ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೀಗೊಂದು ಪ್ರಣಾಳಿಕೆ

Last Updated 30 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ರಾಜ್ಯದಲ್ಲಿ ಜನತಂತ್ರದ ಹಬ್ಬಕ್ಕೆ ದಿನಾಂಕ ನಿಗದಿಯಾಗಿದ್ದೇ ತಡ, ಚುನಾವಣೆ ಬಿಸಿ ಏಕ್‌ದಂ ಏರಿದೆ. ಟಿಕೆಟ್ ಹಂಚುವ ತಲೆಬಿಸಿ, ನೀತಿ ಸಂಹಿತೆ ಪಾಲಿಸದೆ ಎಲ್ಲಿ ಸಿಕ್ಕಿಹಾಕಿಕೊಳ್ಳುತ್ತೇವೆಯೋ ಎಂಬ ಕಸಿವಿಸಿ. ಒಟ್ಟಿನಲ್ಲಿ ಮಂತ್ರ- ತಂತ್ರ- ಕುತಂತ್ರಗಾರಿಕೆಗೆ ಸನ್ನದ್ಧರಾಗಬೇಕು. ಎಲ್ಲಕಿಂತ ಮುಖ್ಯವಾಗಿ ಪೆದ್ದು ಪ್ರಜೆಗಳಿಗೆ ಯಾವ ರೀತಿಯ ಪ್ರಣಾಳಿಕೆ ಕೊಡುವುದಪ್ಪಾ ಎಂಬ ಯೋಚನೆಯಲ್ಲೇ ಬಿದ್ದಿದ್ದಾರೆ ನಮ್ಮ ರಾಜಕೀಯ ಮುಖಂಡರು. ಪಕ್ಷಗಳ ಪ್ರಣಾಳಿಕೆ ಬಿಡುಗಡೆಗೆ ಇನ್ನೂ ಸಮಯವಿದೆ ಅಂದುಕೊಳ್ಳುತ್ತಿರುವಾಗಲೇ ಈಚೆಗೆ ಉದಯವಾಗಿರುವ ‘ಮಜಾಪ್ರಭುತ್ವ ಪಕ್ಷ’ದ ಅತ್ಯಂತ ಕುತೂಹಲಕಾರಿ ಪ್ರಣಾಳಿಕೆ ಸೋರಿಕೆಯಾಗಿಬಿಟ್ಟಿದೆ! ದಯವಿಟ್ಟು ಆಕಳಿಸದೆ ಈ ಅದ್ಭುತ ಪ್ರಣಾಳಿಕೆಯನ್ನು ನೀವು ಓದಲೇಬೇಕು. ‘ಇಂತಹ ಒಂದು ಪಕ್ಷ ನಮ್ಮ ಚೆಲುವ ಕನ್ನಡ ನಾಡಿನಲ್ಲಿ ಹುಟ್ಟುವುದಕ್ಕೆ ಇಷ್ಟು ದಿನಗಳು ಬೇಕಾಯಿತಲ್ಲ’ ಎಂದು ಅನಿಸಿದರೆ ಅಚ್ಚರಿಯೇನಲ್ಲ.

* ಮೊದಲನೆಯದಾಗಿ, ಅಧಿಕಾರ ಸಿಕ್ಕಿದ ಒಂದು ವಾರದೊಳಗೆ ‘ನವ ಕರ್ನಾಟಕ’ದ ನಿರ್ಮಾಣ ಮಾಡುತ್ತೇವೆ. ವಿಧಾನಸೌಧದ ಎದುರು ಸುಮಾರು 5000 ಅಡಿ ಅಗಲ, 2000 ಅಡಿ ಎತ್ತರದ ಬೃಹತ್ ಆಕಾರದ ‘ನವ ಕರ್ನಾಟಕ’ ಹೆಸರನ್ನು ಕಲ್ಲಿನಲ್ಲಿ ಸುಂದರವಾಗಿ ಕೆತ್ತಿಸಿ ಸ್ಥಾಪಿಸಲಾಗುವುದು.

* ಈಗ ಇರುವ ಎಲ್ಲಾ ಜಾತಿಗಳನ್ನು ಹಾಗೂ ಧರ್ಮಗಳನ್ನು ಎರಡು ಅಥವಾ ಮೂರು ಪಾಲು ಮಾಡಿ ಪ್ರತ್ಯೇಕವಾಗಿ ವಿಭಜಿಸಲಾಗುವುದು.

* ಭ್ರಷ್ಟಾಚಾರ ಸೌಭಾಗ್ಯ: ₹ 100 ಕೋಟಿಗಿಂತ ಕಡಿಮೆ ನುಂಗಿರುವವರನ್ನು ಭ್ರಷ್ಟರೆಂದು ಪರಿಗಣಿಸುವುದಿಲ್ಲ.

* ಶಿಕ್ಷಣಾಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಎಸ್ಎಸ್ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳ ಮುಂಚಿನ ದಿವಸವೇ ಪ್ರಶ್ನೆಪತ್ರಿಕೆಗಳನ್ನು ಹಂಚುವ ಹೊಸ ಪ್ರಯೋಗ ಮಾಡುತ್ತೇವೆ.

* ನಾವು ಇಸ್ರೇಲ್ ಮಾದರಿ ಕೃಷಿಯನ್ನು ರಾಜ್ಯದಾದ್ಯಂತ ಜಾರಿಗೊಳಿಸುತ್ತೇವೆ. ನಮ್ಮ ಕೃಷಿ ಮಂತ್ರಿಯವರು ಇಸ್ರೇಲ್‌ನಿಂದಲೇ ಕಾರ್ಯನಿರ್ವಹಿಸುತ್ತಾರೆ.

* ಮಹಿಳಾ ಮೀಸಲಾತಿ: ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ ಶೇಕಡ 50ರಷ್ಟು ಮೀಸಲಾತಿ. ಅವರ ಕೆಲಸದ ಸಮಯವನ್ನೂ ಅರ್ಧ ದಿವಸಕ್ಕೆ ಇಳಿಸುತ್ತೇವೆ.

* ಸರಗಳ್ಳತನ, ಬೈಕ್- ಕಾರು ಕಳ್ಳತನ ಹಾಗೂ ದರೋಡೆಗಳನ್ನು ನಿಯಂತ್ರಿಸುವುದಕ್ಕೆ ಸ್ಪರ್ಧೆಯಿಟ್ಟು ‘ಪ್ರತಿಭಾವಂತರನ್ನು’ ಗುರುತಿಸಿ ಲಾಕಪ್ ಸನ್ಮಾನ ಮಾಡುತ್ತೇವೆ.

* ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ವಲಸಿಗರ ಹಾವಳಿಯನ್ನು ತಡೆಗಟ್ಟಲು ತೀವ್ರ ಕ್ರಮ. ಹೊರ ರಾಜ್ಯದಿಂದ ಬರುವವರಿಗೆ ಮೂರು ತಿಂಗಳು ಮಾತ್ರ ‘ವಿಸಿಟಿಂಗ್ ವೀಸಾ’ ಕೊಡಲಾಗುವುದು.

* ಕಸದ ಉತ್ಪಾದನೆ ಹೆಚ್ಚಿಸಲು ಜನರಿಗೆ ಉತ್ತೇಜನ. ರಾಜ್ಯದಲ್ಲಿ ದಿನಕ್ಕೆ ‘ಇಪ್ಪತ್ತಾರು ಗಂಟೆ’ಯೂ ವಿದ್ಯುತ್ ಸರಬರಾಜು ಆಗಬೇಕೆನ್ನುವ ಉದ್ದೇಶವನ್ನಿಟ್ಟುಕೊಂಡು ಕಸದಿಂದ ವಿದ್ಯುತ್ ಉತ್ಪಾದಿಸಲಾಗುವುದು. ಇದು ವಿಶ್ವದ ಎಂಟನೇ ಅದ್ಭುತ ಆಗಲಿದೆ.

* ಬೆಳಗಾವಿಯ ಸುವರ್ಣ ಸೌಧವನ್ನು ಸಿನಿಮಾ ಶೂಟಿಂಗ್‌ಗೆ ಕೊಟ್ಟು, ಆ ಕಟ್ಟಡಕ್ಕೆ ಅನವಶ್ಯಕವಾಗಿ ಮಾಡಿದ ಖರ್ಚನ್ನು ವಾಪಸು ಪಡೆಯುವ ಪ್ರಯತ್ನ ಮಾಡುತ್ತೇವೆ.

* ಬೆಂಗಳೂರಿನಲ್ಲಿರುವ ಕಬ್ಬನ್ ಪಾರ್ಕನ್ನು ‘ಲವರ್ಸ್ ಪ್ಯಾರಡೈಸ್ ’ ಎಂದು ಮರುನಾಮಕರಣ ಮಾಡುವುದು. ಇಬ್ಬರಿಗೆ ₹ 5000 ಪ್ರವೇಶ ಶುಲ್ಕ ಇಡಲಾಗುವುದು.

* ಈಗ ಇರುವ ‘ಇಂದಿರಾ ಕ್ಯಾಂಟಿನ್’ ಹೆಸರನ್ನು ‘ಇಂದ್ರ ಬಾರ್’ ಎಂದು ಬದಲಾಯಿಸಿ, ಅಲ್ಲಿ ಬಡವರಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ಬೆಲೆ ಬಾಳುವ ಸ್ಕಾಚ್, ವಿಸ್ಕಿ ಮತ್ತು ರಮ್‌ಗಳನ್ನು ಮಾರಲಾಗುವುದು.

* ಖಾಸಗಿ ಕಂಪನಿಗಳಲ್ಲಿ ನಿವೃತ್ತಿ ವಯಸ್ಸನ್ನು 40ಕ್ಕೆ ಇಳಿಸಲಾಗುವುದು. ಈ ಮೂಲಕ ಉದ್ಯೋಗ ಸಮಸ್ಯೆಯನ್ನು ಪರಿಹರಿಸುವುದು ನಮ್ಮ ಗುರಿ.

* ‘ಎತ್ತಿನಹೊಳೆ’ ಯೋಜನೆ ಪೂರ್ತಿಗೊಂಡ ನಂತರ ಅಲ್ಲಿಂದ ಉತ್ತರ ಕರ್ನಾಟಕದ ಪ್ರತೀ ಜಿಲ್ಲೆಗೂ ನೇತ್ರಾವತಿ ನೀರನ್ನು ಹರಿಸುವ ಎತ್ತಿನಹೊಳೆ-2 ಯೋಜನೆಯನ್ನು ಕಾರ್ಯರೂಪಕ್ಕೆ ತರಲಾಗುವುದು.

* ರಾಜ್ಯದಲ್ಲಿ ಅತ್ಯಾಚಾರ ಪ್ರಕರಣಗಳೇ ನಡೆಯದಂತೆ ಕ್ರಮ ತೆಗೆದುಕೊಳ್ಳಲಾಗುವುದು. ಈ ಉದ್ದೇಶದಿಂದ ಮಾಧ್ಯಮಗಳಲ್ಲಿ ಅಂತಹ ಸುದ್ದಿ ಪ್ರಕಟವಾಗದಂತೆ ಅಥವಾ ವಾಹಿನಿಗಳಲ್ಲಿ ಬಿತ್ತರವಾಗದಂತೆ ಕಡಿವಾಣ ಹಾಕಲಾಗುವುದು.

* ವಿಧಾನಸಭೆ ಕಲಾಪಗಳಲ್ಲಿ ನಿದ್ದೆ ಮಾಡುವವರಿಗೆ, ಸೀರೆ ಬಗ್ಗೆ ಮಾತನಾಡುವವರಿಗೆ, ಮೊಬೈಲ್ ನೋಡುವವರಿಗೆ, ನಾಪತ್ತೆಯಾಗುವವರಿಗೆ ಒಂದು ಲಕ್ಷ ರೂಪಾಯಿ ದಂಡ ವಿಧಿಸಲಾಗುವುದು.

* ಪೊಲೀಸರ ಸಂಬಳವನ್ನು ಶೇ 50ರಷ್ಟು ಕಡಿತಗೊಳಿಸಲಾಗುವುದು. ಅದಕ್ಕೆ ಪರ್ಯಾಯವಾಗಿ ಸರ್ಕಾರ, ವಿವಿಧ ಸೇವೆಗಳಿಗೆ ನಮೂದಿಸಿರುವ ‘ಸೇವಾಶುಲ್ಕ’ದಂತೆ ಹಣವನ್ನು ಜನರಿಂದ ಪಡೆದುಕೊಂಡು ತಮ್ಮ ಕಿಸೆ ತುಂಬಿಸಿಕೊಳ್ಳಲು ಅವಕಾಶ ಕೊಡಲಾಗುವುದು. ಪೊಲೀಸ್ ವ್ಯವಸ್ಥೆಯಲ್ಲಿರುವ ಭ್ರಷ್ಟಾಚಾರವನ್ನೂ ನಿಯಂತ್ರಿಸುವುದು ನಮ್ಮ ಪ್ರಮುಖ ಉದ್ದೇಶ.

* ಫೇಸ್‌ಬುಕ್, ವಾಟ್ಸ್‌ಆ್ಯಪ್ ವ್ಯಸನಿಗಳು ಹಾಗೂ ಕೆಲಸವನ್ನೇ ಮಾಡದ ಸೋಮಾರಿಗಳ ರಕ್ಷಣೆಗಾಗಿ ವಿಶೇಷ ‘ನವಚೈತನ್ಯ’ ಯೋಜನೆ ಆರಂಭಿಸುತ್ತೇವೆ.

(ಇದನ್ನು ನಾಳಿನ ‘ಮೂರ್ಖರ ದಿನ’ದ ಒಂದು ಝಲಕ್ ಎಂದು ತಿಳಿದುಕೊಂಡರೆ ಅಡ್ಡಿಯಿಲ್ಲ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT