ಶುಕ್ರವಾರ, ಸೆಪ್ಟೆಂಬರ್ 24, 2021
26 °C
ಮಡಿವಾಳ ಗುರುಪೀಠದ ಬಸವ ಮಾಚಿದೇವ ಸ್ವಾಮೀಜಿ

ಶ್ರಾವಣದಲ್ಲಿ ‘ಮನೆ–ಮನೆಗೆ ಮಾಚಿದೇವ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಮಾಚಿದೇವರ ಜೀವನ, ಸಾಧನೆ ಮತ್ತು ತತ್ವದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಮನೆ–ಮನೆಗೆ ಮಾಚಿದೇವ’ ಎಂಬ ಕಾರ್ಯಕ್ರಮವನ್ನು ಶ್ರಾವಣಮಾಸದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಡಿವಾಳ ಗುರುಪೀಠದ ಬಸವ ಮಾಚಿದೇವ ಸ್ವಾಮೀಜಿ ತಿಳಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಡಿವಾಳ ಮಾಚಿದೇವರ ತತ್ವ ಮತ್ತು ಸಿದ್ಧಾಂತಗಳನ್ನು ಅರಿತು ಸಮಾಜದ ಮುಖ್ಯವಾಹಿನಿಗೆ ಸೇರಬೇಕು ಎಂಬುದು ಮಠದ ಆಶಯ. ಚಿತ್ರದುರ್ಗದಲ್ಲಿ ನೆಲೆಗೊಂಡ ಮಠ ಸಮಾಜಮುಖಿ ಚಟುವಟಿಕೆಗಳನ್ನು ಹಲವು ವರ್ಷಗಳಿಂದ ಮಾಡಿಕೊಂಡು ಬರುತ್ತಿದೆ’ ಎಂದು ಹೇಳಿದರು.

‘ಬೆಂಗಳೂರು, ಕಲಬುರ್ಗಿ, ಬೀದರ್‌, ಯಾದಗಿರಿ ಹಾಗೂ ಹಾವೇರಿಯಲ್ಲಿ ಮಾಚಿದೇವರ ದರ್ಶನ ಎಂಬ ಕಾರ್ಯಕ್ರಮ ನಡೆಸಲಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಮನೆ–ಮನೆಗೆ ಮಾಚಿದೇವ ಕಾರ್ಯಕ್ರಮವನ್ನು ಶ್ರಾವಣದಲ್ಲಿ ಆಯೋಜಿಸಿದೆ. ಆ.9ರಿಂದ ಸೆ.5ರವರೆಗೆ ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲಿ ಐದು ದಿನ ಭಕ್ತರ ಮನೆಗಳಿಗೆ ಭೇಟಿ ನೀಡಲಾಗುವುದು’ ಎಂದು ಮಾಹಿತಿ ನೀಡಿದರು.

‘ಚಳ್ಳಕೆರೆ ತಾಲ್ಲೂಕಿನ ನಗರಂಗೆರೆಯಲ್ಲಿ ಆ.9ರಂದು ಬೆಳಿಗ್ಗೆ 10.30ಕ್ಕೆ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ಕಬೀರಾನಂದ ಆಶ್ರಮದ ಶಿವಲಿಂಗಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಶಾಸಕ ಟಿ.ರಘುಮೂರ್ತಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ತಾಲ್ಲೂಕು ಮಡಿವಾಳ ಸಂಘದ ಅಧ್ಯಕ್ಷ ಎನ್‌.ಮಂಜುನಾಥ್‌ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರೊ.ಸಿ.ಕೆ.ಮಹೇಶ್‌ ಉಪನ್ಯಾಸ ನೀಡಲಿದ್ದಾರೆ’ ಎಂದು ವಿವರಿಸಿದರು.

‘ಆ.9ರಿಂದ 13ರವರೆಗೆ ಚಳ್ಳಕೆರೆ, ಆ.14ರಿಂದ 18ರವರೆಗೆ ಮೊಳಕಾಲ್ಮುರು, ಆ.19ರಿಂದ 23ರವರೆಗೆ ಹಿರಿಯೂರು , ಆ.24ರಿಂದ 28ರವರೆಗೆ ಹೊಸದುರ್ಗ, ಆ.29ರಿಂದ ಸೆ.2ರವರೆಗೆ ಹೊಳಲ್ಕೆರೆ ಹಾಗೂ ಸೆ.3ರಿಂದ 5ರವರೆಗೆ ಚಿತ್ರದುರ್ಗ ತಾಲ್ಲೂಕಿನ ಹಲವು ಗ್ರಾಮಗಳಿಗೆ ಭೇಟಿ ನೀಡಲಾಗುವುದು. ಸೆ.5ರಂದು ಮಠದ ಆವರಣದಲ್ಲಿ ಸಮಾರೋಪ ಸಮಾರಂಭ ಹಮ್ಮಿಕೊಳ್ಳಲಾಗಿದ್ದು, ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಸಾನ್ನಿಧ್ಯ ವಹಿಸಲಿದ್ದಾರೆ. ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಪಾಲ್ಗೊಳ್ಳಲಿದ್ದಾರೆ’ ಎಂದರು.

ಜಿಲ್ಲಾ ಮಡಿವಾಳರ ಸಂಘದ ಗೌರವಾಧ್ಯಕ್ಷ ಡಾ.ವಿ.ಬಸವರಾಜು ಮಾತನಾಡಿ, ‘ಮಡಿವಾಳ ಸಮುದಾಯದಲ್ಲಿ ಶೈವ ಹಾಗೂ ವೈಷ್ಣವ ಪರಂಪರೆಯನ್ನು ಬಹುತೇಕರೂ ರೂಢಿಸಿಕೊಂಡಿದ್ದಾರೆ. ಮಾಚಿದೇವರು ನಡೆದು ಬಂದ ಬಸವ ಪರಂಪರೆಯನ್ನು ಮರೆತುಬಿಟ್ಟಿದ್ದಾರೆ. ಈ ಬಸವಪರಂಪರೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಶ್ರಾವಣ ಮಾಸದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದರು.

ಸಮುದಾಯದ ಮುಖಂಡರಾದ ಬಿ.ರಾಮಪ್ಪ, ಕೆ.ಆರ್‌.ಮಂಜುನಾಥ್‌, ಬಿ.ಲಕ್ಷ್ಮಣ್‌, ಕೆ.ನಂಜುಂಡಸ್ವಾಮಿ, ಟಿ.ರುದ್ರಮುನಿ, ಟಿ.ಪರಶುರಾಮ ಇದ್ದರು.

ಎಸ್‌ಸಿ ಪಟ್ಟಿಗೆ ಆಗ್ರಹ

ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರ್ಪಡೆ ಮಾಡುವಂತೆ ಹಲವು ದಶಕಗಳಿಂದ ಒತ್ತಾಯಿಸುತ್ತಿದ್ದೇವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಸಮುದಾಯದ ಬೇಡಿಕೆ ಮುಂದಿಡುತ್ತೇವೆ ಎಂದು ಬಸವ ಮಾಚಿದೇವ ಸ್ವಾಮೀಜಿ ತಿಳಿಸಿದರು.

‘ಬಿ.ಎಸ್‌.ಯಡಿಯೂರಪ್ಪ ಅವರು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅನ್ನಪೂರ್ಣಮ್ಮ ಆಯೋಗ ನೇಮಕ ಮಾಡಿದ್ದರು. ಕುಲಶಾಸ್ತ್ರೀಯ ಅಧ್ಯಯನದ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಆದರೆ, ಈವರೆಗೆ ಇದು ಅನುಷ್ಠಾನಕ್ಕೆ ಬಂದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಶಾಸಕರ ಹೇಳಿಕೆಗೆ ಆಕ್ರೋಶ

ಮಡಿವಾಳ ಸಮುದಾಯವನ್ನು ಅವಹೇಳನ ಮಾಡುವ ರೀತಿಯಲ್ಲಿ ಮಾತನಾಡಿದ ಸುರಪುರದ ಶಾಸಕ ರಾಜೂಗೌಡ ಅವರು ಹೇಳಿಕೆಯನ್ನು ಹಿಂಪಡೆಯಬೇಕು ಎಂದು ಜಿಲ್ಲಾ ಮಡಿವಾಳರ ಸಂಘದ ಗೌರವಾಧ್ಯಕ್ಷ ಡಾ.ವಿ.ಬಸವರಾಜು ಆಗ್ರಹಿಸಿದರು.

‘ಸಚಿವಸ್ಥಾನ ಕೈತಪ್ಪಿದ್ದಕ್ಕೆ ಆಕ್ರೋಶಗೊಂಡು ಮಾತನಾಡುವ ಭರದಲ್ಲಿ ಶಾಸಕರು ನೀಡಿದ ಹೇಳಿಕೆ ಮಡಿವಾಳ ಸಮುದಾಯದ ಭಾವನೆಗೆ ಧಕ್ಕೆಯುಂಟು ಮಾಡಿದೆ. ಸಾಂವಿಧಾನಿಕ ಹುದ್ದೆಯಲ್ಲಿರುವವರು ಪ್ರಜ್ಞಾವಂತಿಕೆಯಿಂದ ನಡೆದುಕೊಳ್ಳಬೇಕು. ಇಂತಹ ಉದ್ಧಟನದ ಹೇಳಿಕೆ ನೀಡಿದರೆ ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಅನ್ನಪೂರ್ಣಮ್ಮ ವರದಿ ಜಾರಿಗೆ ಸರ್ಕಾರವನ್ನು ಕೋರಿಕೊಳ್ಳುತ್ತೇವೆ. ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸದೇ ಇದ್ದರೆ ಹೋರಾಟದ ರೂಪುರೇಷ ಬದಲಾಗುತ್ತದೆ. ಪಾದಯಾತ್ರೆ ಕೊನೆಯ ಆಸ್ತ್ರ.

- ಬಸವ ಮಾಚಿದೇವ ಸ್ವಾಮೀಜಿ, ಮಡಿವಾಳ ಗುರುಪೀಠ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.