ಮಹಾಂತ ಅಪ್ಪಗಳು ಬಸವಣ್ಣನವರ ನೈಜ ಅನುಯಾಯಿ

7
ಮಹಾಂತ ಅಪ್ಪಗಳ ಸ್ಮರಣೋತ್ಸವದಲ್ಲಿ ಮಾಜಿ ಸಚಿವ ಎಚ್‌. ಆಂಜನೇಯ

ಮಹಾಂತ ಅಪ್ಪಗಳು ಬಸವಣ್ಣನವರ ನೈಜ ಅನುಯಾಯಿ

Published:
Updated:
ಮೊಳಕಾಲ್ಮುರು ತಾಲ್ಲೂಕಿನ ಸಿದ್ದಯ್ಯನಕೋಟೆಯಲ್ಲಿ ಸೋಮವಾರ ನಡೆದ ಡಾ.ಮಹಾಂತ ಅಪ್ಪಗಳ ಸ್ಮರಣೋತ್ಸವ ಉದ್ಘಾಟಿಸಿ ಮಾಜಿ ಸಚಿವ ಎಚ್. ಆಂಜನೇಯ ಮಾತನಾಡಿದರು.

ಮೊಳಕಾಲ್ಮುರು: ಜೀವನದುದ್ದಕ್ಕೂ ಬಸವಣ್ಣನವರ ಆದರ್ಶಗಳನ್ನು ಮೈಗೂಡಿಸಿಕೊಳ್ಳುವ ಜತೆಗೆ ಅನುಸರಿಸುವ ಮೂಲಕ ಜ್ಯಾತ್ಯತೀತ ಸಮಾಜ ನಿರ್ಮಾಣಕ್ಕೆ ತನ್ನದೇ ಆದ ಕೊಡುಗೆ ನೀಡಿದ ಇಳಕಲ್‌ ವಿಜಯ ಮಹಾಂತೇಶ್ವರ ಮಠದ ಡಾ. ಮಹಾಂತ ಅಪ್ಪಗಳು ಬಸವಣ್ಣನವರ ನೈಜ ಅನುಯಾಯಿಯಾಗಿ ಹೊರಹೊಮ್ಮಿದರು ಎಂದು ಮಾಜಿ ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಹೇಳಿದರು.

ತಾಲ್ಲೂಕಿನ ಸಿದ್ದಯ್ಯನಕೋಟೆ ಶಾಖಾಮಠದಲ್ಲಿ ಸೋಮವಾರ ನಡೆದ ಡಾ. ಮಹಾಂತ ಅಪ್ಪಗಳ ಸ್ಮರಣೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ಸಂಸ್ಕಾರ ರಹಿತ, ಜಾತಿ ಬೇಧ ಮಾಡುವವರು ಸ್ವಾಮೀಜಿ ಆಗಬಾರದು ಎಂಬುದು ಅಪ್ಪಗಳ ಆಸೆಯಾಗಿತ್ತು. ವಿರೋಧದ ನಡುವೆಯೂ ಸಿದ್ದಯ್ಯನಕೋಟೆ ಹಾಗೂ ಚಿತ್ತರಗಿ ಸಂಸ್ಥಾನ ಮಠಕ್ಕೆ ಅನ್ಯ ಕೋಮಿನ ಸ್ವಾಮೀಜಿಗಳನ್ನು ನೇಮಕ ಮಾಡಿದರು. ಬಸವ ತತ್ವಗಳನ್ನು ಅಳವಡಿಸಿಕೊಂಡಿದ್ದ ಅವರು ಕಪ್ಪುಚುಕ್ಕೆ ರಹಿತ ಮಾದರಿ ಜೀವನ ನಡೆಸಿದರು ಎಂದು ಹೇಳಿದರು.

ಚಿತ್ರದುರ್ಗ ಮುರುಘಾಮಠದ ಡಾ.ಶಿವಮೂರ್ತಿ ಮುರುಘಾ ಶರಣರು ಮಾತನಾಡಿ, ‘ಸಮಾಜದಲ್ಲಿ ಇಂದು ಸಿಕ್ಕಾಪಟ್ಟೆ ಧರ್ಮ ಪ್ರವಚನಕಾರರನ್ನು ಕಾಣಬಹುದು. ಆದರೆ ಬೇಕಿರುವುದು ಸಮಾಜ ಪರಿವರ್ತನಾಕಾರರು. ಪ್ರವಚನ ಮಾಡುವುದು ಸುಲಭ ಅದರೆ ಅದನ್ನು ಕಾರ್ಯರೂಪಕ್ಕೆ ತಂದಲ್ಲಿ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗುತ್ತೇವೆ’ ಎಂದು ಹೇಳಿದರು.

ಜಾಗತೀಕರಣ ಸವಾಲು, ಸಾಮಾಜಿಕ ಪಿಡುಗು ವಿರುದ್ಧ ಹೋರಾಟ ಮಾಡದವರು ಕಾಲಗರ್ಭದಲ್ಲಿ ಹೂತು ಹೋಗುತ್ತಾರೆ. ಸಾಮಾಜಿಕ ನ್ಯಾಯಕ್ಕಾಗಿ ಜೀವನ ಮುಡುಪಾಗಿಟ್ಟ ಬಸವಣ್ಣ ಅಮರರಾದರು. ಪ್ರವಚನ ಮಾಡುವ ಎಲ್ಲರೂ ಪರಿವರ್ತನೆಯಾದಲ್ಲಿ ನಮ್ಮ ರಾಜ್ಯ ಕಲ್ಯಾಣರಾಜ್ಯವಾಗಿ ಹೊರಹೊಮ್ಮಲಿದೆ ಎಂದರು.

ಶಾಸಕ ಬಿ. ಶ್ರೀರಾಮುಲು ಮಾತನಾಡಿ, ‘ಶಿಕ್ಷಣ ಕ್ಷೇತ್ರದಲ್ಲಿ ಮಾದರಿ ಸಾಧನೆ ಮಾಡಿದ ಮಹಾಂತ ಅಪ್ಪಗಳು ಮೊಳಕಾಲ್ಮುರು ತಾಲ್ಲೂಕಿನಲ್ಲಿ ಸ್ಥಾಪಿಸಿರುವ ಶಾಖಾಮಠ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು. ಅಪ್ಪಗಳ ಆದರ್ಶಗಳನ್ನು ಪಾಲಿಸುವ ಮೂಲಕ ಅವರಿಗೆ ಗೌರವ ಸಲ್ಲಿಸಬೇಕು’ ಎಂದು ಹೇಳಿದರು.

ಬಸವಲಿಂಗ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಚಿತ್ತರಗಿ ಸಂಸ್ಥಾನ ಮಠದ ಗುರುಮಹಾಂತ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಪಾಂಡೋಮಟ್ಟಿ ಮಠದ ಡಾ. ಗುರುಬಸವ ಸ್ವಾಮೀಜಿ, ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮ ಸ್ವಾಮೀಜಿ, ಕುಂಟಿಚಿಗ ಸಂಸ್ಥಾನ ಪೀಠದ ಡಾ.ಶಾಂತವೀರ ಸ್ವಾಮೀಜಿ, ಛಲವಾದಿ ಪೀಠದ ಬಸವ ನಾಗೀದೇವ ಸ್ವಾಮೀಜಿ, ದಾವಣಗೆರೆ ಬಸವ ಬಳಗದ ಹುಚ್ಚಪ್ಪ ಮಾಸ್ತರ್, ಎಚ್‌.ಎಂ. ಸ್ವಾಮಿ, ಸ್ಥಳೀಯ ಮಠದ ವಸಂತಮಾಸ್ತರ್‌, ಜಿ.ಎಸ್‌. ವಸಂತಮಾಸ್ತರ್‌, ಪ.ಮ. ಗುರುಲಿಂಗಯ್ಯ, ಬಿ.ಎಸ್‌. ವೀರಭದ್ರಪ್ಪ ಉಪಸ್ಥಿತರಿದ್ದರು. ಶಿಕ್ಷಕ ಕರಿಬಸಪ್ಪ ಸ್ವಾಗತಿಸಿದರು, ಮಠದ ಕಾರ್ಯದರ್ಶಿ ಪಿ.ಆರ್. ಕಾಂತರಾಜ್‌ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !