ಬುಧವಾರ, ಜೂನ್ 23, 2021
21 °C
* ಲಾಕ್‌ಡೌನ್ ಕಠಿಣವಾಗುವ ಸಾಧ್ಯತೆ * ಅಗತ್ಯ ವಸ್ತು ಖರೀದಿಗೆ ನೂಕುನುಗ್ಗಲು

ಚಿತ್ರದುರ್ಗ: ಮಾಂಸ, ದಿನಸಿ ಖರೀದಿಗೆ ಮುಗಿಬಿದ್ದ ಜನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಜಿಲ್ಲೆಯ ಹಿಟ್ಟಿನ ಗಿರಣಿ, ತರಕಾರಿ ಮಾರುಕಟ್ಟೆ, ಬಾರ್‌ ಅಂಡ್‌ ರೆಸ್ಟೋರೆಂಟ್, ದಿನಸಿ ಅಂಗಡಿ, ಹಣ್ಣಿನ ಅಂಗಡಿಗಳ ಬಳಿ ಭಾನುವಾರ ಜನಜಂಗುಳಿ ನಿರ್ಮಾಣವಾಗಿತ್ತು. ಮಾಂಸದ ಅಂಗಡಿಗಳ ಬಳಿ ನೂಕುನುಗ್ಗಲು ಉಂಟಾಯಿತು. ಖರೀದಿ ಭರಾಟೆಯಲ್ಲಿ ಬಹುತೇಕರು ಅಂತರ ಮರೆತರು.

ಕರ್ಫ್ಯೂ ಮಾದರಿಯ ‘ಲಾಕ್‌ಡೌನ್‌’ಗೆ ಉತ್ತಮ ಸ್ಪಂದನೆ ದೊರೆಯದ ಕಾರಣ ಹಾಗೂ ಕೋವಿಡ್ ಪ್ರಕರಣ ಹೆಚ್ಚುತ್ತಿರುವ ಸಂಬಂಧ ಸರ್ಕಾರ ಮೇ 10ರಿಂದ 24ರ ವರೆಗೂ ಜಾರಿಗೊಳಿಸಿರುವ ನೂತನ ‘ಲಾಕ್‌ಡೌನ್‌’ ಕಠಿಣಗೊಳ್ಳುವ ಸಾಧ್ಯತೆ ಇದೆ. ಈ ಕಾರಣಕ್ಕೆ ಒಂದು ದಿನ ಮುಂಚಿತವಾಗಿಯೇ ಅಗತ್ಯ ವಸ್ತುಗಳನ್ನು ಖರೀದಿಸಲು ಜನರು ಮುಗಿಬಿದ್ದಿದ್ದರು.

ಮಾಂಸದ ಮಾರುಕಟ್ಟೆಯಲ್ಲಿ ವಾಹನ ದಟ್ಟಣೆ ಕಂಡುಬಂದಿತು. ಕುರಿ, ಕೋಳಿ ಹಾಗೂ ಮೀನು ಖರೀದಿಗೆ ಮುಂದಾಗಿದ್ದರು. ಮದ್ಯ ಪ್ರಿಯರು ಕೆಲವೆಡೆ ಸರತಿಯಲ್ಲಿ ನಿಂತು ಮದ್ಯ ಖರೀದಿಸುತ್ತಿದ್ದರು. ತರಕಾರಿ ಮಾರುಕಟ್ಟೆಗಳ ಬಳಿ ಅಂತರ ಕಾಯ್ದುಕೊಂಡರೆ ಕೆಲವೆಡೆ ಉಲ್ಲಂಘನೆಯಾಯಿತು. ಖರೀದಿ ವೇಳೆ ಕೋವಿಡ್ ಆತಂಕವಾಗಲಿ, ಭಯವಾಗಲಿ ಯಾರಲ್ಲೂ ಕಂಡು ಬರಲಿಲ್ಲ.

ಇನ್ನೂ ಹಿಟ್ಟಿನ ಗಿರಣಿಗಳ ಬಳಿ ಎಂದಿಗಿಂತಲೂ ಹೆಚ್ಚಿನ ಪ್ರಮಾಣದಲ್ಲೇ ರಾಗಿ, ಗೋಧಿ, ಜೋಳ, ಅಕ್ಕಿ, ಒಣ ಮೆಣಸಿನಕಾಯಿ, ಸಾಂಬಾರ ಪದಾರ್ಥವನ್ನು ಅನೇಕರು ತಂದಿದ್ದರು. ಹೀಗಾಗಿ ಕಡಿಮೆ ಅವಧಿಯಲ್ಲಿ ಎಲ್ಲರಿಗೂ ಹಾಕಿಕೊಡುವುದು ಕಷ್ಟಕರವಾಯಿತು. ಜನಜಂಗುಳಿ ನಿರ್ಮಾಣ ಆಗುವುದನ್ನು ಗಮನಿಸಿದ ಮಾಲೀಕರು ಪರಿಚಯಸ್ಥರು, ಮಾಮೂಲಿ ಗ್ರಾಹಕರಿಗೆ ಮಾತ್ರ ಸೇವೆ ಒದಗಿಸಿದರು.

ಬೆಳಿಗ್ಗೆ 6ರಿಂದಲೇ ದ್ವಿಚಕ್ರ, ಕಾರು ಸೇರಿದಂತೆ ಹಲವು ವಾಹನಗಳ ಸದ್ದು ಕೇಳಿಸಿತು. ಬೆಳಿಗ್ಗೆ 10ರ ವರೆಗೆ ಅವಕಾಶ ಇದ್ದಿದ್ದರಿಂದ ಜನ ವಸ್ತುಗಳ ಖರೀದಿಗೆ ಉತ್ಸಾಹ ತೋರಿದರು. 10.30 ಆದರೂ ಜನಸಂಚಾರ ಕಡಿಮೆಯಾಗಲಿಲ್ಲ. ಮುಖ್ಯ ರಸ್ತೆ ಮಾರ್ಗಗಳಲ್ಲಿ ಪೊಲೀಸರು ಯಾವಾಗ ವಾಹನ ತಡೆಯಲು ಮುಂದಾದರೋ ಎಚ್ಚೆತ್ತುಕೊಂಡ ಅನೇಕರು ಮನೆಗಳತ್ತ ತೆರಳಿದರು.

ತರಕಾರಿ ಮಾರುಕಟ್ಟೆ ಬಳಿ ಬೆಳಿಗ್ಗೆ 9.30ಕ್ಕೆ ಪೊಲೀಸರು ಮಾರಾಟ ಪ್ರಕ್ರಿಯೆಯನ್ನು ಬಂದ್ ಮಾಡಿಸಿದರು. ಇಲ್ಲಿ ವ್ಯಾಪಾರಸ್ಥರು ಬಿಟ್ಟರೆ ರೈತರು ಹೆಚ್ಚಾಗಿ ಕಂಡುಬರಲಿಲ್ಲ. ತಾಜಾ ತರಕಾರಿ ಖರೀದಿಸಲು ಬಂದಿದ್ದ ಕೆಲವರು ನಿರಾಸೆಯಿಂದ ಮನೆಗೆ ಮರಳಿದರು. ತಡವಾಗಿ ಬಂದವರನ್ನು ಪ್ರಶ್ನಿಸಿದ ಪೊಲೀಸರು ಗದರಿಸಿ ಕಳುಹಿಸಿದರು.  

ವಾಹನ ದಟ್ಟಣೆಯಿಂದ ಸದ್ದು ಮಾಡುತ್ತಿದ್ದ ಮುಖ್ಯ ರಸ್ತೆಗಳೆಲ್ಲವೂ ಮಧ್ಯಾಹ್ನ 12ರ ನಂತರ ನೀರವಮೌನಕ್ಕೆ ಶರಣಾದವು. ಆಸ್ಪತ್ರೆ, ಆರೋಗ್ಯ ಕೇಂದ್ರ, ಔಷಧ ಮಳಿಗೆಗಳನ್ನು ಹೊರತುಪಡಿಸಿ ಜನಸಂಚಾರವೇ ಇಲ್ಲದ ಮಾರ್ಗಗಳ ಉದ್ದಕ್ಕೂ ಉಳಿದೆಲ್ಲಾ ಅಂಗಡಿ-ಮುಂಗಟ್ಟುಗಳು ಬಾಗಿಲು ಮುಚ್ಚಿದ್ದವು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು