ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂ.ಚಂದ್ರಪ್ಪ ಬಿಟ್ಟು ಕಾರ್ಯಕ್ರಮ ಕಾರ್ಯಕರ್ತರ ಆಕ್ರೋಶ

ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣ ಸ್ವಾಮಿಗೆ ಘೆರಾವ್ ಹಾಕಿ ಪ್ರತಿಭಟನೆ
Last Updated 13 ಅಕ್ಟೋಬರ್ 2020, 4:39 IST
ಅಕ್ಷರ ಗಾತ್ರ

ಹೊಳಲ್ಕೆರೆ: ಶಾಸಕ ಎಂ.ಚಂದ್ರಪ್ಪ ಅವರನ್ನು ಬಿಟ್ಟು ಕಾರ್ಯಕ್ರಮ ಆಯೋಜಿಸಿದ್ದಕ್ಕೆ ಬಿಜೆಪಿ ಕಾರ್ಯಕರ್ತರು ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣ ಸ್ವಾಮಿಗೆ ಘೆರಾವ್ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಸ್ನೇಹ ಕಂಫರ್ಟ್‌ನಲ್ಲಿ ಭಾನುವಾರ ನಡೆಯುತ್ತಿದ್ದ ಆಗ್ನೇಯ ಪದವೀಧರ ಕ್ಷೇತ್ರದ ಬಿಜೆಪಿ ಚುನಾವಣಾ ಪ್ರಚಾರ ಸಭೆಗೆ ಆಕ್ಷೇಪ ವ್ಯಕ್ತಪಡಿಸಿದ ಕೆಲವು ಕಾರ್ಯಕರ್ತರು ಆಯೋಜಕರನ್ನು ತರಾಟೆಗೆ ತೆಗೆದುಕೊಂಡರು.

‘ವಾಟ್ಸ್‌ಆ್ಯಪ್‌ನಲ್ಲಿ ಮೆಸೇಜ್ ಹಾಕಿದ ತಕ್ಷಣ ನಮ್ಮ ಕಾರ್ಯಕರ್ತರು ಸಭೆಗೆ ಬರುವುದಿಲ್ಲ. ನಮ್ಮ ಶಾಸಕರು ಹೇಳಿದರಷ್ಟೇ ಕಾರ್ಯಕರ್ತರು ಸೇರುತ್ತಾರೆ. ಅವರೇ ಇಲ್ಲಿನ ಶಕ್ತಿ. ಅವರನ್ನು ಬಿಟ್ಟು ಹೇಗೆ ಕಾರ್ಯಕ್ರಮ ಆಯೋಜಿಸಿದಿರಿ? ಶಾಸಕರ ಒಪ್ಪಿಗೆ ಪಡೆದು ಕಾರ್ಯಕ್ರಮ ಆಯೋಜಿಸಬೇಕಿತ್ತು. ಇಲ್ಲಿ ಚಂದ್ರಪ್ಪ ಅವರನ್ನು ನೋಡಿ ಮತ ಹಾಕುತ್ತಾರೆಯೇ ಹೊರತು ನಿಮ್ಮನ್ನು ನೋಡಿ ಅಲ್ಲ’ ಎಂದು ಬಿಜೆಪಿ ನಗರ ಘಟಕದ ಅಧ್ಯಕ್ಷ ಪ್ರವೀಣ್ ವಿಧಾನ ಪರಿಷತ್ ಸದಸ್ಯ ನಾರಾಯಣ ಸ್ವಾಮಿ ಹಾಗೂ ಅಭ್ಯರ್ಥಿ ಚಿನಾನಂದ ಗೌಡ ಅವರನ್ನು ತರಾಟೆಗೆ ತೆಗೆದುಕೊಂಡರು.

‘ಆಗ್ನೇಯ ಪದವೀಧರ ಕ್ಷೇತ್ರದ ವ್ಯಾಪ್ತಿ ದೊಡ್ಡದಿದ್ದು, 5 ಜಿಲ್ಲೆಗಳನ್ನು ಒಳಗೊಂಡಿದೆ. ಇದ್ದಕ್ಕಿದ್ದಂತೆ ಚುನಾವಣೆ ಘೋಷಿಸಿದ್ದು, ಮತದಾನದ ದಿನ ಹತ್ತಿರ ಇದೆ. ಎಲ್ಲ ಕಡೆ ಭೇಟಿ ನೀಡಲು ಸಮಯದ ಅಭಾವ ಇದೆ. ಮೊದಲೇ ಪ್ರವಾಸ ಆಯೋಜಿಸಿದ್ದರಿಂದ ಕಾರ್ಯಕ್ರಮ ನಡೆಸುತ್ತಿದ್ದೇವೆ. ಮತ್ತೊಮ್ಮೆ ಶಾಸಕರನ್ನು ಕರೆಸಿ ಕಾರ್ಯಕ್ರಮ ನಡೆಸಲಾಗುವುದು’ ಎಂದು ಅಭ್ಯರ್ಥಿ ಚಿದಾನಂದ ಗೌಡ ಕಾರ್ಯಕರ್ತರನ್ನು ಸಮಾಧಾನಪಡಿಸಿದರು.

‘ಶಾಸಕ ಎಂ.ಚಂದ್ರಪ್ಪ ಕಾರ್ಯ ನಿಮಿತ್ತ ಬೆಂಗಳೂರಿನಲ್ಲಿದ್ದಾರೆ. ಆದ್ದರಿಂದ ಅವರ ಅನುಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಸಬೇಕಾಯಿತು. ಟಿಕೆಟ್ ದೊರೆತ ನಂತರ ಶಾಸಕ ಚಂದ್ರಪ್ಪ ಅವರಿಗೆ ಕರೆ ಮಾಡಿ ಆಶೀರ್ವಾದ ಪಡೆದಿದ್ದೇನೆ. ನನಗೆ ಸಹಕಾರ ನೀಡುವುದಾಗಿ ಮಾತು ಕೊಟ್ಟಿದ್ದಾರೆ. ಇಲ್ಲಿ ಶಾಸಕರ ನೇತೃತ್ವದಲ್ಲೇ ಚುನಾವಣೆ ನಡೆಯಲಿದೆ’ ಎಂದು ಚಿದಾನಂದ ಗೌಡ ತಮ್ಮ ಭಾಷಣದಲ್ಲಿ ಸ್ಪಷ್ಟನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT