ಶುಕ್ರವಾರ, ಸೆಪ್ಟೆಂಬರ್ 25, 2020
25 °C
ರಾಮ ಮಂದಿರ ಭೂಮಿ ಪೂಜೆ

ಅಯೋಧ್ಯೆಗೆ ಪ್ರಯಾಣ ಬೆಳೆಸಿದ ಸ್ವಾಮೀಜಿ; ಕೋಟೆನಾಡಲ್ಲಿ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಆಯೋಜಿಸಿದ ರಾಮ ಮಂದಿರ ನಿರ್ಮಾಣದ ಭೂಮಿ ಪೂಜೆಯಲ್ಲಿ ಪಾಲ್ಗೊಳ್ಳಲು ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಮಂಗಳವಾರ ಪ್ರಯಾಣ ಬೆಳೆಸಿದರು.

ನಗರದ ಆನೆಬಾಗಿಲು ಸಮೀಪದ ಆಂಜನೇಯ, ವೆಂಕಟರಮಣ ಹಾಗೂ ಶ್ರೀರಾಮ ದೇಗುಲಕ್ಕೆ ಭೇಟಿ ನೀಡಿ ಸ್ವಾಮೀಜಿ ಪೂಜೆ ಸಲ್ಲಿಸಿದರು. ವಿಶ್ವಹಿಂದೂ ಪರಿಷತ್‌ ಹಾಗೂ ಬಜರಂಗದಳದ ಕಾರ್ಯಕರ್ತರು ಸ್ವಾಮೀಜಿ ಅವರನ್ನು ಬೀಳ್ಕೊಟ್ಟರು. ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಲಕ್ನೋಗೆ ಪ್ರಯಾಣ ಬೆಳೆಸಿದರು.

ಇದಕ್ಕೂ ಮುನ್ನ ಮುರುಘಾ ಮಠಕ್ಕೆ ಭೇಟಿ ನೀಡಿದ್ದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಶಿವಮೂರ್ತಿ ಮುರುಘಾ ಶರಣ ಆಶೀರ್ವಾದ ಪಡೆದರು. ಅಥಣಿಯ ಗಚ್ಚಿನಮಠದ ಶಿವಬಸವ ಸ್ವಾಮೀಜಿ, ಎಸ್‌ಜೆಎಂ ವಿದ್ಯಾಪೀಠದ ಸಿಇಒ ಎಂ.ಜಿ.ದೊರೆಸ್ವಾಮಿ ಹಾಜರಿದ್ದರು.

ಭೂಮಿ ಪೂಜೆಯಲ್ಲಿ ಪಾಲ್ಗೊಳ್ಳುವ ಆಹ್ವಾನಿತರಲ್ಲಿ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿಯೂ ಒಬ್ಬರು. ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ಸ್ವಾಮೀಜಿ ಅವರಿಗೆ ಅಧಿಕೃತ ಆಹ್ವಾನ ನೀಡಿದೆ.

ರಾಮ ಮಂದಿರದ ಭೂಮಿ ಪೂಜೆಗೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ ಚಿತ್ರದುರ್ಗದಲ್ಲಿಯೂ ಸಂಭ್ರಮ ಮನೆ ಮಾಡಿದೆ. ನಗರದ ಭೋವಿ ವಿದ್ಯಾರ್ಥಿನಿಲಯದ ಸಿದ್ಧರಾಮೇಶ್ವರ ದೇಗುಲದಲ್ಲಿ ಬುಧವಾರ ಶ್ರೀರಾಮ ತಾರಕ ಮಂತ್ರ ಪಠಣ ಹಾಗೂ ಗಣಹೋಮ ಆಯೋಜಿಸಲಾಗಿದೆ.

ಮನೆಗಳ ಎದುರು ರಂಗೋಲಿ ಹಾಕಿ ರಾಮನಿಗೆ ವಿಶೇಷ ಪೂಜೆ ಸಲ್ಲಿಸುವಂತೆ ವಿಶ್ವ ಹಿಂದೂ ಪರಿಷತ್‌ ಹಾಗೂ ಬಜರಂಗದಳ ಮನವಿ ಮಾಡಿವೆ. ಪ್ರತಿಯೊಬ್ಬರು ಭಗವಾಧ್ವಜವನ್ನು ಮನೆಯಲ್ಲಿ ಕಟ್ಟುವಂತೆ ಪ್ರಕಟಣೆಯಲ್ಲಿ ಕೋರಿಕೊಂಡಿವೆ. ತುರುವನೂರು ರಸ್ತೆಯ ಶ್ರೀರಾಮ ಹೋಟೆಲ್‌ನಲ್ಲಿ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.

ನಿಷೇಧಾಜ್ಞೆ ಜಾರಿ, ಮದ್ಯ ಮಾರಾಟ ನಿಷೇಧ
ರಾಮ ಮಂದಿರದ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರುವ ದಿನವಾದ ಬುಧವಾರ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ ಆದೇಶ ಹೊರಡಿಸಿದ್ದಾರೆ.

ನಸುಕಿನ 5ರಿಂದ ಮಧ್ಯರಾತ್ರಿ 12ರವರೆಗೆ ನಿಷೇಧಾಜ್ಞೆ ಜಾರಿಯಲ್ಲಿರಲಿದೆ. ಐದಕ್ಕಿಂತ ಹೆಚ್ಚು ಜನರು ಗುಂಪು ಸೇರುವಂತಿಲ್ಲ. ಮಾರಕಾಸ್ತ್ರ ಹಿಡಿದು ತಿರುಗಾಡುವಂತಿಲ್ಲ. ಯಾವುದೇ ರೀತಿಯ ಪ್ರಚೋದನಕಾರಿ ಭಾಷಣ, ಧ್ವನಿಮುದ್ರಣಗಳನ್ನು ಪ್ರಸಾರ ಮಾಡುವಂತಿಲ್ಲ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಆ.4ರ ಸಂಜೆ 6ರಿಂದ ಆ.6ರ ಬೆಳಿಗ್ಗೆ 6ರವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ. ಎಲ್ಲ ಬಗೆಯ ಮದ್ಯದಂಗಡಿಗಳನ್ನು ಮುಚ್ಚುವಂತೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು