ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆಟ್ರೋಲ್, ಡೀಸೆಲ್‌ ಬೆಲೆ ಇಳಿಸಿ: ಈಚಘಟ್ಟದ ಸಿದ್ಧವೀರಪ್ಪ

Last Updated 4 ನವೆಂಬರ್ 2021, 14:10 IST
ಅಕ್ಷರ ಗಾತ್ರ

ಹೊಳಲ್ಕೆರೆ: ಕೇಂದ್ರ ಸರ್ಕಾರ ಪೆಟ್ರೋಲ್ ಬೆಲೆಯನ್ನು ₹ 60ಕ್ಕೆ ಹಾಗೂ ಡೀಸೆಲ್ ಬೆಲೆಯನ್ನು ₹ 50ಕ್ಕೆ ಇಳಿಸಬೇಕು ಎಂದು ರೈತ ಸಂಘದ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಈಚಘಟ್ಟದ ಸಿದ್ಧವೀರಪ್ಪ ಆಗ್ರಹಿಸಿದರು.

ಪಟ್ಟಣದ ರೈತ ಸಂಘದ ಕಚೇರಿಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

‘ಕೇಂದ್ರ ಸರ್ಕಾರ ಪೆಟ್ರೋಲ್ ಬೆಲೆಯನ್ನು ಪ್ರತೀ ಲೀಟರ್ ಗೆ ₹ 5, ಡೀಸೆಲ್ ಬೆಲೆಯನ್ನು ₹ 10ಕ್ಕೆ ಇಳಿಸಿದೆ. ರಾಜ್ಯ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆಯನ್ನು ₹ 7 ಕಡಿಮೆ ಮಾಡಿದೆ. ಬೆಲೆ ಇಳಿಕೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ದೀಪಾವಳಿ ಬಂಪರ್ ಗಿಫ್ಟ್ ಎಂದು ಬೆನ್ನು ತಟ್ಟಿಕೊಳ್ಳುತ್ತಿವೆ. ಇಷ್ಟು ಬೆಲೆ ಇಳಿಕೆಯಿಂದ ಗ್ರಾಹಕರಿಗೆ ಯಾವುದೇ ಅನುಕೂಲ ಆಗುವುದಿಲ್ಲ. ಮೂರ್ನಾಲ್ಕು ತಿಂಗಳಿನಿಂದ ಪ್ರತಿ ದಿನ ಪೆಟ್ರೋಲ್, ಡೀಸೆಲ್ ಬೆಲೆ ಏರಿಸಿದ ಸರ್ಕಾರ ಈಗ ಸ್ವಲ್ಪ ಪ್ರಮಾಣದಲ್ಲಿ ಬೆಲೆ ಇಳಿಕೆ ಮಾಡಿ ಜನರ ಕಣ್ಣೊರೆಸುವ ನಾಟಕ ಆಡುತ್ತಿದೆ. ಬೆಲೆ ಹೆಚ್ಚಿಸಿದ ಪ್ರಮಾಣಕ್ಕೆ ಹೋಲಿಸಿದರೆ ಇಳಿಸಿರುವ ಬೆಲೆ ಯಾವ ಲೆಕ್ಕಕ್ಕೂ ಅಲ್ಲ’ ಎಂದು ಆರೋಪಿಸಿದರು.

‘ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯಿಂದ ಸರ್ಕಾರಕ್ಕೆ ಇಷ್ಟು ಸಾವಿರ ಕೋಟಿ ನಷ್ಟ ಉಂಟಾಗುತ್ತದೆ ಎಂದು ಹೇಳಿಕೊಂಡಿದ್ದಾರೆ. ಬೆಲೆ ಇಳಿಕೆಯಿಂದ ಸರ್ಕಾರಕ್ಕೆ ಯಾವುದೇ ನಷ್ಟ ಆಗುವುದಿಲ್ಲ. ಲಾಭದಲ್ಲಿ ಸ್ವಲ್ಪ ಕಡಿಮೆ ಆಗುತ್ತದೆ ಅಷ್ಟೆ. ಇಷ್ಟು ದಿನ ಜನರಿಂದ ಕೊಳ್ಳೆ ಹೊಡೆದ ಹಣವೆಷ್ಟು ಎಂದು ಮೊದಲು ಹೇಳಿ. ಇದುವರೆಗೆ ಹಾಕಿದ ಸೆಸ್ ಎಷ್ಟು ಎಂದು ಹೇಳಿ. ನೀವು ₹ 60ಕ್ಕೆ ಪೆಟ್ರೋಲ್ ಮಾರಿದರೂ ನಿಮಗೆ ನಷ್ಟ ಆಗುವುದಿಲ್ಲ’ ಎಂದರು.

‘ಕರಾವಳಿಯ ಮೀನುಗಾರರಿಗೆ ರಿಯಾಯಿತಿಯಲ್ಲಿ ಡೀಸೆಲ್ ಕೊಡುವಂತೆ ನಮ್ಮ ಬಯಲು ನಾಡಿನ ರೈತರಿಗೂ ಡೀಸೆಲ್ ವಿತರಿಸಬೇಕು. ಕೃಷಿ ಕಾರ್ಯಕ್ಕೆ ಟ್ರ್ಯಾಕ್ಟರ್ ಅನಿವಾರ್ಯವಾಗಿದ್ದು, ಡೀಸೆಲ್ ಬೆಲೆ ಕಡಿಮೆ ಮಾಡಬೇಕು. ಹೊಲ, ತೋಟ, ಮಾರುಕಟ್ಟೆಗಳಿಗೆ ಹೋಗಲು ಬೈಕ್ ಬೇಕಾಗಿದ್ದು, ಪೆಟ್ರೋಲ್ ಬೆಲೆಯನ್ನು ಕಡಿಮೆ ಮಾಡಬೇಕು’ ಎಂದು ಒತ್ತಾಯಿಸಿದರು.

‘ಮುಖ್ಯಮಂತ್ರಿಯ ತವರು ಜಿಲ್ಲೆಯ ಹಾನಗಲ್‌ನಲ್ಲಿ ಜನ ನಿಮಗೆ ಯಾವ ಮರ್ಯಾದೆ ಕೊಟ್ಟಿದ್ದಾರೆ ಎಂದು ಅರ್ಥ ಮಾಡಿಕೊಳ್ಳಿ. ದೇಶದ ಎಲ್ಲಾ ಕಡೆ ಜನ ಬಿಜೆಪಿಯನ್ನು ವಿರೋಧಿಸುತ್ತಿದ್ದಾರೆ. ಒಂದು ವರ್ಷವಾದರೂ ಕೇಂದ್ರ ಸರ್ಕಾರ ರೈತರ ಪ್ರತಿಭಟನೆಗೆ ಸ್ಪಂದಿಸುವ ಕೆಲಸ ಮಾಡುತ್ತಿಲ್ಲ. ಮುಂದೆ ಜನ ನಿಮಗೆ ತಕ್ಕ ಪಾಠ ಕಲಿಸುತ್ತಾರೆ’ ಎಂದರು.

ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಅಪ್ಪರಸನಹಳ್ಳಿ ಬಸವರಾಜಪ್ಪ, ಜಿಲ್ಲಾ ಉಪಾಧ್ಯಕ್ಷ ಸತೀಶ್, ಜಯಪ್ಪ, ಗವಿಯಣ್ಣ, ಶಿವಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT