ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೌರಕಾರ್ಮಿಕರಿಗೆ ತಲುಪಿಲ್ಲ ಸೌಲಭ್ಯ; ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ.ಶಿವಣ್ಣ

ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ.ಶಿವಣ್ಣ ಬೇಸರ
Last Updated 18 ಸೆಪ್ಟೆಂಬರ್ 2021, 14:46 IST
ಅಕ್ಷರ ಗಾತ್ರ

ಚಿತ್ರದುರ್ಗ: ರಾಜ್ಯದ ಬೇರೆ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ಚಿತ್ರದುರ್ಗದಲ್ಲಿ ಪೌರಕಾರ್ಮಿಕರಿಗೆ ಸೌಲಭ್ಯಗಳು ಸರಿಯಾಗಿ ತಲುಪಿಲ್ಲ ಎಂದು ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ.ಶಿವಣ್ಣ ಬೇಸರ ವ್ಯಕ್ತಪಡಿಸಿದರು.

ಮ್ಯಾನುವಲ್‌ ಸ್ಕ್ಯಾವೇಜಿಂಗ್‌ ನಿಷೇಧ ಹಾಗೂ ಪರಿಹಾರ ಕಾಯ್ದೆಗೆ ಸಂಬಂಧಿಸಿದಂತೆ ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ‘ಪೌರಕಾರ್ಮಿಕರ ಅಗತ್ಯಗಳನ್ನು ಅಧಿಕಾರಿಗಳು ಪೂರೈಸಬೇಕು’ ಎಂದು ಸೂಚನೆ ನೀಡಿದರು.

‘ಪೌರಕಾರ್ಮಿಕರು ಒಂದೆರಡು ದಿನ ಸ್ವಚ್ಛತೆ ಕಾರ್ಯ ಕೈಗೊಳ್ಳದೇ ಇದ್ದರೆ ಪರಿಸ್ಥಿತಿ ಹೇಗಿರುತ್ತದೆ ಎಂಬುದನ್ನು ಊಹಿಸಿ. ಬಹುತೇಕ ಅಧಿಕಾರಿಗಳಿಗೆ ಪೌರಕಾರ್ಮಿಕರ ಕುರಿತು ತಾತ್ಸಾರವಿದೆ. ಸರಿಯಾದ ರೀತಿಯಲ್ಲಿ ನೇಮಕಾತಿ ಕೂಡ ನಡೆದಿಲ್ಲ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವ ಅಧಿಕಾರ ಆಯೋಗಕ್ಕೆ ಇದೆ’ ಎಂದು ಎಚ್ಚರಿಕೆ ನೀಡಿದರು.

‘ಗ್ರಾಮ ಪಂಚಾಯಿತಿ ಹಾಗೂ ಪುರಸಭೆ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಪೌರಕಾರ್ಮಿಕರಿಗೆ ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ. ಅಹಿತಕರ ಘಟನೆ ನಡೆದಾಗಲೂ ಉದಾಸೀನ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಜಿಲ್ಲಾ ಮಟ್ಟದ ಅಧಿಕಾರಿಗಳ ಗಮನ ಸೆಳೆಯುವ ಉದ್ದೇಶದಿಂದ ಇಂತಹ ಕಾರ್ಯಾಗಾರಗಳನ್ನು ನಡೆಸಲಾಗುತ್ತಿದೆ. ಪೌರಕಾರ್ಮಿಕರನ್ನು ಮಾನವೀಯತೆ ದೃಷ್ಟಿಯಿಂದ ಕಾಣಬೇಕು. ಅವರಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಒದಗಿಸಬೇಕು’ ಎಂದು ಸೂಚಿಸಿದರು.

‘ಮ್ಯಾನ್ಯುಯಲ್ ಸ್ಕ್ಯಾವೆಂಜಿಂಗ್ ಪದ್ಧತಿಯ ನಿರ್ಮೂಲನೆಗೆ ಸರ್ಕಾರ ಪ್ರಯತ್ನಿಸುತ್ತಿದೆ. ಯಂತ್ರ ಬಳಕೆಗೆ ಉತ್ತೇಜನ ನೀಡಲಾಗುತ್ತಿದೆ. 15 ಕಂಪನಿಗಳು ಹೊಸ ಯಂತ್ರಗಳನ್ನು ಅಭಿವೃದ್ಧಿಪಡಿಸುತ್ತಿವೆ. ಪೌರಕಾರ್ಮಿಕರು ಕೀಳರಿಮೆ ಬಿಟ್ಟು ಮುಖ್ಯವಾಹಿನಿಗೆ ಬರಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು’ ಎಂದು ಸಲಹೆ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಇ.ಬಾಲಕೃಷ್ಣ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ರಂಗಸ್ವಾಮಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸತೀಶ್ ರೆಡ್ಡಿ, ಸಮಾಜ ಕಲ್ಯಾಣಾಧಿಕಾರಿ ಪಿ.ಮಮತ ಇದ್ದರು.

***

ಪೌರ ಕಾರ್ಮಿಕರಿಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಈವರೆಗೆ 78 ಪ್ರಕರಣ ದಾಖಲಾಗಿವೆ. ಪ್ರಸಕ್ತ ವರ್ಷ 21 ಪ್ರಕರಣ ಬೆಳಕಿಗೆ ಬಂದಿವೆ. ಕಾಯ್ದೆ ಅನುಷ್ಠಾನಕ್ಕೆ ಬಂದು ಎಂಟು ವರ್ಷ ಕಳೆದರೂ ಅಧಿಕಾರಿಗಳಲ್ಲಿ ಅರಿವು ಮೂಡಿಲ್ಲ.

ಆರ್.ರಮಾ, ಕಾರ್ಯದರ್ಶಿ
ಸಫಾಯಿ ಕರ್ಮಚಾರಿ ಆರೋಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT