ಮಾದಿಗ ಮುಖಂಡರ ಸಭೆಯಲ್ಲಿ ಗದ್ದಲ

7
ಕೈ–ಕೈ ಮಿಲಾಯಿಸಿದ ಬೆಂಬಲಿಗರು, ಬೆಂಗಳೂರಿಗೆ ತೆರಳಲು ನಿರ್ಧಾರ

ಮಾದಿಗ ಮುಖಂಡರ ಸಭೆಯಲ್ಲಿ ಗದ್ದಲ

Published:
Updated:

ಚಿತ್ರದುರ್ಗ: ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮದ ಲೋಕಾರ್ಪಣೆಯ ಸಿದ್ಧತೆಗಾಗಿ ಕರೆದಿದ್ದ ಮಾದಿಗ ಸಮುದಾಯದ ಜಿಲ್ಲಾ ಮುಖಂಡರ ಸಭೆಯಲ್ಲಿ ಮಾಜಿ ಸಚಿವ ಎಚ್‌.ಆಂಜನೇಯ ಹಾಗೂ ಕಾಂಗ್ರೆಸ್‌ ಜಿಲ್ಲಾ ಪ್ರಚಾರ ಸಮಿತಿಯ ಮುಖ್ಯಸ್ಥ ಜಿ.ಎಸ್‌.ಮಂಜುನಾಥ್‌ ಅವರ ಬೆಂಬಲಿಗರು ಕೈಕೈ ಮಿಲಾಯಿಸಿದರು.

ಇದರಿಂದ ಸಭೆ ಗೊಂದಲದ ಗೂಡಾಗಿ ಪರಿವರ್ತನೆಯಾಯಿತು. ಇಬ್ಬರು ನಾಯಕರ ಬೆಂಬಲಿಗರು ಪರ ವಿರೋಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನೂಕಾಟ, ತಳ್ಳಾಟ, ಮಾತಿನ ಚಕಮಕಿ ವಿಕೋಪಕ್ಕೆ ತಿರುಗುತ್ತಿರುವುದನ್ನು ಗಮನಿಸಿದ ಪೊಲೀಸರು ಮಧ್ಯಪ್ರವೇಶಿಸಿ, ಪರಿಸ್ಥಿತಿಯನ್ನು ನಿಯಂತ್ರಿಸಿದರು.

ಅಭಿವೃದ್ಧಿ ನಿಗಮಕ್ಕೆ ಆದಿಜಾಂಬವ ಎಂಬ ಹೆಸರಿಡುವ ಮುನ್ನ ಸಮುದಾಯದ ಅಭಿಪ್ರಾಯ ಕೇಳಿಲ್ಲ ಎಂಬುದು ಮಂಜುನಾಥ್‌ ಆಕ್ಷೇಪ. ಸಭೆಯನ್ನು ಉದ್ದೇಶಿಸಿ ಮಾತನಾಡಲು ಅವಕಾಶ ನೀಡುತ್ತಿಲ್ಲವೆಂದು ಆಕ್ರೋಶಗೊಂಡ ಅವರನ್ನು ಕೆಲವರು ಬೆಂಬಲಿಸಿದರು. ಗೊಂದಲದ ನಡುವೆಯೇ ಅಸಮಾಧಾನವನ್ನು ಹೊರಹಾಕಿ ಬೆಂಬಲಿಗರೊಂದಿಗೆ ಸಭೆಯನ್ನು ಬಹಿಷ್ಕರಿಸಿದರು.

ಜ.17ಕ್ಕೆ ಬೆಂಗಳೂರಿನಲ್ಲಿ ನಿಗದಿಯಾಗಿರುವ ಅಭಿವೃದ್ಧಿ ನಿಗಮದ ಉದ್ಘಾಟನಾ ಸಮಾರಂಭಕ್ಕೆ ಒಗ್ಗೂಡಿ ಹೋಗುವ ತೀರ್ಮಾನವನ್ನು ಸಭೆ ಕೈಗೊಂಡಿತು. ಸಭೆ ಬಹಿಷ್ಕರಿಸಿದ ಮಂಜುನಾಥ್‌ ಕೂಡ ಇದನ್ನು ಪುನರುಚ್ಚರಿಸಿದರು. ಭಿನ್ನಾಭಿಪ್ರಾಯಗಳನ್ನು ಮರೆತು ಸಮಾರಂಭದಲ್ಲಿ ಭಾಗವಹಿಸಲು ನಿರ್ಧರಿಸಲಾಯಿತು. ಸಮುದಾಯದ ಜನರನ್ನು ಕರೆದೊಯ್ಯಲು ವಾಹನದ ವ್ಯವಸ್ಥೆ ಮಾಡುವುದಾಗಿ ಮುಖಂಡರು ಭರವಸೆ ನೀಡಿದರು.

ಸ್ವಹಿತಾಸಕ್ತಿ ಇಲ್ಲ: ‘ಆದಿಜಾಂಬವ ಅಭಿವೃದ್ಧಿ ನಿಗಮ ಸ್ಥಾಪಿಸುತ್ತಿರುವುದರ ಹಿಂದೆ ಯಾವುದೇ ಹಿತಾಸಕ್ತಿಗಳಿಲ್ಲ. ಇದರಿಂದ ಮಾದಿಗ ಸಮುದಾಯಕ್ಕೆ ಅನುಕೂಲವಾಗಲಿದೆ’ ಎಂದು ಮಾಜಿ ಸಚಿವ ಎಚ್‌.ಆಂಜನೇಯ ತಿಳಿಸಿದರು.

‍‘ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿರುವ ಭೋವಿ ಹಾಗೂ ಲಂಬಾಣಿ ಸಮುದಾಯಕ್ಕೆ ಪ್ರತ್ಯೇಕ ನಿಗಮಗಳಿವೆ. ಸದಾಶಿವ ಆಯೋಗದ ವರದಿ ಜಾರಿಗೆ ವಿಳಂಬ ಆಗುತ್ತಿರುವುದರಿಂದ ಮಾದಿಗ ಸಮುದಾಯಕ್ಕೆ ಪ್ರತ್ಯೇಕ ನಿಗಮ ಸ್ಥಾಪಿಸಬೇಕು ಎಂದು ಸರ್ಕಾರದ ಮೇಲೆ ಒತ್ತಡ ಹೇರಲಾಗಿತ್ತು. ಮೋಚಿ, ಸಾಮಗಾರ, ದಕ್ಕಲಿಗ ಸೇರಿ 16 ಉಪಜಾತಿಗಳು ಇದರ ಪ್ರಯೋಜನ ಪಡೆಯಲಿವೆ’ ಎಂದರು.

‘ನಿಗಮದ ಸೌಲಭ್ಯಗಳನ್ನು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಸುಳ್ಳು ಹಾಗೂ ನಕಲಿ ಜಾತಿ ಪ್ರಮಾಣ ಪತ್ರಕ್ಕೆ ಕಡಿವಾಣ ಹಾಕುವ ಅಗತ್ಯವಿದೆ. ‘ಮೀಸಲು ಕಾವಲು ಸಮಿತಿ’ ನಿರ್ಮಿಸಿಕೊಂಡು ಫಲಾನುಭವಿಗಳ ಹಿತಾಸಕ್ತಿ ಕಾಪಾಡಬೇಕು’ ಎಂದು ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ನರಸಿಂಹರಾಜು, ಮುಖಂಡರಾದ ಶಂಕರ್‌, ದುರುಗೇಶಪ್ಪ, ಹುಲ್ಲೂರು ಕುಮಾರಸ್ವಾಮಿ, ಈಶ್ವರಪ್ಪ, ಅಂಗಡಿ ಮಂಜಣ್ಣ, ಸಮರ್ಥ ರಾಯ್‌ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !