೆಯದಾಗುತ್ತದೆ. ಜತೆಗೆ ಮನೆಗೆ ಚಿನ್ನ ತಂದರೆ ಕುಟುಂಬದ ಸಮೃದ್ಧಿಗೂ ಸಹಕಾರಿ ಎಂಬ ನಂಬಿಕೆಯುಳ್ಳವರಲ್ಲಿ ಕೆಲವರು ಆನ್‌ಲೈನ್‌ನಲ್ಲಿ ಮುಂಗಡ ಕಾಯ್ದಿರಿಸಿದ್ದರಾದರೂ ಕೊರೊನಾ ಕರಿನೆರಳು ಖರೀದಿಗೆ ಅಡ್ಡಿ ಉಂಟು ಮಾಡಿದೆ.

‘ನಮ್ಮಲ್ಲಿ ಪ್ರತಿ ವರ್ಷ ₹ 5ಸಾವಿರದಿಂದ ₹ 1ಲಕ್ಷಕ್ಕಿಂತ ಹೆಚ್ಚು ಬೆಲೆ ಬಾಳುವ ಚಿನ್ನದ ವಸ್ತುಗಳನ್ನು ಗ್ರಾಹಕರು ಖರೀದಿಸುತ್ತಿದ್ದರು. ಈ ಬಾರಿ ವ್ಯಾಪಾರವಿಲ್ಲದೇ ಸಂಪೂರ್ಣ ಶೂನ್ಯ ಆಗಿದೆ. ಮುಂಗಡವಾಗಿ ಕೆಲವರು ಕಾಯ್ದಿರಿಸಿದ್ದರು. ಅಂಗಡಿ ತೆರೆಯದ ಕಾರಣ ಬಂದಿಲ್ಲ. ಜತೆಗೆ ಬಂಗಾರ, ಬೆಳ್ಳಿ ಬೆಲೆ ಬೇರೆ ಏರಿಕೆಯಾಗಿದೆ. ಹೀಗಾಗಿ ಆನ್‌ಲೈನ್ ಕಾಯ್ದಿರಿಸುವಿಕೆ ಕೂಡ ಕಡಿಮೆ. ಲಾಕ್‌ಡೌನ್ ನಂತರ ವ್ಯಾಪಾರ ಮೊದಲ ಸ್ಥಿತಿಯತ್ತ ಮರಳುವ ವಿಶ್ವಾಸವಿದೆ’ ಎನ್ನುತ್ತಾರೆ ನಗರದ ಕೇಶವ ಜ್ಯುವೆಲ್ಸ್‌ ಮಾಲೀಕ ಕೇಶವ.

ಬಸವ ಜಯಂತಿ, ಅಕ್ಷಯ ತೃತೀಯ ದಿನದಂದು ಗೃಹ ಪ್ರವೇಶಗಳು ಹೆಚ್ಚಾಗಿ ನಡೆಯುತ್ತಿದ್ದವು. ಲಾಕ್‌ಡೌನ್‌ ಕಾರಣಕ್ಕೆ ಈ ಬಾರಿ ಇದ್ಯಾವುದಕ್ಕೂ ಅವಕಾಶ ಇರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT