ಶುಕ್ರವಾರ, ಮೇ 20, 2022
21 °C
‘ವಿಮಾನಗಳ ಹಾರಾಟ ರದ್ದು: ಪ್ರಮುಖ ಕಾರಣ’

ಪ್ರೇಮಿಗಳ ದಿನ: ಗುಲಾಬಿ ರಫ್ತಿಗೆ ಕೊರೊನಾ ಅಡ್ಡಿ

ಮನೋಹರ್ ಎಂ. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಪ್ರೇಮಿಗಳ ದಿನಕ್ಕೆ ಕೆಂಗುಲಾಬಿಗೆ ಬಲು ಬೇಡಿಕೆ. ಕೊರೊನಾ ಪರಿಸ್ಥಿತಿ ಇದ್ದರೂ ದೇಶದಲ್ಲಿ ಗುಲಾಬಿಗೆ ಬೇಡಿಕೆ ಸೃಷ್ಟಿಯಾಗಿದೆ. ಆದರೆ, ಈ ಬಾರಿ ವಿದೇಶಗಳಿಗೆ ಗುಲಾಬಿ ರಫ್ತು ಮಾಡಲು ಕೊರೊನಾ ಅಡ್ಡಿಯಾಗಿದೆ.

ಫೆ.14ರ ಪ್ರೇಮಿಗಳ ದಿನದಂದು ಕೆಂಗುಲಾಬಿಗೆ ವಿಶೇಷ ಸ್ಥಾನ. ಅಂದು ಐಷಾರಾಮಿ ಹೋಟೆಲ್‌ಗಳು ಹಾಗೂ ರೆಸ್ಟೋರೆಂಟ್‌ಗಳಲ್ಲಿ ಗುಲಾಬಿ ಹೂಗಳ ಅಲಂಕಾರ ಜನರನ್ನು ಸೆಳೆಯುತ್ತವೆ. ಈ ಕಾರಣದಿಂದ ದೇಶ ಹಾಗೂ ವಿದೇಶಗಳಿಗೆ ರಾಜ್ಯದಿಂದ ಲಕ್ಷಗಟ್ಟಲೆ ಗುಲಾಬಿ ರಫ್ತಾಗುತ್ತಿತ್ತು.

ಹೆಬ್ಬಾಳದಲ್ಲಿರುವ ಬೆಂಗಳೂರು ಅಂತರರಾಷ್ಟ್ರೀಯ ಪುಷ್ಪ ಹರಾಜು ಕೇಂದ್ರವು (ಐಎಫ್‌ಎಬಿ) ದೇಶದಲ್ಲಿ ಗುಲಾಬಿ ಪೂರೈಸುವ ಪ್ರಮುಖ ಸಂಸ್ಥೆ. ಇಲ್ಲಿಂದ ದೇಶದ ಪ್ರಮುಖ ನಗರಗಳಿಗೆ ಪ್ರತಿನಿತ್ಯ ಗುಲಾಬಿ ಪೂರೈಕೆಯಾಗುತ್ತದೆ.

‘ಅರಬ್ ಹಾಗೂ ಯುರೋಪ್‌ ರಾಷ್ಟ್ರಗಳಿಗೆ ಗುಲಾಬಿ ಹೆಚ್ಚು ರಫ್ತಾಗುತ್ತದೆ. ಆದರೆ, ಕೊರೊನಾ ತೊಡಕಿನಿಂದ ವಿವಿಧ ರಾಷ್ಟ್ರಗಳಿಗೆ ವಿಮಾನಗಳ ಹಾರಾಟ ರದ್ದಾಗಿದ್ದು, ಸೀಮಿತ ವಿಮಾನಗಳ ಲಭ್ಯತೆ ಇದೆ. ರಫ್ತು ಮಾಡಲು ಕಾರ್ಗೊ ದರವೂ ಏರಿದೆ. ಇದರಿಂದ ಹೊರದೇಶಗಳಿಗೆ ಗುಲಾಬಿ ರಫ್ತು ಪ್ರಮಾಣ ಕುಸಿದಿದೆ’ ಎಂದು ಐಎಫ್‌ಎಬಿ ವ್ಯವಸ್ಥಾಪಕ ನಿರ್ದೇಶಕ ಎಂ.ವಿಶ್ವನಾಥ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೊರೊನಾ ಕಾರಣದಿಂದ ಕಳೆದ ವರ್ಷ ಮೂರು ತಿಂಗಳವರೆಗೆ ಸಂಸ್ಥೆ ಸ್ಥಗಿತಗೊಂಡಿತ್ತು. ಮೇ ತಿಂಗಳಲ್ಲಿ ಕಾರ್ಯಾರಂಭ ಮಾಡಿದರೂ ಶುಭ ಸಮಾರಂಭಗಳಿಗೆ ನಿರ್ಬಂಧ ಹೇರಿದ್ದರಿಂದ ಗುಲಾಬಿ ಉದ್ಯಮ ನೆಲಕಚ್ಚಿತ್ತು. ನಿರ್ಬಂಧ ಸಡಿಲಗೊಂಡ ಬಳಿಕ ನವೆಂಬರ್‌ನಲ್ಲಿ ಗುಲಾಬಿಗೆ ದಿಢೀರ್ ಬೇಡಿಕೆ ಹೆಚ್ಚಿತ್ತು. ಆಗ ಒಂದು ಗುಲಾಬಿ ಗರಿಷ್ಠ ₹31ರಂತೆ ಮಾರಾಟವಾಯಿತು’ ಎಂದು ವಿವರಿಸಿದರು.

‘ನವೆಂಬರ್‌ನಿಂದ ಫೆಬ್ರುವರಿ ಅವಧಿಯಲ್ಲಿ ಹೂವಿಗೆ ಹೆಚ್ಚು ಬೇಡಿಕೆ. ಕಳೆದ ವರ್ಷ ಗರಿಷ್ಠ 5 ಲಕ್ಷ ಗುಲಾಬಿಗಳನ್ನು ಒಂದೇ ದಿನ ಪೂರೈಸಲಾಗಿತ್ತು. ಹೈದರಾಬಾದ್, ದೆಹಲಿ, ಮುಂಬೈ, ಚೆನ್ನೈ, ಕೋಲ್ಕತ್ತ ಸೇರಿದಂತೆ ದೇಶದ ಪ್ರಮುಖ ನಗರಗಳಿಗೆ ಗುಲಾಬಿ ಪೂರೈಕೆ ಸ್ಥಿರವಾಗಿದೆ. ವಿದೇಶಗಳಿಂದ ಬೇಡಿಕೆ ಇದ್ದರೂ ರಫ್ತಿಗೆ ತೊಡಕು. ಕಳೆದ ಫೆಬ್ರುವರಿಯ ಇದೇ ಅವಧಿಯಲ್ಲಿ ಗುಲಾಬಿ ದರಗಳು ಏರಿದ್ದವು. ಈ ಸಲ ಕಡಿಮೆ ಇದೆ. ಮುಂದಿನ ವಾರದಲ್ಲಿ ದರ ಏರುವ ನಿರೀಕ್ಷೆಯಲ್ಲಿದ್ದೇವೆ’ ಎಂದರು.

ಕೆಂಗುಲಾಬಿ ವಿಧಗಳು: ಪ್ರೇಮಿಗಳ ದಿನಕ್ಕೆ ‘ತಾಜ್‌ಮಹಲ್’ ತಳಿಯ ಕೆಂಗುಲಾಬಿ ಹೆಚ್ಚು ಖರೀದಿಯಾಗುತ್ತದೆ. ಇತರೆ ಕೆಂಗುಲಾಬಿಗಳೆಂದರೆ ಹಾಟ್‌ಶಾಟ್, ಕಾರ್ವೆಟ್‌, ರಾಕ್‌ಸ್ಟಾರ್, ಬ್ರಿಲಿಯಂಟ್, ಫರ್ಸ್ಟ್‌ ರೆಡ್‌, ಗ್ರ್ಯಾಂಡ್‌ಗಲಾ. ಕಳೆದ ಪ್ರೇಮಿಗಳ ದಿನದಂದು ಒಂದು ಗುಲಾಬಿ ಗರಿಷ್ಠ ₹28ರಂತೆ ಮಾರಾಟವಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು